ಮುಂಬೈ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿ-ಶಿಂಧೆ ನೇತೃತ್ವದ ಶಿವಸೇನಾ ಮೈತ್ರಿಕೂಟವು 118 ಸ್ಥಾನಗಳನ್ನು ಪಡೆದು ಬಹುಮತ ಸಾಧಿಸಿದೆ. 30 ವರ್ಷಗಳ ಶಿವಸೇನಾ ಆಳ್ವಿಕೆಗೆ ಅಂತ್ಯವಾಗಿದ್ದು, ಮಹಾರಾಷ್ಟ್ರದ ರಾಜಕೀಯದಲ್ಲಿ ಹೊಸ ತಿರುವು ನೀಡಿದೆ. ಈ ಚುನಾವಣೆಯಲ್ಲಿ ಶತ್ರುಗಳು ಮಿತ್ರರಾಗಿದ್ದು, ಮತದಾರರು ಕೈ ಹಿಡಿಯಲಿಲ್ಲ. ಬಿಜೆಪಿ-ಶಿಂಧೆ ಮೈತ್ರಿಕೂಟವು 29 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾಬಲ್ಯ ಮೆರೆದಿದೆ.
ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೋರೇಷನ್ (ಬಿಎಂಸಿ) ಚುನಾವಣೆ ಅಂದರೇನೆ ಹಾಗೆ. ಅದು ದೇಶದ ಗಮನ ಸೆಳೆಯುತ್ತದೆ. ಯಾಕೆ ಗೊತ್ತಾ? ಮುಂಬೈ ದೇಶದ ಆರ್ಥಿಕ ರಾಜಧಾನಿ. ಈ ಮಹಾನಗರ ಪಾಲಿಕೆಯ ವಾರ್ಷಿಕ ಬಜೆಟ್ ಗೋವಾ, ಹಿಮಾಚಲಪ್ರದೇಶ, ಅರುಣಾಚಲ ಪ್ರದೇಶ ರಾಜ್ಯಗಳಿಗಿಂತ ಅಧಿಕ. ವಾಣಿಜ್ಯ ನಗರಿಯ ಈ ಪಾಲಿಕೆಯ ಅಧಿಪತ್ಯಕ್ಕಾಗಿ ಜಿದ್ದಾಜಿದ್ದಿ. ಕಳೆದ 30 ವರ್ಷಗಳ ಶಿವಸೇನೆಯ ಆಳ್ವಿಕೆ ಈಗ ಅಂತ್ಯ. ಆಡಳಿತ ಸೂತ್ರ ಹಿಡಿಯಲು ಬಿಜೆಪಿ -ಏಕನಾಥ ಶಿಂಧೆ ನೇತೃತ್ವದ ಶಿವಸೇನಾ ಸಜ್ಜು.
ಬಿಎಂಸಿಗೆ ಜನವರಿ 15 ರಂದು ಚುನಾವಣೆ ನಡೆದು ಮರುದಿನವೇ ಫಲಿತಾಂಶ ಪ್ರಕಟ. ಈ ಚುನಾವಣೆಯಲ್ಲಿ ಶತ್ರುಗಳು ಮಿತ್ರರಾಗಿದ್ದರು. ಮಿತ್ರರು ಎದುರಾಳಿಗಳಾಗಿದ್ದರು. ಈ ಎಲೆಕ್ಷನ್ ಮಹಾರಾಷ್ಟ್ರದ ಎರಡು ಬಲಿಷ್ಠ ರಾಜಕೀಯ ಕುಟುಂಬಗಳನ್ನು ಒಂದು ಮಾಡಿತ್ತು. ಇವರು ಅಧಿಕಾರಕ್ಕಾಗಿ ಕೈಜೋಡಿಸಿದರು. ಆದರೆ, ಮತದಾರರು ಕೈ ಹಿಡಿಯಲಿಲ್ಲ. ಆ ಎರಡು ಕುಟುಂಬಗಳು ಎನ್‌ಸಿಪಿಯ ಶರದ್ ಪವಾರ್. ಮತ್ತೊಂದು ಶಿವಸೇನೆಯ ಉದ್ಧವ ಠಾಕ್ರೆ.
ಬಿಎಂಸಿ 227 ಸದಸ್ಯ ಬಲದ ಸ್ಥಳೀಯ ಸಂಸ್ಥೆ. ಒಟ್ಟು ಮತದಾರರ ಸಂಖ್ಯೆ ಸುಮಾರು 1.24 ಕೋಟಿ. ಭಾರತದ ಅತಿ ಶ್ರೀಮಂತ ಸ್ಥಳೀಯ ಸಂಸ್ಥೆ. ಮುಂಬೈ ಪಾಲಿಕೆಯ ವಾರ್ಷಿಕ ಬಜೆಟ್ 2025-26ನೇ ಸಾಲಿನಲ್ಲಿ 74,427 ಕೋಟಿ ರೂಪಾಯಿ. ಈ ಚುನಾವಣೆಯಲ್ಲಿ ಬಿಜೆಪಿ -ಶಿಂಧೆ ನೇತೃತ್ವದ ಶಿವಸೇನಾ ಮೈತ್ರಿಕೂಟ 118 ಸ್ಥಾನಗಳನ್ನು ಪಡೆದು ಬಹುಮತ ಸಾಧಿಸಿದೆ. ಇಡೀ ಮಹಾರಾಷ್ಟ್ರದಲ್ಲಿ ಬಿಜೆಪಿ -ಶಿಂಧೆ ಶಿವಸೇನಾ 29 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇಪ್ಪತ್ತನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಪ್ರಾಬಲ್ಯ ಮೆರೆದಿದೆ.
ಬಿಜೆಪಿ ನೇತೃತ್ವದ ಮಹಾಯುತಿ ಸರಕಾರದಲ್ಲಿ ಎನ್‌ಸಿಪಿಯ ಅಜಿತ್ ಪವಾರ್ ಉಪ ಮುಖ್ಯಮಂತ್ರಿ. ಅವರು ಈ ಚುನಾವಣೆಯಲ್ಲಿ ಕಾಂಗ್ರೆಸ್ ಸಖ್ಯದಲ್ಲಿರುವ ತಮ್ಮ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಜೊತೆ ಸ್ಥಾನ ಹೊಂದಾಣಿಕೆ ಮಾಡಿಕೊಂಡರು. ಸರಕಾರದಲ್ಲಿ ತನ್ನ ದೋಸ್ತಿ ಪಕ್ಷಗಳಾದ ಬಿಜೆಪಿ ಹಾಗೂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಎದುರು ಕಣಕ್ಕಿಳಿದರು. ಅಜಿತ್ ಪವಾರ್ ಅವರ ಈ ದ್ವಂದ್ವ ನಿಲುವಿಗೆ ಮತದಾರ ಪಾಠ ಕಲಿಸಿದ್ದಾನೆ.
ಇನ್ನು ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆ ನೇತೃತ್ವದ ಶಿವಸೇನೆಯು ರಾಜ್ ಠಾಕ್ರೆ ನಾಯಕತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನಾ (ಎಂಎನ್‌ಎಸ್) ಜೊತೆ ಮೈತ್ರಿ ಸಾಧಿಸಿತು. ಉದ್ಧವ ಠಾಕ್ರೆ ಹಾಗೂ ರಾಜ್ ಠಾಕ್ರೆ ಸಹೋದರ ಸಂಬಂಧಿಗಳು. ತನ್ನ ಚಿಕ್ಕಪ್ಪ ಬಾಳಾ ಸಾಹೇಬ್ ಠಾಕ್ರೆ ಅವರು ಬದುಕಿರುವಾಗಲೇ ರಾಜ್ ಠಾಕ್ರೆ 2006ರಲ್ಲಿ ಶಿವಸೇನೆಯಿಂದ ಹೊರ ಬಂದು ಎಂಎನ್‌ಎಸ್ ಕಟ್ಟಿದವರು. ಬಾಳಾ ಠಾಕ್ರೆ ಅವರಿಗೂ ಉದ್ಧವ್ ಹಾಗೂ ರಾಜ್ ಅವರನ್ನು ಒಗ್ಗೂಡಿಸಲು ಆಗಿರಲಿಲ್ಲ. ಈಗ ಅಧಿಕಾರಕ್ಕಾಗಿ ಒಂದಾದರು. ಆದರೆ, ಮತದಾರ ಅಧಿಕಾರ ಕೊಡಲಿಲ್ಲ.
ಕಾಂಗ್ರೆಸ್ ನೇತೃತ್ವದ ಮಹಾವಿಕಾಸ ಅಘಾಡಿ ಪಕ್ಷಗಳು ಪ್ರತ್ಯೇಕವಾಗಿ ಸೆಣಸಾಡಿದವು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಒಟ್ಟಿಗೆ ಇದ್ದ ಪಕ್ಷಗಳು ಈಗ ಬೇರೆಯಾಗಿದ್ದವು. ಉದ್ಧವ ಠಾಕ್ರೆ ಅವರು ರಾಜ್ ಠಾಕ್ರೆ ಜೊತೆ ಮೈತ್ರಿ ಮಾಡಿಕೊಂಡಿದ್ದನ್ನು ಕಾಂಗ್ರೆಸ್ ವಿರೋಧಿಸಿತು. ರಾಜ್ ಠಾಕ್ರೆ ಜೊತೆ ಕೈಜೋಡಿಸಿದರೆ ದೇಶದ ಕೆಲವು ರಾಜ್ಯಗಳಲ್ಲಿ ಪಕ್ಷಕ್ಕೆ ಹಿನ್ನಡೆಯಾಗಬಹುದೆಂಬ ಕಳವಳ ಕಾಂಗ್ರೆಸ್ಸಿಗೆ.
ಮುಂಬೈ ಪಾಲಿಕೆಯ ಈ ಚುನಾವಣೆಯಲ್ಲಿ ಬಿಜೆಪಿ 89, ಶಿಂಧೆ ಶಿವಸೇನಾ 29, ಶಿವಸೇನಾ (ಉದ್ಧವ ಠಾಕ್ರೆ) 65, ಎಂಎನ್‌ಎಸ್ 6, ಕಾಂಗ್ರೆಸ್ 24, ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ 8, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 3, ಎನ್‌ಸಿಪಿ (ಶರದ್ ಪವಾರ್ ) 1, ಸಮಾಜವಾದಿ ಪಕ್ಷ 2 ಸ್ಥಾನಗಳನ್ನು ಪಡೆದಿವೆ. ಬಿಜೆಪಿ-ಶಿಂಧೆ ಶಿವಸೇನಾ ಮೈತ್ರಿಕೂಟ ಹಾಗೂ ಎದುರಾಳಿಗಳ ಮಧ್ಯೆ 9 ಸ್ಥಾನಗಳ ಅಂತರ.
ಮುಂಬೈ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಮತ್ತೊಂದು ಕುತೂಹಲದ ಸಂಗತಿ. ಅದು ಹೈದರಾಬಾದಿನ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಸಾಧನೆ. ಕಳೆದ ಬಾರಿ ಎರಡು ಸ್ಥಾನಗಳು. ಈ ಸಲ ಎಂಟರಲ್ಲಿ ಗೆಲುವು. ಅನೇಕ ಕಡೆ ಕಾಂಗ್ರೆಸ್ ಸೋಲಿಗೆ ಕಾರಣ. ಮುಸ್ಲಿಂಮರ ಮತಗಳನ್ನು ಕಾಂಗ್ರೆಸ್ ನಿಂದ ಸೆಳೆಯಲು ಯಶಸ್ವಿ. ಇದು ಕಾಂಗ್ರೆಸ್ಸಿಗೆ ಆತಂಕ.
ಮಹಾರಾಷ್ಟ್ರದ ಎಲ್ಲ ಪ್ರಾಂತ್ಯಗಳಲ್ಲೂ ಕೇಸರಿ ಪಕ್ಷ ತನ್ನ ಬಾಹುವನ್ನು ಈಗ ಚಾಚಿಕೊಂಡಿದೆ. ಈಗ ಆ ರಾಜ್ಯದ ಅತಿ ದೊಡ್ಡ ಪಕ್ಷ. ಮುಂಬೈ, ಪುಣೆ, ನಾಗಪುರ, ನಾಸಿಕ್, ನವಿಮುಂಬೈ ಹೀಗೆ ಕೆಲವು ನಗರಗಳಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷ. ಮಹಾರಾಷ್ಟ್ರದ 29 ಮುನಿಸಿಪಲ್ ಕಾರ್ಪೋರೇಷನ್‌ಗಳ ಒಟ್ಟು 2,869 ಸೀಟುಗಳಲ್ಲಿ ಬಿಜೆಪಿ ಪಾಲು ಸುಮಾರು 1,425 ಸ್ಥಾನಗಳು. ಶೇಕಡಾ 50ಕ್ಕಿಂತಲೂ ಸ್ವಲ್ಪ ಕಡಿಮೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಡಬ್ಬಲ್ ಎಂಜಿನ್ ಅಲ್ಲ, ತ್ರಿಬಲ್ ಎಂಜಿನ್ ಘೋಷಣೆ ಮಾಡಿತ್ತು. ಕಮಲ ಪಕ್ಷ ಒಂದು ಕಾಲದಲ್ಲಿ ಶಿವಸೇನಾದ ಕಿರಿಯ ಪಾಲುದಾರ. ಇವತ್ತು ತನ್ನ ಮೈತ್ರಿಕೂಟದ ಹಿರಿಯಣ್ಣ. ಮುಂಬೈರಾಜಕಾರಣವೇ ಈಗ ಶಿವಸೇನಾದಿಂದ ಬಿಜೆಪಿ ಕಡೆಗೆ ಹೊರಳು. ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳು, ವಿಧಾನಸಭೆ, ಲೋಕಸಭೆಗಳಲ್ಲಿ ಬಿಜೆಪಿಯದೇ ಪ್ರಾಬಲ್ಯ.
ಮಹಾರಾಷ್ಟ್ರದ ನಗರ ಸ್ಥಳೀಯ ಸಂಸ್ಥೆಗಳ ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಏಕನಾಥ ಶಿಂಧೆ ನೇತೃತ್ವದ ಶಿವಸೇನಾ ಮೈತ್ರಿಕೂಟ ಮರಾಠಿ- ಹಿಂದುತ್ವ ವೋಟುಗಳನ್ನು ಕಾಪಾಡಿಕೊಂಡಿವೆ. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹಾಗೂ ಉಪ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಗಟ್ಟಿ ನಾಯಕತ್ವ ಫಲಿತಾಂಶ ನೀಡಿದೆ. ಇಂತಹ ಗಟ್ಟಿ ನಾಯಕತ್ವ ಪ್ರತಿಪಕ್ಷ ಪಾಳಯದಲ್ಲಿ ಇಲ್ಲ. ಪ್ರತಿಪಕ್ಷಗಳಲ್ಲಿ ವೋಟುಗಳು ವಿಭಜನೆಯಾಗಿದ್ದು ಬಿಜೆಪಿ-ಶಿಂಧೆ ನೇತೃತ್ವದ ಶಿವಸೇನಾಗೆ ವರವಾಯಿತು.
ಹಾಗೇ ನೋಡಿದರೆ ಬಿಜೆಪಿ ಹಾಗೂ ಬಾಳಾ ಸಾಹೇಬ್ ಠಾಕ್ರೆ ನೇತೃತ್ವದ ಶಿವಸೇನಾ ಸುದೀರ್ಘ ಕಾಲ ಮಿತ್ರ ಪಕ್ಷಗಳಾಗಿದ್ದವು. ಶಿವಸೇನೆ ಹಾಗೂ ಬಿಜೆಪಿ 1980ರ ದಶಕದಿಂದ ಅಸೆಂಬ್ಲಿ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ದೋಸ್ತಿಗಳು. ಮಹಾರಾಷ್ಟ್ರ ವಿಧಾನಸಭೆಗೆ 1995ರಲ್ಲಿ ನಡೆದ ಚುನಾವಣೆಯಲ್ಲಿ ಶಿವಸೇನಾ-ಬಿಜೆಪಿ ಮೈತ್ರಿಕೂಟ ಮೊದಲ ಬಾರಿಗೆ ಅಧಿಕಾರಕ್ಕೆ ಏರಿತು. ಈ ಅಧಿಕಾರದ ಅವಧಿಯಲ್ಲೇ ಬಾಂಬೆ ಎಂಬ ಹೆಸರು ಮುಂಬೈ ಎಂದು ಮರುನಾಮಕರಣ ಆಗಿದ್ದು.
ಕಳೆದ ಏಳು ವರ್ಷಗಳಿಂದ ಬಾಳಾ ಠಾಕ್ರೆ ಅವರ ಪುತ್ರ ಉದ್ಧವ ಠಾಕ್ರೆ ನಾಯಕತ್ವದ ಶಿವಸೇನಾ ಹಾಗೂ ಬಿಜೆಪಿ ಬದ್ಧ ರಾಜಕೀಯ ವೈರಿಗಳು. ಅದು ಮಹಾರಾಷ್ಟ್ರ ಅಸೆಂಬ್ಲಿಗೆ 2019ರಲ್ಲಿ ನಡೆದ ಚುನಾವಣೆ. ಬಿಜೆಪಿ-ಶಿವಸೇನಾ ಮೈತ್ರಿಗೆ ಗೆಲುವು. ಮುಖ್ಯಮಂತ್ರಿ ಪಟ್ಟಕ್ಕಾಗಿ ಹಗ್ಗಜಗ್ಗಾಟ. ಶಿವಸೇನಾ ಬಿಜೆಪಿಯಿಂದ ದೂರ. ಕಾಂಗ್ರೆಸ್ ಹಾಗೂ ಎನ್‌ಸಿಪಿ ಜೊತೆ ಸ್ನೇಹ. ಮಹಾವಿಕಾಸ ಅಘಾಡಿ ಮೈತ್ರಿಕೂಟ ಸ್ಥಾಪನೆ. ಸರಕಾರ ರಚನೆ. ಉದ್ಧವ ಠಾಕ್ರೆ ಮುಖ್ಯಮಂತ್ರಿ. ಇದು ಮುಂದಿನ ರಾಜಕೀಯ ಬೆಳವಣಿಗೆಗೆ ನಾಂದಿ.
ಮೂರು ವರ್ಷಗಳಲ್ಲೇ ಅಂದರೆ ಜೂನ್ 2022ರಲ್ಲಿ ಶಿವಸೇನೆಯ ಏಕನಾಥ ಶಿಂಧೆ ಅವರು ಉದ್ಧವ ಠಾಕ್ರೆ ವಿರುದ್ಧ ಬಂಡಾಯ. ಶಿವಸೇನಾ ವಿಭಜನೆ. ಶಿವಸೇನೆಯ 40 ಬಂಡಾಯ ಶಾಸಕರೊಂದಿಗೆ ಬಿಜೆಪಿ ಜೊತೆಗೂಡಿ ಏಕನಾಥ ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣ. ಬಿಜೆಪಿಗೆ ಉಪ ಮುಖ್ಯಮಂತ್ರಿ ಗಾದಿ. ಇದು ಮಹಾರಾಷ್ಟ್ರ ರಾಜಕಾರಣಕ್ಕೆ ಹೊಸ ತಿರುವು. ಅಲ್ಲಿಂದಲೇ ರಾಜಕೀಯವಾಗಿ ಉದ್ಧವ ಠಾಕ್ರೆಯವರಿಗೆ ಹಿನ್ನಡೆ ಆರಂಭ. ಉದ್ಧವ ಠಾಕ್ರೆ ಅವರ ಶಿವಸೇನಾಗೆ ರಾಜಕೀಯವಾಗಿ ಬಲವಾದ ಹೊಡೆತ.
ವಿಧಾನಸಭೆಗೆ 2024ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ, ಶಿಂಧೆ ನೇತೃತ್ವದ ಶಿವಸೇನಾ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮಧ್ಯೆ ಸಖ್ಯ. ಮಹಾರಾಷ್ಟ್ರ ಅಸೆಂಬ್ಲಿಯ 288 ಕ್ಷೇತ್ರಗಳ ಪೈಕಿ 236ರಲ್ಲಿ ಈ ಮಹಾಯುತಿಗೆ ಗೆಲುವು. ಶಿಂಧೆ ನೇತೃತ್ವದ ಶಿವಸೇನಾ 57 ಸ್ಥಾನಗಳನ್ನು ಪಡೆದರೆ, ಉದ್ಧವ ಠಾಕ್ರೆ ನೇತೃತ್ವದ ಶಿವಸೇನಾ 20 ಸ್ಥಾನಗಳಿಗೆ ಸೀಮಿತ.
ಶಿವಸೇನಾ ಪಕ್ಷದ್ದು ಸುದೀರ್ಘ ಇತಿಹಾಸ. ಬಾಳಾ ಸಾಹೇಬ್ ಠಾಕ್ರೆ ಈ ಪಕ್ಷದ ಸಂಸ್ಥಾಪಕರು. ಅವರು ಮುಂಬೈಯ ಫ್ರೀ ಪ್ರೆಸ್ ಜರ್ನಲ್‌ನಲ್ಲಿ ವ್ಯಂಗ್ಯಚಿತ್ರಕಾರರಾಗಿದ್ದವರು. ಶಿವಸೇನಾ 19 ಜೂನ್ 1966ರಂದು ಸ್ಥಾಪನೆ. ಮರಾಠಿ ಅಸ್ಮಿತೆ ಶಿವಸೇನಾ ಪ್ರಮುಖ ಧ್ಯೇಯೋದ್ಧೇಶವಾಗಿತ್ತು. ಮುಂಬೈನಲ್ಲಿ ವಲಸಿಗರ ಅದರಲ್ಲೂ ದಕ್ಷಿಣ ಭಾರತದವರ ವಿರುದ್ಧ ಶಿವಸೇನಾ ಆಕ್ರಮಣಕಾರಿ ವರ್ತನೆ ತೋರಿತು. ಮುಂಬೈನಲ್ಲಿರುವ ವಲಸಿಗರಿಂದ ಮರಾಠಿ ಸಂಸ್ಕೃತಿಗೆ ಧಕ್ಕೆ ಒದಗಿದೆ ಎಂದು ಬಾಳಾ ಸಾಹೇಬ್ ಠಾಕ್ರೆ ಗುಡುಗಿದ್ದರು.
ಮರಾಠಿಗರಿಗೆ ಪ್ರಾತಿನಿಧ್ಯ, ಉದ್ಯೋಗ ನೀಡಿಕೆ ಶಿವಸೇನಾದ ಆರಂಭದ ಘೋಷಣೆ. ಮಹಾರಾಷ್ಟ್ರ ಮರಾಠಿಗರಿಗೆ ಎಂದು ಚಳವಳಿಯೂ ಪ್ರಾರಂಭ. ನಂತರ ಹಿಂದೂ ರಾಷ್ಟ್ರೀಯತೆಯ ಪ್ರತಿಪಾದನೆ. ಬಾಳಾ ಸಾಹೇಬ್ ಠಾಕ್ರೆ ತಮ್ಮನ್ನು ಹಿಂದೂ ಹೃದಯ ಸಾಮ್ರಾಟ್ ಎಂದು ಕರೆದುಕೊಂಡವರು. ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರು 1975ರಲ್ಲಿ ಹೇರಿದ ತುರ್ತು ಪರಿಸ್ಥಿತಿಯನ್ನು ಬಹಿರಂಗವಾಗಿ ಬೆಂಬಲಿಸಿದ್ದವರು ಬಾಳಾ ಸಾಹೇಬ್ ಠಾಕ್ರೆ.
ಶಿವಸೇನಾ ಬಾಲಿವುಡ್ ಮೇಲೆಯೂ ನಿಯಂತ್ರಣ ಸಾಧಿಸಿತ್ತು. ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಆಟವನ್ನು ವಿರೋಧಿಸಿತು. ಗೂಂಡಾಗಿರಿಯನ್ನು ನಡೆಸಿತು. ಕೋಮುಗಲಭೆಗಳಲ್ಲಿ ಶಿವಸೇನಾ ತೊಡಗಿತು ಎಂದು ತನಿಖಾ ಸಂಸ್ಥೆಗಳು ಬೊಟ್ಟು ಮಾಡಿದವು.
ಶಿವಸೇನಾದಲ್ಲಿಯೂ ಆಗಾಗ್ಗೆ ಬಂಡಾಯಗಳು ಎದ್ದವು. ಛಗನ್ ಭುಜಬಲ್, ನಾರಾಯಣ ರಾಣೆ, ರಾಜ್ ಠಾಕ್ರೆ ಪಕ್ಷದಿಂದ ಹೊರ ನಡೆದರು. ಆದರೆ, ಬಾಳಾ ಸಾಹೇಬ್ ಠಾಕ್ರೆ ಅವರ ದೈತ್ಯಶಕ್ತಿಯ ಎದುರು ಇವರ ಆಟ ನಡೆಯಲಿಲ್ಲ. ಆದರೆ ಬಾಳಾ ಸಾಹೇಬ್ ಠಾಕ್ರೆ ನಂತರ ಅವರ ಪುತ್ರ ಉದ್ದವ ಠಾಕ್ರೆ ಅವರಿಗೆ ಪಕ್ಷದ ಮೇಲಿನ ಹಿಡಿತ ಸಾಧ್ಯವಾಗಲಿಲ್ಲ.
ಬಾಳಾ ಸಾಹೇಬ್ ಠಾಕ್ರೆ ಅವರು 2012ರಲ್ಲಿ ನಿಧನರಾದರು. ಅವರು ಸ್ಥಾಪಿಸಿದ ಶಿವಸೇನಾ ಈಗ ಮೂರು ಹೋಳು. ಮಹಾರಾಷ್ಟ್ರದಲ್ಲಿ ಬಲಿಷ್ಟವಾಗುತ್ತಿರುವ ಬಿಜೆಪಿ ಎದುರು ಬಾಳಾ ಸಾಹೇಬ್ ಠಾಕ್ರೆ ಅವರ ಪುತ್ರ ಉದ್ಧವ ಠಾಕ್ರೆಯವರ ಶಿವಸೇನಾ ಮುಂದಿನ ದಾರಿ ದುರ್ಗಮ
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com