2026ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ 'ಫೇಸ್ಡ್ ಬ್ಯಾಟಲ್ ಅರೇ' ಎನ್ನುವು ಹೊಸದೊಂದು ಪ್ರದರ್ಶನ ಶೈಲಿಯನ್ನು ಪರಿಚಯಿಸಲಾಗುತ್ತಿದೆ. ಈ ವಿನ್ಯಾಸ ಒಂದು ನೈಜ ಯುದ್ಧ ಸನ್ನಿವೇಶ ಹೇಗಿರುತ್ತದೆ ಎನ್ನುವುದನ್ನು ತೋರಿಸುವ ಉದ್ದೇಶ ಹೊಂದಿದೆ. ಒಂದು ನೈಜ ಯುದ್ಧದ ಸಂದರ್ಭದಲ್ಲಿ ಆಯುಧಗಳು ಯಾವ ಕ್ರಮಾಂಕದಲ್ಲಿ ಬಳಕೆಯಾಗುತ್ತವೆಯೋ, ಅದೇ ವಿಧಾನದಲ್ಲಿ ಗಣರಾಜ್ಯೋತ್ಸವದಂದು ಪ್ರದರ್ಶನಗೊಳ್ಳಲಿವೆ. ಮೊದಲಿಗೆ ಕಣ್ಗಾವಲು ಮತ್ತು ವಿಚಕ್ಷಣಾ ಡ್ರೋನ್‌ಗಳ ಮೂಲಕ ಈ ವಿನ್ಯಾಸ ಆರಂಭಗೊಳ್ಳಲಿದ್ದು, ಬಳಿಕ ಯುದ್ಧ ಟ್ಯಾಂಕ್‌ಗಳು, ಆರ್ಟಿಲರಿ ಗನ್‌ಗಳು, ಮತ್ತು ದಾಳಿ ವ್ಯವಸ್ಥೆಗಳು ಆಗಮಿಸಲಿವೆ. ಇದೊಂದು ಹಂತ ಹಂತದ ವಿನ್ಯಾಸವಾಗಿದ್ದು, ನೋಡುಗರಿಗೆ ಭಾರತದ ಸಶಸ್ತ್ರ ಪಡೆಗಳು ನೈಜ ಯುದ್ಧದ ಸಂದರ್ಭದಲ್ಲಿ ಹೇಗೆ ಸಿದ್ಧವಾಗುತ್ತವೆ, ಹೇಗೆ ಯೋಜನೆ ರೂಪಿಸುತ್ತವೆ, ಹೇಗೆ ಪ್ರತಿಕ್ರಿಯಿಸುತ್ತವೆ, ಮತ್ತು ಯಾವ ರೀತಿಯಲ್ಲಿ ಕಾರ್ಯಾಚರಣೆಗೆ ಇಳಿಯುತ್ತವೆ ಎನ್ನುವುದನ್ನು ಸ್ಪಷ್ಟವಾಗಿ ಅರ್ಥೈಸಿಕೊಳ್ಳಲು ನೆರವಾಗಲಿದೆ. ಇದು ಭಾರತದ ರಕ್ಷಣಾ ಸಿದ್ಧತೆಯ ಒಂದು ನೈಜ ಚಿತ್ರಣವನ್ನೂ ನೀಡುತ್ತದೆ.
ಈ ವರ್ಷ ಭಾರತ 77ನೇ ಗಣರಾಜ್ಯೋತ್ಸವ ಪರೇಡ್ ಹಲವಾರು ವರ್ಷಗಳ ಸಂಪ್ರದಾಯದಿಂದ ಅತ್ಯಂತ ಸ್ಪಷ್ಟವಾದ ಬದಲಾವಣೆಗಳನ್ನು ತಂದಿದೆ. ಈ ಹಿಂದಿನ ವರ್ಷಗಳಲ್ಲಿ, ಪಥ ಸಂಚನದಲ್ಲಿ ಸಾಗುವ ಸೈನಿಕರು ಮತ್ತು ಮಿಲಿಟರಿ ವಾಹನಗಳನ್ನು ಪ್ರತ್ಯೇಕವಾಗಿ ಪ್ರದರ್ಶಿಸಲಾಗುತ್ತಿತ್ತು. ಆದರೆ ಈ ಬಾರಿ ಪರೇಡನ್ನು ಒಂದು ಕಾರ್ಯತಂತ್ರದ ವಿನ್ಯಾಸದಲ್ಲಿ ರೂಪಿಸಲಾಗಿದೆ. ಅಂದರೆ, ಸೇನಾಪಡೆಗಳು ಮತ್ತು ಅಯುಧ ಉಪಕರಣಗಳನ್ನು ಅವರು ನೈಜ ಯುದ್ಧದ ಸನ್ನಿವೇಶದಲ್ಲಿ, ಕಾರ್ಯಾಚರಣೆಗಳಲ್ಲಿ ಕಾಣಿಸಿಕೊಳ್ಳುವ ರೀತಿಯಲ್ಲೇ ಪ್ರದರ್ಶಿಸಲಾಗುತ್ತದೆ.
ಈ ವಿನೂತನ ವಿನ್ಯಾಸ ಸೈನಿಕರು ಮತ್ತು ಆಯುಧ ಉಪಕರಣಗಳನ್ನು ನೈಜ ಯುದ್ಧ ಭೂಮಿಯಲ್ಲಿ ಪ್ರಯೋಗಿಸುವ ರೀತಿಯಲ್ಲೇ ಪ್ರದರ್ಶಿಸುತ್ತದೆ. ಇದು ಗುಪ್ತಚರ ಮತ್ತು ಕಣ್ಗಾವಲು ಕಾರ್ಯಾಚರಣೆಯ ಮೂಲಕ ಆರಂಭಗೊಂಡು, ಬಳಿಕ ಮುಖ್ಯ ಯುದ್ಧ ತಂಡದತ್ತ ಸಾಗಿ, ಅಂತಿಮವಾಗಿ ಬೆಂಬಲ ವ್ಯವಸ್ಥೆಗಳನ್ನು ಪ್ರದರ್ಶಿಸುತ್ತದೆ. ಇದರ ಮುಖ್ಯ ಉದ್ದೇಶ ಹೇಗೆ ವಿವಿಧ ಸೇನಾ ಪಡೆಗಳು ಒಂದೇ ತಂಡವಾಗಿ ಕಾರ್ಯ ನಿರ್ವಹಿಸುತ್ತವೆ ಎನ್ನುವುದನ್ನು ಪ್ರದರ್ಶಿಸಿ, ನೈಜ ಯುದ್ಧದ ಯೋಜನೆಯತ್ತ ಗಮನ ಹರಿಸುವುದಾಗಿದ್ದು, ವೈಯಕ್ತಿಕ ಆಯುಧಗಳು ಮತ್ತು ಪಡೆಗಳನ್ನು ಪ್ರದರ್ಶಿಸುವುದಲ್ಲ.
ಈ ಪ್ರದರ್ಶನ ಮೊದಲಿಗೆ 'ರೆಕ್ಕೀ' ಅಥವಾ ವಿಚಕ್ಷಣಾ ಹಂತದಿಂದ ಆರಂಭಗೊಳ್ಳುತ್ತದೆ. ಅಂದರೆ, ಮೊದಲಿಗೆ ಶತ್ರುವನ್ನು ಪತ್ತೆಹಚ್ಚುವ ಹಂತ ಇದಾಗಿದೆ. ಗಣರಾಜ್ಯೋತ್ಸವ ಪೆರೇಡ್ ವೀಕ್ಷಿಸುವ ಜನರಿಗೆ ಮೊದಲು ಹೈ ಮೊಬಿಲಿಟಿ ರಿಕನಯಸೆನ್ಸ್ ವೆಹಿಕಲ್‌ಗಳು (ಎಚ್ಎಂಆರ್‌ವಿ) ಕಾಣಿಸುತ್ತವೆ. ಇವು ವೇಗವಾಗಿ ಸಾಗುವ, ಹಗುರವಾದ, ಶಸ್ತ್ರಸಜ್ಜಿತ ವಾಹನಗಳಾಗಿದ್ದು, ವೇಗವಾಗಿ ಚಲಿಸುವ ಮತ್ತು ಶತ್ರು ಪ್ರದೇಶಗಳನ್ನು ಗಮನಿಸಬಲ್ಲವು. ಇವು ಅತ್ಯಾಧುನಿಕ ಕಣ್ಗಾವಲು ರೇಡಾರ್‌ಗಳನ್ನೂ ಒಳಗೊಂಡಿವೆ. ಈ ವಾಹನಗಳಿಗೆ ಮೇಲ್ಭಾಗದಲ್ಲಿ ಹಾರಾಡುವ ಧ್ರುವ್ ಹೆಲಿಕಾಪ್ಟರ್‌ಗಳು ಬೆಂಬಲ ಒದಗಿಸಲಿವೆ. ಇವೆರಡೂ ಜೊತೆಯಾಗಿ, ಸೇನೆ ಹೇಗೆ ಶತ್ರು ಸ್ಥಾನಗಳನ್ನು ಗುರುತಿಸಿ, ಮುಖ್ಯ ಕಾದಾಟದ ಪಡೆಗಳು ಬರುವ ಮುನ್ನವೇ ಮಾಹಿತಿ ಸಂಗ್ರಹಿಸುತ್ತವೆ.
ಗುರಿಯನ್ನು ಸ್ಪಷ್ಟವಾಗಿ ಗುರುತಿಸಿದ ಬಳಿಕ, ನಿಜವಾದ 'ದಾಳಿ' ಹಂತ ಆರಂಭಗೊಳ್ಳುತ್ತದೆ. ಈ ಹಂತದಲ್ಲಿ ಭಾರೀ ಸಶಸ್ತ್ರ ವಾಹನಗಳು ಶತ್ರುವಿನ ರಕ್ಷಣಾ ವ್ಯವಸ್ಥೆಗಳನ್ನು ಭೇದಿಸಿ ನುಗ್ಗುತ್ತವೆ. ಇದರಲ್ಲಿ ಭಾರತದ ದೇಶೀಯ ನಿರ್ಮಾಣದ ಅರ್ಜುನ್ ಮೇನ್ ಬ್ಯಾಟಲ್ ಟ್ಯಾಂಕ್, ಮತ್ತು ಟಿ-90 ಭೀಷ್ಮ ಟ್ಯಾಂಕ್‌ಗಳು ಸೇರಿವೆ. ಇವುಗಳೊಡನೆ, ಬಿಎಂಪಿ-2 ಇನ್‌ಫ್ಯಾಂಟ್ರಿ ಕಾಂಬ್ಯಾಟ್ ವೆಹಿಕಲ್‌ಗಳು ಇರಲಿದ್ದು, ಇವು ಯೋಧರು ಮತ್ತು ಬೆಂಬಲ ಟ್ಯಾಂಕ್‌ಗಳನ್ನು ಸಾಗಿಸುತ್ತವೆ. ಇವೆಲ್ಲವೂ ಜೊತೆಯಾಗಿ, ಯುದ್ಧ ರಂಗದಲ್ಲಿ ಭಾರತೀಯ ಸೇನೆಯ ಕಾದಾಡುವ ಸಾಮರ್ಥ್ಯವನ್ನು ಪ್ರದರ್ಶಿಸಲಿವೆ.
ಟ್ಯಾಂಕ್‌ಗಳ ಬಳಿಕ, ಯೋಧರನ್ನು ರಕ್ಷಿಸುವ ಮತ್ತು ದೂರದ ಗುರಿಗಳ ಮೇಲೆ ದಾಳಿ ನಡೆಸುವ ಆಯುಧ ವ್ಯವಸ್ಥೆಗಳನ್ನು ಪ್ರದರ್ಶಿಸಲಾಗುತ್ತದೆ. ಈ ಹಂತ ಬಹಳ ದೂರದ ತನಕ ಶಕ್ತಿಶಾಲಿ ಶೆಲ್‌ಗಳನ್ನು ಬಳಸಿ ದಾಳಿ ನಡೆಸಬಲ್ಲ 'ಶಕ್ತಿಬಾಣ್' ಆರ್ಟಿಲರಿ ರೆಜಿಮೆಂಟ್ ಮತ್ತು ಅಡ್ವಾನ್ಸ್ಡ್ ಟೋವ್ಡ್ ಆರ್ಟಿಲರಿ ಗನ್ ಸಿಸ್ಟಮ್ (ಎಟಿಎಜಿಎಸ್) ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ. ಆಕಾಶ್ ಮತ್ತು ಎಂಆರ್‌ಎಸ್ಎಎಂ ನಂತಹ ರಕ್ಷಣಾ ವ್ಯವಸ್ಥೆಗಳೂ ಇಲ್ಲಿ ಪ್ರದರ್ಶನಗೊಳ್ಳಲಿದ್ದು, ನಮ್ಮ ಸೇನೆ ಹೇಗೆ ಶತ್ರುಗಳ ವಿಮಾನಗಳು ಮತ್ತು ಕ್ಷಿಪಣಿಗಳಿಂದ ನಮ್ಮ ಆಗಸಗಳನ್ನು ರಕ್ಷಿಸುತ್ತವೆ ಎನ್ನುವುದನ್ನು ತೋರಿಸಲಿವೆ.
ಈ ಯುದ್ಧ ಸಾಮರ್ಥ್ಯ ಪ್ರದರ್ಶನ 'ಮೇಡ್ ಇನ್ ಇಂಡಿಯಾ' ತಂತ್ರಜ್ಞಾನವನ್ನು ಜಗತ್ತಿನ ಮುಂದೆ ತೆರೆದಿಡಲಿದೆ. ಇದರಲ್ಲಿ ನಾಗ್ ಕ್ಷಿಪಣಿ ವ್ಯವಸ್ಥೆ (ಎನ್ಎಎಂಐಎಸ್-2) ಯಂತಹ ಆಯುಧಗಳು, ರೊಬಾಟಿಕ್ ಹೇಸರಗತ್ತೆಗಳು, ಮತ್ತು ಮಾನವ ರಹಿತ ಭೂ ವಾಹನಗಳು (ಅನ್‌ಮ್ಯಾನ್ಡ್ ಗ್ರೌಂಡ್ ವೆಹಿಕಲ್ಸ್ - ಯುಜಿವಿ) ಸೇರಿವೆ. ಇದು ಭಾರತ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಗೆ ಆದ್ಯತೆ ನೀಡುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇದರ ಸಂದೇಶ ಸರಳ: ಭಾರತದ ಆಧುನಿಕ ಮಿಲಿಟರಿ ಶಕ್ತಿ ಈಗ ಮುಖ್ಯವಾಗಿ ದೇಶದಲ್ಲೇ ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನದ ಆಧಾರದಲ್ಲಿ ನಿರ್ಮಾಣಗೊಳ್ಳುತ್ತಿದೆ.
ಈ ನೂತನ ವಿಧಾನದ ಮೂಲಕ ಗಣರಾಜ್ಯೋತ್ಸವ ಪೆರೇಡ್ ಮಿಲಿಟರಿ ನಿಜಕ್ಕೂ ಹೇಗೆ ಕಾರ್ಯಾಚರಿಸುತ್ತದೆ ಎನ್ನುವ ದೃಶ್ಯಾತ್ಮಕ ಪಾಠವನ್ನೂ ತಿಳಿಸುತ್ತದೆ. ಲಾಜಿಸ್ಟಿಕ್ಸ್ ಬೆಂಬಲ, ಯುದ್ಧಕ್ಕೆ ಸಜ್ಜಾದ ರೀತಿಯಲ್ಲಿರುವ ಯೋಧರು ಮತ್ತು ಯುದ್ಧೋಪಕರಣಗಳನ್ನು ಪ್ರದರ್ಶಿಸುವ ಮೂಲಕ 2026ರ ಗಣರಾಜ್ಯೋತ್ಸವ ಪೆರೇಡ್ ಭಾರತದ ಸಶಸ್ತ್ರ ಪಡೆಗಳು ಎಷ್ಟರಮಟ್ಟಿಗೆ ಸಂಕೀರ್ಣ ಮತ್ತು ಯುದ್ಧ ಸನ್ನದ್ಧವಾಗಿವೆ ಎನ್ನುವ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸಲಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com