ಸಂಗ್ರಹ ಚಿತ್ರ online desk
ಅಂಕಣಗಳು

ರೀಪರ್ Vs ಟಿಬಿ2: ವಾಯು ಸಾಮರ್ಥ್ಯದಲ್ಲಿ ಬಹುಚರ್ಚಿತ ಸ್ಪರ್ಧೆ (ಜಾಗತಿಕ ಜಗಲಿ)

ಟಿಬಿ2 ಡ್ರೋನ್ 12 ಮೀಟರ್‌ಗಳ ರೆಕ್ಕೆಯ ವ್ಯಾಪ್ತಿಯನ್ನು ಹೊಂದಿದ್ದು, 700 ಕೆಜಿಗಳಷ್ಟು ಟೇಕಾಫ್ ತೂಕ ಹೊಂದಿದೆ. ಇದು ಅಂದಾಜು 16,000 ಅಡಿಗಳಷ್ಟು ಎತ್ತರದಲ್ಲಿ (4.9 ಕಿಲೋಮೀಟರ್) ಹಾರಾಟ ನಡೆಸಬಲ್ಲದಾಗಿದೆ.

ಇಂದು ನೀವು ಯಾವುದೇ ರಕ್ಷಣಾ ವಿಶ್ಲೇಷಕರ ಬಳಿ ಇಂದು ಯಾವ ಸಶಸ್ತ್ರ ಡ್ರೋನ್ ಆಗಸದಲ್ಲಿ ಪಾರಮ್ಯ ಹೊಂದಿದೆ ಎಂದು ಕೇಳಿದರೆ, ಬಹುತೇಕ ತಕ್ಷಣವೇ ಎರಡು ಹೆಸರುಗಳು ಕೇಳಿಬರುತ್ತವೆ. ಅವೆಂದರೆ, ಅಮೆರಿಕದ ಎಂಕ್ಯು-9 ರೀಪರ್ ಮತ್ತು ಟರ್ಕಿಯ ಬೇರಾಕ್ತರ್ ಟಿಬಿ2. ಇವೆರಡು ಡ್ರೋನ್‌ಗಳೂ ದೊಡ್ಡ ಸುದ್ದಿಯಾಗಿದ್ದವು. ನೈಜ ಯುದ್ಧಗಳಲ್ಲಿ ಇವೆರಡೂ ಶತ್ರು ಟ್ಯಾಂಕರ್‌ಗಳು ಮತ್ತು ರೇಡಾರ್‌ಗಳನ್ನು ನಾಶಪಡಿಸಿದ್ದವು.

ಜಗತ್ತಿನಾದ್ಯಂತ ವಿವಿಧ ವಾಯುಪಡೆಗಳು ಈ ಡ್ರೋನ್‌ಗಳನ್ನು ಹೊಂದಲು ಬಯಸುತ್ತಿವೆ. ಇಷ್ಟಾದರೂ, ಇವೆರಡು ಡ್ರೋನ್‌ಗಳನ್ನು ಒಂದರ ಪಕ್ಕ ಒಂದನ್ನು ಇರಿಸಿ, ಇವೆರಡರಲ್ಲಿ ಯಾವ ಡ್ರೋನ್ ಉತ್ತಮ ಎಂದು ಘೋಷಿಸುವುದು ಸುಲಭದ ಕೆಲಸವಲ್ಲ. ಯಾಕೆಂದರೆ, ಇವೆರಡು ಡ್ರೋನ್‌ಗಳನ್ನು ಒಂದೇ ಸಮಾನ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಿರುವುದೂ ಅಲ್ಲ.

ತಾಂತ್ರಿಕವಾಗಿ, ಇವೆರಡೂ ಡ್ರೋನ್‌ಗಳು ಮೇಲ್ (ಮೀಡಿಯಂ ಆಲ್ಟಿಟ್ಯೂಡ್ ಲಾಂಗ್ ಎಂಡ್ಯುರೆನ್ಸ್ - ಅಂದರೆ, ಇವು ಸಾಧಾರಣ ಎತ್ತರದಲ್ಲಿ ಹಾರಬಲ್ಲವಾಗಿದ್ದು, ಅತ್ಯಂತ ಸುದೀರ್ಘ ಕಾಲ ಆಕಾಶದಲ್ಲೇ ಇರಬಲ್ಲವು. ಸಣ್ಣ ಕ್ಯಾಮರಾ ಡ್ರೋನ್‌ಗಳಂತೆ ಅರ್ಧ ಗಂಟೆಯಲ್ಲಿ ಹಿಂದಕ್ಕೆ ಮರಳುವುದಿಲ್ಲ) ಡ್ರೋನ್‌ಗಳ ಕುಟುಂಬಕ್ಕೆ ಸೇರಿವೆ. ಆದರೆ, ಇವೆರಡರ ನಡುವಿನ ಹೋಲಿಕೆಯೂ ಕೇವಲ ಅಷ್ಟಕ್ಕೇ ಸೀಮಿತವಾಗಿದೆ.

ಅಮೆರಿಕಕ್ಕೆ ಆಗಸದಲ್ಲಿ ಬಂದೂಕು ಹಿಡಿದ ಓರ್ವ ಕಾವಲುಗಾರನ ಅವಶ್ಯಕತೆ ಇತ್ತು. ಅದಕ್ಕಾಗಿ ಎಂಕ್ಯು-9 ರೀಪರ್ ನಿರ್ಮಾಣಗೊಂಡಿತು. ಇನ್ನು ಅಮೆರಿಕದ ವಾಯು ಸೇನೆಯ ಪ್ರಕಾರ, ಇದರ ಮುಖ್ಯ ಉದ್ದೇಶ ಐಎಸ್ಆರ್ (ಗುಪ್ತಚರ, ಕಣ್ಗಾವಲು, ಮತ್ತು ಸ್ಥಳಾನ್ವೇಷಣೆ - ಒಂದು ಪ್ರದೇಶವನ್ನು ವೀಕ್ಷಿಸುತ್ತಾ, ಮಾಹಿತಿಗಳನ್ನು ಕಲೆ ಹಾಕಿ, ಆಯ್ಕೆ ಮಾಡಲಾದ ಗುರಿಗಳ ಮೇಲೆ ಕಣ್ಣಿಡುವುದು). ಅವಶ್ಯಕತೆ ಬಿದ್ದಾಗ, ಇದೇ ಏರ್‌ಕ್ರಾಫ್ಟ್ ಗುರಿಯ ಮೇಲೆ ಅತ್ಯಂತ ನಿಖರವಾದ ದಾಳಿ ನಡೆಸಬಲ್ಲದು. ಆದರೆ, ಇಲ್ಲಿ ನೆನಪಿಟ್ಟುಕೊಳ್ಳಬೇಕಾದ ವಿಚಾರವೆಂದರೆ, ಪೈಲಟ್ ಡ್ರೋನ್ ಒಳಗೆ ಕುಳಿತಿರುವುದಿಲ್ಲ. ಆತ ಬಹಳಷ್ಟು ದೂರದಲ್ಲಿ, ಒಂದು ಕಂಟ್ರೋಲ್ ರೂಮ್ ಒಳಗೆ ಕುಳಿತಿರುತ್ತಾನೆ. ಕೆಲವೊಂದು ಸಂದರ್ಭಗಳಲ್ಲಿ, ಈ ಕಂಟ್ರೋಲ್ ರೂಮ್ ಒಂದು ಖಂಡದಲ್ಲಿದ್ದರೆ, ಡ್ರೋನ್ ಇನ್ನೊಂದು ಖಂಡದಲ್ಲಿ ಹಾರಾಟ ನಡೆಸುತ್ತಿರಬಹುದು. ಆತ ನೇರ ಪ್ರಸಾರದ ದೃಶ್ಯಗಳನ್ನು ತನ್ನ ಪರದೆಯಲ್ಲಿ ನೋಡುತ್ತಾ, ಉಪಗ್ರಹ ಸಂಕೇತಗಳನ್ನು ಆಧರಿಸಿ ಡ್ರೋನ್ ಚಲಾಯಿಸುತ್ತಾನೆ.

ಇನ್ನು ಟರ್ಕಿಯ ಬೇಕಾರ್ ಕಂಪನಿ ನಿರ್ಮಿಸಿರುವ ಬೇರಾಕ್ತರ್ ಟಿಬಿ2 ಒಂದು ಸಂಪೂರ್ಣ ಭಿನ್ನವಾದ ಪಥವನ್ನು ಹಿಡಿಯಿತು. ಅತ್ಯುನ್ನತ ತಂತ್ರಜ್ಞಾನವನ್ನು ಬೆನ್ನಟ್ಟುವ ಬದಲು, ಬೇಕಾರ್ ಒಂದು ಹಗುರವಾದ, ಕಡಿಮೆ ಬೆಲೆಗೆ ಲಭಿಸುವ, ಸಣ್ಣದಾದ ರನ್‌ವೇ ಮೂಲಕವೂ ಕಾರ್ಯಾಚರಿಸಬಲ್ಲ ಸಶಸ್ತ್ರ ಡ್ರೋನನ್ನು ನಿರ್ಮಿಸಿತು. ಟಿಬಿ2 ಇಂದು ಜಗತ್ತಿನ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿರುವ ಯುಎವಿಗಳಲ್ಲಿ ಒಂದು (ಅನ್‌ಮ್ಯಾನ್ಡ್ ಏರಿಯಲ್ ವೆಹಿಕಲ್ - ಮಾನವ ರಹಿತ ವೈಮಾನಿಕ ವಾಹನ, ಅಂದರೆ, ಪೈಲಟ್ ಇಲ್ಲದೆಯೇ ಹಾರಾಟ ನಡೆಸಬಲ್ಲ ಏರ್‌ಕ್ರಾಫ್ಟ್) ಎಂದು ಬೇಕಾರ್ ಹೇಳಿದೆ. ಇದು 27 ಗಂಟೆಗೂ ಹೆಚ್ಚಿನ ಸಮಯ ಆಕಾಶದಲ್ಲಿ ಹಾರಬಲ್ಲದಾಗಿದ್ದು, ರನ್‌ವೇ ಮೇಲೆ ಚಲಿಸಿ, ಟೇಕಾಫ್ ಆಗಿ, ಯೋಜಿಸಿದಂತೆ ಹಾರಾಟ ನಡೆಸಿ, ಕೊನೆಗೆ ಲ್ಯಾಂಡಿಂಗ್ ನಡೆಸಬಲ್ಲದು. ಬಹುತೇಕ ಯಾವುದೇ ಮಾನವ ಸಹಾಯದ ಅವಶ್ಯಕತೆಯೂ ಇದಕ್ಕೆ ಬೇಕಾಗುವುದಿಲ್ಲ.

ಇನ್ನು ಅಂಕಿ ಸಂಖ್ಯೆಯ ವಿಚಾರಕ್ಕೆ ಬಂದಾಗ, ಇಲ್ಲಿ ಅಂತರ ಹೆಚ್ಚು ಸ್ಪಷ್ಟವಾಗುತ್ತದೆ. ಜನರಲ್ ಅಟಾಮಿಕ್ಸ್ ಪ್ರಕಾರ, ಎಂಕ್ಯು-9ಎ 27 ಗಂಟೆಗೂ ಹೆಚ್ಚು ಕಾಲ ಆಗಸದಲ್ಲಿ ಇರಬಲ್ಲದು, 50,000 ಅಡಿಗಳಷ್ಟು (ಅಂದಾಜು 15.2 ಕಿಲೋಮೀಟರ್) ಎತ್ತರಕ್ಕೆ ಏರಬಲ್ಲದು, ಮತ್ತು ಬಹುತೇಕ 240 ನಾಟ್ (ಗಂಟೆಗೆ 445 ಕಿಲೋಮೀಟರ್) ವೇಗವನ್ನು ತಲುಪಬಲ್ಲದು. ಇದರೊಡನೆ, 1,746 ಕೆಜಿಗಳಷ್ಟು ಪೇಲೋಡನ್ನು (ಆಯುಧಗಳು, ಕ್ಯಾಮರಾಗಳು, ಸೆನ್ಸರ್‌ಗಳು, ಮತ್ತು ಇತರ ಉಪಕರಣಗಳು) ಒಯ್ಯಬಲ್ಲದು. ಇದು ಟರ್ಬೋಪ್ರಾಪ್ ಇಂಜಿನ್ (ಏರ್‌ಕ್ರಾಫ್ಟನ್ನು ಮುಂದಕ್ಕೆ ಒತ್ತಲು ಪ್ರೊಪೆಲ್ಲರನ್ನು ತಿರುಗಿಸುವ ಒಂದು ಜೆಟ್ ಇಂಜಿನ್) ಮೂಲಕ ಚಲಿಸುತ್ತಿದ್ದು, ಅಂದಾಜು 900 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಇಂತಹ ಸಾಮರ್ಥ್ಯ ಡ್ರೋನ್ ವಿಶಾಲವಾದ ಯುದ್ಧ ಪ್ರದೇಶದಲ್ಲಿ ಇಂಧನ ಮರುಪೂರಣದ ಅಗತ್ಯವಿಲ್ಲದೆ ಹಾರಾಟ ನಡೆಸಲು ನೆರವಾಗುತ್ತದೆ.

ಇದಕ್ಕೆ ಹೋಲಿಸಿದರೆ, ಟಿಬಿ2 ಡ್ರೋನ್ 12 ಮೀಟರ್‌ಗಳ ರೆಕ್ಕೆಯ ವ್ಯಾಪ್ತಿಯನ್ನು ಹೊಂದಿದ್ದು, 700 ಕೆಜಿಗಳಷ್ಟು ಟೇಕಾಫ್ ತೂಕ ಹೊಂದಿದೆ. ಇದು ಅಂದಾಜು 16,000 ಅಡಿಗಳಷ್ಟು ಎತ್ತರದಲ್ಲಿ (4.9 ಕಿಲೋಮೀಟರ್) ಹಾರಾಟ ನಡೆಸಬಲ್ಲದಾಗಿದ್ದು, 27 ಗಂಟೆಗೂ ಹೆಚ್ಚಿನ ಹಾರಾಟ ಅವಧಿಯನ್ನು ಹೊಂದಿದೆ. ಆದರೆ, ಇದರ ಪೇಲೋಡ್ ಸಾಮರ್ಥ್ಯ ಮಾತ್ರ ಕೇವಲ 150 ಕೆಜಿ ಎಂದು ಬೇಕಾರ್ ಹೇಳಿದೆ. ಆದ್ದರಿಂದ, ರೀಪರ್ ಡ್ರೋನ್ ಸರಳವಾಗಿ ಟಿಬಿ2ನ ದೊಡ್ಡ ಆವೃತ್ತಿಯಾಗಿದ್ದು, ಸಂಪೂರ್ಣವಾಗಿ ಭಿನ್ನ ವರ್ಗಕ್ಕೆ ಸೇರುತ್ತದೆ.

ಇಂಟ್ರೆಸ್ಟಿಂಗ್ ಇಂಜಿನಿಯರಿಂಗ್ (ಐಇ) ಆನ್‌ಲೈನ್ ಮಾಧ್ಯಮ ಇವುಗಳ ವಿಸ್ತೃತ ಹೋಲಿಕೆ ನಡೆಸಿದ್ದು, ರೀಪರ್‌ನ ನೈಜ ಸಾಮರ್ಥ್ಯ ಅದರ ಸೆನ್ಸರ್ ಪ್ಯಾಕೇಜ್ ಎಂದಿದೆ. ಇದು ಇಲೆಕ್ಟ್ರೋ ಆಪ್ಟಿಕಲ್ ಕ್ಯಾಮರಾಗಳನ್ನು (ಸಾಮಾನ್ಯ ಹಗಲು ಬೆಳಕಿನ ಕ್ಯಾಮರಾಗಳು), ಇನ್‌ಫ್ರಾರೆಡ್ ಕ್ಯಾಮರಾಗಳು (ತಾಪವನ್ನು ಗುರುತಿಸಿ, ಸಂಪೂರ್ಣ ಕತ್ತಲಲ್ಲೂ ಕಾರ್ಯಾಚರಿಸುವ ಕ್ಯಾಮರಾಗಳು), ಲೇಸರ್ ಡೆಸಿಗ್ನೇಟರ್‌ಗಳು (ಬಾಂಬ್‌ಗಳನ್ನು ಸಂಪೂರ್ಣವಾಗಿ ಉದ್ದೇಶಿತ ಸ್ಥಳಕ್ಕೆ ಕಳುಹಿಸುವ ವ್ಯವಸ್ಥೆ), ಸಿಂಥೆಟಿಕ್ ಅಪರ್ಚರ್ ರೇಡಾರ್ ಅಥವಾ ಎಸ್ಎಆರ್ (ದಟ್ಟವಾದ ಮೋಡ ಮತ್ತು ಹೊಗೆಯ ನಡುವೆಯೂ ಸ್ಪಷ್ಟ ಚಿತ್ರಗಳನ್ನು ಒದಗಿಸುವ ಆಧುನಿಕ ರೇಡಾರ್‌ಗಳು), ಮತ್ತು ಸುರಕ್ಷಿತ ಸಂವಹನ ವ್ಯವಸ್ಥೆಗಳನ್ನು ಹೊಂದಿದೆ. ಇದರ ಸಾಮಾನ್ಯ ಬಳಕೆಯ ಆಯುಧಗಳಲ್ಲಿ ಎಜಿಎಂ-114 ಹೆಲ್‌ಫೈರ್ ಕ್ಷಿಪಣಿಗಳು, ಜಿಬಿಯು-12 ಪೇವ್ ವೇ 2 ಲೇಸರ್ ಗೈಡೆಡ್ ಬಾಂಬ್‌ಗಳು, ಮತ್ತು ಜಿಬಿಯು-38 ಜೆಡಿಎಎಂಗಳು (ಜಾಯಿಂಟ್ ಡೈರೆಕ್ಟ್ ಅಟ್ಯಾಕ್ ಮ್ಯುನಿಷನ್ಸ್ - ಅಂದರೆ, ಜಿಪಿಎಸ್ ನಿರ್ದೇಶಿತ ನಿಖರ ದಾಳಿ ಬಾಂಬ್‌ಗಳು) ಸೇರಿವೆ.

ಆದರೆ, ಟಿಬಿ2 ಸಣ್ಣ ಆಯುಧ ಸಾಮರ್ಥ್ಯ ಹೊಂದಿದ್ದು, ನಾಲ್ಕು ಹಾರ್ಡ್ ಪಾಯಿಂಟ್‌ಗಳನ್ನು (ರೆಕ್ಕೆಯ ಕೆಳಗೆ ಆಯುಧಗಳನ್ನು ಅಳವಡಿಸುವ ಜೋಡಣಾ ಬಿಂದುಗಳು) ಹೊಂದಿದೆ. ಇದರಲ್ಲಿ ಸಾಮಾನ್ಯವಾಗಿ ರಾಕೆಟ್‌ಸಾನ್ ಎಂಎಎಂ-ಎಲ್ ಮತ್ತು ಎಂಎಎಂ-ಸಿ ಲೇಸರ್ ನಿರ್ದೇಶಿತ ಆಯುಧಗಳನ್ನು (ಸಣ್ಣ ನಿಖರ ಬಾಂಬ್‌ಗಳು) ಅಳವಡಿಸಲಾಗುತ್ತದೆ. ಇವು ಸಣ್ಣದಾದರೂ, ಅತ್ಯಂತ ಘಾತಕವಾಗಿವೆ. ಇವು ಸಶಸ್ತ್ರ ವಾಹನಗಳು, ಆರ್ಟಿಲರಿ ಸ್ಥಾನಗಳು (ಶತ್ರುಗಳು ತಮ್ಮ ಫಿರಂಗಿಗಳು ಮತ್ತು ಹವಿಟ್ಜರ್‌ಗಳನ್ನು ಅಳವಡಿಸುವ ಸ್ಥಳ) ಮತ್ತು ಕಡಿಮೆ ಭದ್ರತೆ ಹೊಂದಿರುವ ಬಂಕರ್‌ಗಳನ್ನು ನಾಶಪಡಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿವೆ.

ಇನ್ನು ಇವುಗಳ ಯುದ್ಧದ ಸಾಧನೆಗಳು ಡ್ರೋನ್‌ಗಳ ಕಥೆಯನ್ನು ಇನ್ನಷ್ಟು ಉತ್ತಮವಾಗಿ ಹೇಳುತ್ತವೆ. ಇಂಟ್ರೆಸ್ಟಿಂಗ್ ಇಂಜಿನಿಯರಿಂಗ್ ತನ್ನ ವಿಶ್ಲೇಷಣೆಯಲ್ಲಿ ಗುರುತಿಸಿರುವಂತೆ, ಇವೆರಡೂ ಡ್ರೋನ್‌ಗಳು ನೈಜ ಕಾರ್ಯಾಚರಣೆಗಳ ಮೂಲಕ ಹೆಚ್ಚಿನ ಗೌರವ ಸಂಪಾದಿಸಿವೆ. ರೀಪರ್ ಅಮೆರಿಕ ಮತ್ತು ಅದರ ಸಹಯೋಗಿ ದೇಶಗಳ ಸಲುವಾಗಿ ಅಸಂಖ್ಯಾತ ಯೋಜನೆಗಳನ್ನು ನಡೆಸಿದ್ದು, ಇದಕ್ಕಾಗಿ ಅಫ್ಘಾನಿಸ್ತಾನ, ಇರಾಕ್, ಸಿರಿಯಾ, ಆಫ್ರಿಕಾ, ಮತ್ತು ಸಮುದ್ರ ರಕ್ಷಣಾ ಕಾರ್ಯಾಚರಣೆಗಳಿಗಾಗಿ (ಸಾಗಾಣಿಕಾ ಮಾರ್ಗಗಳ ರಕ್ಷಣಾ ಕಾರ್ಯಾಚರಣೆ) ಸಮುದ್ರ ಮಾರ್ಗಗಳ ಮೇಲೂ ಹಾರಾಟ ನಡೆಸಿದೆ. ಒಂದೇ ಪ್ರದೇಶದ ಮೇಲೆ ಅತ್ಯಂತ ದೀರ್ಘಕಾಲ ತೇಲುತ್ತಾ ಇರುವ ಇದರ ಸಾಮರ್ಥ್ಯ (ದೀರ್ಘ ಲಾಯ್ಟರಿಂಗ್ ಅವಧಿ) ನಿಯಂತ್ರಕರಿಗೆ ಗುರಿಯನ್ನು ತಾಳ್ಮೆಯಿಂದ ಗಮನಿಸಿ, ಸರಿಯಾದ ಸಮಯದಲ್ಲಿ ದಾಳಿ ಮಾಡಲು ಅನುಕೂಲ ಕಲ್ಪಿಸುತ್ತದೆ.

ಟಿಬಿ2 ಡ್ರೋನ್ ಲಿಬಿಯಾ, ನಗೊರ್ನೊ - ಕಾರಾಬಾಖ್ ಕಾರ್ಯಾಚರಣೆಗಳಲ್ಲಿ, ಮತ್ತು ರಷ್ಯಾ - ಉಕ್ರೇನ್ ಯುದ್ಧದ ಆರಂಭದ ತಿಂಗಳುಗಳಲ್ಲಿ ಲಾಜಿಸ್ಟಿಕ್ಸ್ ಕಾನ್‌ವಾಯ್‌ಗಳನ್ನು (ಸೇನಾ ಪಡೆಗಳು, ಇಂಧನ ಮತ್ತು ಪೂರೈಕೆಗಳನ್ನು ಸಾಗಿಸುವ ಗುಂಪುಗಳು), ಆರ್ಟಿಲರಿ ವ್ಯವಸ್ಥೆಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ನಾಶಪಡಿಸುವ ಮೂಲಕ ಪ್ರಸಿದ್ಧಿ ಪಡೆಯಿತು. ಆದರೆ, ವಿಶ್ಲೇಷಕರು ಒಂದು ಮಹತ್ವದ ಸತ್ಯವನ್ನು ದಾಖಲಿಸಿದ್ದಾರೆ. ಅದೇನೆಂದರೆ, ಇದರ ಬಹುತೇಕ ಯಶಸ್ಸು ಪೂರಕ ಸಂದರ್ಭಗಳಲ್ಲಿ ಮಾತ್ರ ಲಭಿಸಿದೆ. ಒಂದು ಬಾರಿ ಶತ್ರುಗಳು ಇಂಟಿಗ್ರೇಟೆಡ್ ವಾಯು ರಕ್ಷಣಾ ಜಾಲಗಳನ್ನು (ತನ್ನ ಬಳಿ ಬರುವ ಯಾವುದೇ ಅಪಾಯವನ್ನಾದರೂ ಹೊಡೆದುರುಳಿಸಬಲ್ಲ ರೇಡಾರ್‌ಗಳು, ಸೆನ್ಸರ್‌ಗಳು, ಮತ್ತು ಕ್ಷಿಪಣಿಗಳ ತಂಡವಾಗಿದ್ದು, ಅವು ಜೊತೆಯಾಗಿ ಕಾರ್ಯಾಚರಿಸುತ್ತವೆ) ಅಳವಡಿಸಿದ ಬಳಿಕ, ಟಿಬಿ2 ಪರಿಣಾಮಕಾರಿತ್ವ ಸಾಕಷ್ಟು ಇಳಿಕೆ ಕಂಡಿತು.

ಇವೆರಡರ ನಡುವಿನ ಬಹುದೊಡ್ಡ ವ್ಯತ್ಯಾಸ ಇರುವುದು ವೆಚ್ಚದಲ್ಲಿ. ರೀಪರ್ ಒಂದು ಉನ್ನತ ಮಟ್ಟದ ಕಾರ್ಯತಂತ್ರದ ಆಸ್ತಿಯಾಗಿದ್ದು, ಇದಕ್ಕೆ ಉಪಗ್ರಹ ಬ್ಯಾಂಡ್‌ವಿಡ್ತ್, ಸಂಕೀರ್ಣ ನಿರ್ವಹಣೆ, ಮತ್ತು ಅತ್ಯಂತ ನುರಿತ ತರಬೇತಿ ಹೊಂದಿರುವ ಸಿಬ್ಬಂದಿಗಳ ಅಗತ್ಯವಿದೆ. ಆದರೆ, ಟಿಬಿ2 ಖರೀದಿಸಲು ಮತ್ತು ಕಾರ್ಯಾಚರಿಸಲು ಸಾಕಷ್ಟು ಅಗ್ಗದ ಆಯುಧವಾಗಿದೆ. ಇದು ಬೇಕಾರ್‌ಗೆ ಡ್ರೋನನ್ನು ಹತ್ತಾರು ದೇಶಗಳಿಗೆ ಮಾರಾಟ ಮಾಡಲು ನೆರವಾಗಿದೆ.

ಅಂತಿಮವಾಗಿ ಇವೆರಡರ ಪೈಕಿ ಗೆಲ್ಲುವವರು ಯಾರು? ಪ್ರಾಮಾಣಿಕವಾಗಿ ಉತ್ತರಿಸುವುದಾದರೆ ಯಾರೂ ಅಲ್ಲ. ಆಳವಾದ ಕಣ್ಗಾವಲು ಮತ್ತು ಅತಿಹೆಚ್ಚು ಆಯುಧ ಸಾಮರ್ಥ್ಯದಲ್ಲಿ ರೀಪರ್ ಮುಂದಿದೆ. ಆದರೆ, ಕಡಿಮೆ ಬೆಲೆ, ಕ್ಷಿಪ್ರ ಮತ್ತು ನಿಖರ ದಾಳಿಯಲ್ಲಿ ಟಿಬಿ2 ಹೆಚ್ಚಿನ ಮೌಲ್ಯ ಒದಗಿಸುತ್ತದೆ. ಇದು ಸ್ವಾರ್ಮ್ ಯುದ್ಧತಂತ್ರಕ್ಕೂ (ಏಕಕಾಲದಲ್ಲಿ ಬಹಳಷ್ಟು ಅಗ್ಗದ ಬೆಲೆಯ ಡ್ರೋನ್‌ಗಳು ದಾಳಿ ನಡೆಸುವುದು) ಸೂಕ್ತವಾಗಿದ್ದು, ಇದು ಉಕ್ರೇನ್ ಯುದ್ಧ, ಅಮೆರಿಕ - ಇರಾನ್ ಕದನದಲ್ಲೂ ಕಂಡುಬಂದಿದೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚರ್ಚೆಗೆ ಪ್ರತಿಪಕ್ಷಗಳು ಗೈರಾದರೂ ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆ ಅಂಗೀಕಾರ ಶತಸಿದ್ಧ: ಕಿರಣ್ ರಿಜಿಜು

ಬಿಜೆಪಿಗರ ಎದೆ ಸೀಳಿದರೆ ನಾಲ್ಕಕ್ಷರ ಇಲ್ಲ; ಉಪ್ಪು ತಿಂದಿದ್ದೀರಿ, ನೀರು ಕುಡಿಯಲು ಸಿದ್ಧರಾಗಿ: ಸಿಟಿ ರವಿಗೆ ಪ್ರಿಯಾಂಕ್‌ ಖರ್ಗೆ ಖಡಕ್ ಎಚ್ಚರಿಕೆ

ಕೃಷ್ಣಾ ನದಿ ನೀರಿಗೆ ಮಹಾರಾಷ್ಟ್ರ ಕನ್ನ: ಹೊಸ ಯೋಜನೆ ಘೋಷಿಸಿದ ಫಡ್ನವೀಸ್; ಗಡಿ ಭಾಗದ ಜನರಲ್ಲಿ ಆತಂಕ

ವಿದ್ಯಾರ್ಥಿಗಳ ಮೇಲೆ ಎಕೆ-47 ಬಳಕೆ, ಲಾಠಿಚಾರ್ಜ್ ತಪ್ಪು, ಇದನ್ನು ವಿರೋಧಿಸುತ್ತೇವೆ: ತಮ್ಮದೇ ಸರ್ಕಾರದ ವಿರುದ್ಧ ಎನ್‌ಡಿಎ ಸಂಸದೆ ಕಿಡಿ

ಒಂದು ಶತಮಾನದ ನಂತರವೂ, ಗಾಂಧಿ ಮಾರ್ಗ ಪ್ರಸ್ತುತ: ರಾಜ್‌ಘಾಟ್‌ನಲ್ಲಿ ವಾಂಗ್‌ಚುಕ್ ಪ್ರತಿಪಾದನೆ!