ಅಂಕಣಗಳು

E20 ರಿಂದ E85: ಭಾರತದ ಎಥೆನಾಲ್ ಕಥನ

2001ರಲ್ಲಿ, ಸರ್ಕಾರ ಪೆಟ್ರೋಲ್ ಜೊತೆಗೆ ಕೇವಲ 5% ಎಥೆನಾಲ್ ಬೆರೆಸುವ ಮೂಲಕ ಒಂದು ಸಣ್ಣ ಪ್ರಯೋಗವನ್ನು ಆರಂಭಿಸಿತು. ಇದರ ಹಿಂದಿನ ಆಲೋಚನೆ ಸರಳವಾಗಿತ್ತು.

ಕಳೆದ ವಾರ, ಭಾರತ ಹಿಂದೆಂದೂ ಮಾಡದ ಒಂದು ಕೆಲಸ ಕೈಗೊಂಡಿತು. ದೇಶಾದ್ಯಂತ ಒಂದಷ್ಟು ಪೆಟ್ರೋಲ್ ಬಂಕ್‌ಗಳಲ್ಲಿ ಹೊಚ್ಚ ಹೊಸದಾದ ಇಂಧನವೊಂದು ಕಾಣಿಸಿಕೊಂಡಿತು. ಇದನ್ನು ಇ85 ಎಂದು ಕರೆಯಲಾಯಿತು. ಇ85 ಎಂದರೆ, ಕೇವಲ 15% ಪೆಟ್ರೋಲ್‌ಗೆ 85% ಎಥೆನಾಲ್ ಬೆರೆಸಿ ತಯಾರಿಸಿರುವ ಇಂಧನ. ಒಂದು ವೇಳೆ ಈ ಯೋಜನೆ ಸರ್ಕಾರ ನಿರೀಕ್ಷಿಸಿದ ರೀತಿಯಲ್ಲಿ ಕಾರ್ಯಾಚರಿಸಿದರೆ, ಇದು ನಿಧಾನವಾಗಿ ನಮ್ಮ ಕಾರುಗಳು, ಬೈಕ್‌ಗಳು ಮತ್ತು ಸ್ಕೂಟರ್‌ಗಳಿಗೆ ಇಂಧನ ಒದಗಿಸುವ ರೀತಿಯನ್ನೇ ಬದಲಿಸುವ ಸಾಧ್ಯತೆಗಳಿವೆ.

ಆದರೆ ಇಲ್ಲೊಂದು ಕುತೂಹಲಕರ ವಿಚಾರವೂ ಇದೆ. ಭಾರತ ಕೇವಲ ಇತ್ತೀಚೆಗಷ್ಟೇ, ಅಂದರೆ ಎಪ್ರಿಲ್ ತಿಂಗಳಲ್ಲಿ ದೇಶಾದ್ಯಂತ ಎಲ್ಲ ಪೆಟ್ರೋಲ್ ಪಂಪ್‌ಗಳಲ್ಲಿ ಇ20 ಇಂಧನವನ್ನು ಕಡ್ಡಾಯಗೊಳಿಸಿತ್ತು. ಈಗ ನಮ್ಮಲ್ಲಿ ಬಹಳಷ್ಟು ಜನರನ್ನು ಒಂದು ಸರಳ ಪ್ರಶ್ನೆ ಕಾಡುತ್ತಿದೆ. ನಾವು ಈಗಷ್ಟೇ ಇ20 ಇಂಧನಕ್ಕೆ ಹೊಂದಿಕೊಳ್ಳುತ್ತಿರುವಾಗ, ಇ85ರಂತಹ ಪ್ರಬಲ ಇಂಧನಗಳ ಕುರಿತೇಕೆ ಮಾತುಗಳೇಕೆ ಆರಂಭಗೊಂಡಿವೆ? ಇದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ, ನಾವು ಬಹುತೇಕ 20 ವರ್ಷಗಳಷ್ಟು ಹಿಂದೆ ಸಾಗಬೇಕು.

ಹಿಂದೆ 2001ರಲ್ಲಿ, ಸರ್ಕಾರ ಪೆಟ್ರೋಲ್ ಜೊತೆಗೆ ಕೇವಲ 5% ಎಥೆನಾಲ್ ಬೆರೆಸುವ ಮೂಲಕ ಒಂದು ಸಣ್ಣ ಪ್ರಯೋಗವನ್ನು ಆರಂಭಿಸಿತು. ಇದರ ಹಿಂದಿನ ಆಲೋಚನೆ ಸರಳವಾಗಿತ್ತು. ಭಾರತ ಇತರ ದೇಶಗಳಿಂದ ಅಪಾರ ಪ್ರಮಾಣದ ಕಚ್ಚಾ ತೈಲವನ್ನು ಖರೀದಿಸುತ್ತಿದ್ದು, ಇದಕ್ಕಾಗಿ ಅಪಾರ ಹಣವನ್ನು ವೆಚ್ಚ ಮಾಡುತ್ತದೆ. ಆದರೆ, ಎಥೆನಾಲನ್ನು ಭಾರತದೊಳಗೇ ಕಬ್ಬಿನಿಂದ ಪಡೆದುಕೊಳ್ಳಬಹುದು. ಆದ್ದರಿಂದ, ಎಥೆನಾಲನ್ನು ಪೆಟ್ರೋಲ್ ಜೊತೆ ಮಿಶ್ರಗೊಳಿಸುವುದರಿಂದ, ಭಾರತ ದುಬಾರಿ ಕಚ್ಚಾ ತೈಲ ಆಮದಿಗೆ ಕಡಿಮೆ ಹಣ ವೆಚ್ಚ ಮಾಡಬಹುದು. ಮೇಲ್ನೋಟಕ್ಕೆ ಇದೊಂದು ಉತ್ತಮ ಯೋಜನೆಯಾದರೂ, ಬಹಳಷ್ಟು ವರ್ಷಗಳ ಕಾಲ ಅದು ಅಲ್ಲೇ ಸ್ಥಗಿತಗೊಂಡಿತ್ತು. ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ಮಾರಾಟದಿಂದ ಬರುವ ಆದಾಯ ಹೆಚ್ಚಿದ್ದರಿಂದ ಅವು ಎಥೆನಾಲ್ ಪೂರೈಕೆಯತ್ತ ಆಸಕ್ತಿ ವಹಿಸಿರಲಿಲ್ಲ. ಹತ್ತಕ್ಕೂ ಹೆಚ್ಚು ವರ್ಷಗಳ ಕಾಲ, ಈ ಮಿಶ್ರಣ ಬಹಳ ಕನಿಷ್ಠ ಪ್ರಮಾಣದಲ್ಲಿತ್ತು.

ಈ ಎಥೆನಾಲ್ ಎಂದರೆ ನಿಜಕ್ಕೂ ಏನು? ಇದು ಕಬ್ಬು, ಮೊಲಾಸಸ್, ಜೋಳ ಮತ್ತು ಹಾನಿಗೊಳಗಾದ ಆಹಾರ ಧಾನ್ಯಗಳಂತಹ ಹೆಚ್ಚಿನ ಸಕ್ಕರೆ ಪ್ರಮಾಣ ಹೊಂದಿರುವ ಬೆಳೆಗಳಿಂದ ಪಡೆಯುವ ಒಂದು ಆಲ್ಕೋಹಾಲ್ ಆಗಿದೆ. ಮೊದಲಾಗಿ, ಬೆಳೆಗಳಿಂದ ಸಕ್ಕರೆಯ ಅಂಶವನ್ನು ಹೊರತೆಗೆಯಲಾಗುತ್ತದೆ. ಬಳಿಕ, ಅದಕ್ಕೆ ಯೀಸ್ಟ್ ಬೆರೆಸಿದಾಗ, ಸಕ್ಕರೆ ನೈಸರ್ಗಿಕವಾದ ಹುದುಗು ಪ್ರಕ್ರಿಯೆಯ ಮೂಲಕ ಆಲ್ಕೋಹಾಲ್ ಆಗುತ್ತದೆ. ಆ ಬಳಿಕ, ಈ ಆಲ್ಕೋಹಾಲನ್ನು ಕಾಯಿಸಿ, ಶುದ್ಧೀಕರಿಸಿ, ಶುದ್ಧವಾದ ಎಥೆನಾಲ್ ಪಡೆಯಲಾಗುತ್ತದೆ. ಇದನ್ನು ಪೆಟ್ರೋಲ್ ಜೊತೆ ಬೆರೆಸಲಾಗುತ್ತದೆ.

ಆದರೆ, 2014ರಲ್ಲಿ ಎಲ್ಲವೂ ಬದಲಾಯಿತು. ಸರ್ಕಾರ ಎಥೆನಾಲ್‌ಗೆ ಒಂದು ಸ್ಥಿರ ಬೆಲೆಯ ಭರವಸೆ ನೀಡಿದ್ದರಿಂದ, ಉತ್ಪಾದಕರಿಗೂ ತಮಗೆ ಎಷ್ಟು ಆದಾಯ ಲಭಿಸುತ್ತದೆ ಎನ್ನುವುದು ಸ್ಪಷ್ಟವಾಯಿತು. ಇದು ಅವರಿಗೆ ಹೆಚ್ಚಿನ ಹೂಡಿಕೆ ನಡೆಸಿ, ಘಟಕಗಳನ್ನು ವಿಸ್ತರಿಸಲು ಆತ್ಮವಿಶ್ವಾಸ ನೀಡಿತು. ಇದಕ್ಕಾಗಿ ನಿಯಮಗಳನ್ನೂ ಸಡಿಲಗೊಳಿಸಿ, ಎಥೆನಾಲನ್ನು ನೇರವಾಗಿ ಕಬ್ಬಿನ ರಸ ಮತ್ತು ಹೆಚ್ಚುವರಿ ಧಾನ್ಯಗಳಿಂದ ಉತ್ಪಾದಿಸಲು ಸಾಧ್ಯವಾಯಿತು. ಇದರ ಫಲಿತಾಂಶ ನಿಜಕ್ಕೂ ಗಮನಾರ್ಹವಾಗಿತ್ತು. 2014ರಲ್ಲಿ 1.5% ಇದ್ದ ಮಿಶ್ರಣದ ಪ್ರಮಾಣ, 2022ರಲ್ಲಿ 10% ತಲುಪಿತು. ಈ ಮೂಲಕ ನೀಡಿದ ಗಡುವಿಗಿಂತಲೂ ಐದು ತಿಂಗಳು ಮೊದಲೇ ಗುರಿ ಸಾಧಿಸಲಾಯಿತು.

ಇಷ್ಟೊಂದು ವೇಗವಾದ ಪ್ರಗತಿಯನ್ನು ಗಮನಿಸಿದ ಸರ್ಕಾರ ಇನ್ನಷ್ಟು ಧೈರ್ಯ ತಳೆದು, ಇ20 ಗುರಿಯನ್ನು 2030ರಿಂದ 2025ಕ್ಕೆ ಇಳಿಸಿತು. ಭಾರತ ಇದನ್ನೂ ಸಾಧಿಸಿ ತೋರಿಸಿತು. ಇದರ ಪರಿಣಾಮವಾಗಿ ಭಾರತ ವಿದೇಶೀ ವಿನಿಮಯದಲ್ಲಿ 1 ಲಕ್ಷ ಕೋಟಿ ರೂಪಾಯಿ ಉಳಿಸಿ, 544 ಲಕ್ಷ ಟನ್‌ಗಳಷ್ಟು ಇಂಗಾಲದ ಡೈಆಕ್ಸೈಡ್ ಕಡಿತಗೊಳಿಸಿತು. ಎಥೆನಾಲ್ ಮಿಶ್ರಿತ ಇಂಧನ ಹೆಚ್ಚು ಸ್ವಚ್ಛವಾಗಿ ಉರಿಯುವುದು ಇದಕ್ಕೆ ಕಾರಣವಾಗಿತ್ತು.

ಆದರೆ, ಈ ಯಶಸ್ಸು ಹೊಸ ತೊಂದರೆಯನ್ನೂ ಸೃಷ್ಟಿಸಿತು. ಉತ್ಸಾಹಭರಿತರಾದ ಉತ್ಪಾದಕರು ತಮ್ಮ ಸಾಮರ್ಥ್ಯವನ್ನು ಬಹಳಷ್ಟು ಹೆಚ್ಚಿಸಿದ ಪರಿಣಾಮವಾಗಿ, ಭಾರತ ಇಂದು ಬಹುತೇಕ 2,000 ಕೋಟಿ ಲೀಟರ್‌ಗಳಷ್ಟು ಎಥೆನಾಲ್ ಉತ್ಪಾದಿಸುತ್ತಿದೆ. ಆದರೆ, ಎಥೆನಾಲ್‌ಗೆ ಬೇಡಿಕೆ ಮಾತ್ರ ಅಷ್ಟರಮಟ್ಟಿಗೆ ಹೆಚ್ಚಲಿಲ್ಲ. ಇ20 ಪೆಟ್ರೋಲ್‌ಗೆ ವರ್ಷಕ್ಕೆ ಕೇವಲ 1,016 ಕೋಟಿ ಲೀಟರ್ ಎಥೆನಾಲ್ ಸಾಕಾಗುತ್ತದೆ. ಇದರೊಡನೆ, ಔಷಧಗಳು, ಸ್ಯಾನಿಟೈಸರ್‌ಗಳು, ಮದ್ಯ, ಮತ್ತು ರಾಸಾಯನಿಕಗಳಲ್ಲಿನ ಬಳಕೆಯನ್ನು ಸೇರಿಸಿದರೂ, ವಾರ್ಷಿಕವಾಗಿ 1,350 ಕೋಟಿ ಲೀಟರ್ ಎಥೆನಾಲ್ ಅಷ್ಟೇ ಬಳಕೆಯಾಗುತ್ತದೆ. ಸರಳವಾಗಿ ಹೇಳುವುದಾದರೆ, ನಾವು ಬಳಸುವುದಕ್ಕಿಂತಲೂ ಸಾಕಷ್ಟು ಹೆಚ್ಚಿನ ಎಥೆನಾಲನ್ನು ನಾವೀಗ ಉತ್ಪಾದಿಸುತ್ತಿದ್ದೇವೆ. ಬಹಳಷ್ಟು ಘಟಕಗಳು ಅರ್ಧದಷ್ಟು ಎಥೆನಾಲ್ ಹೊಂದಿರುವುದರಿಂದ, ಈ ಹೆಚ್ಚುವರಿ ಎಥೆನಾಲ್‌ಗೆ ತಕ್ಷಣವೇ ಹೊಸ ಮಾರುಕಟ್ಟೆಗಳ ಅಗತ್ಯವಿದೆ.

ಇಷ್ಟೊಂದು ಎಥೆನಾಲ್ ಹೆಚ್ಚುವರಿಯಾಗಿ ಉಳಿದಿದೆ ಎಂದಾದರೆ, ಅದನ್ನು ಡೀಸೆಲ್ ಜೊತೆ ಏಕೆ ಬೆರೆಸಬಾರದು ಎಂದು ನೀವು ಕೇಳಬಹುದು. ಏಕೆಂದರೆ, ಎಥೆನಾಲ್ ಮತ್ತು ಡೀಸೆಲ್ ಸರಿಯಾಗಿ ಬೆರೆಯದೆ, ಪರಸ್ಪರ ಪ್ರತ್ಯೇಕವಾಗೇ ಉಳಿಯುತ್ತವೆ. ಆದ್ದರಿಂದ, ಸದ್ಯದ ಪರಿಸ್ಥಿತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಎಥೆನಾಲ್ ಬಳಕೆ ಸಾಧ್ಯವಿರುವ ಇಂಧನವೆಂದರೆ ಅದು ಪೆಟ್ರೋಲ್ ಮಾತ್ರ.

ಇವೆಲ್ಲ ಕಾರಣಗಳಿಂದ, ಭಾರತ ಜೂನ್ 5ರಂದು ಇ85 ಇಂಧನ ಒದಗಿಸುವ 48 ಕೇಂದ್ರಗಳನ್ನು ಆರಂಭಿಸಿತು. ಸದ್ಯಕ್ಕೆ ನಮ್ಮಲ್ಲಿರುವ ಬಹುತೇಕ ಕಾರುಗಳು ಮತ್ತು ಸ್ಕೂಟರ್‌ಗಳು ಈ ಇಂಧನದಲ್ಲಿ ಚಲಿಸಲು ಸಾಧ್ಯವಿಲ್ಲ. ಆದರೆ, ಸರ್ಕಾರ ಎಲ್ಲರನ್ನೂ ರಾತ್ರೋರಾತ್ರಿ ಹೊಸ ಇಂಧನಕ್ಕೆ ಬದಲಾಗಿ ಎನ್ನುತ್ತಿಲ್ಲ. ಬದಲಿಗೆ, ಸರ್ಕಾರ 'ಫ್ಲೆಕ್ಸ್ ಫ್ಯುಯೆಲ್' ವಾಹನಗಳನ್ನು ಉತ್ತೇಜಿಸುತ್ತಿದೆ. ಫ್ಲೆಕ್ಸ್ ಫ್ಯುಯೆಲ್ ವಾಹನಗಳೆಂದರೆ ವಿಶೇಷ ವಾಹನಗಳಾಗಿದ್ದು, ಇ20ಯಿಂದ ಇ100 ತನಕ ಎಲ್ಲಾ ಪೆಟ್ರೋಲ್ ಬ್ಲೆಂಡ್‌ಗಳಲ್ಲೂ ಕಾರ್ಯಾಚರಿಸುತ್ತವೆ. ಹೀರೋ ಮೋಟೋಕಾರ್ಪ್ ಮತ್ತು ಮಾರುತಿ ಸುಜು಼ಕಿಯಂತಹ ದೊಡ್ಡ ಸಂಸ್ಥೆಗಳು ಈಗಾಗಲೇ ಫ್ಲೆಕ್ಸ್ ಫ್ಯುಯೆಲ್ ವಾಹನಗಳನ್ನು ನಿರ್ಮಿಸಲು ಆರಂಭಿಸಿವೆ.

ಇಷ್ಟಾದರೂ ಬಹಳಷ್ಟು ಅನುಮಾನಗಳು ಹಾಗೇ ಉಳಿದಿವೆ. ಈ ವಾಹನಗಳು ಎಷ್ಟು ಉತ್ತಮವಾಗಿ ಪ್ರದರ್ಶನ ನೀಡಬಲ್ಲವು? ಅವು ಎಷ್ಟರಮಟ್ಟಿಗೆ ನಂಬಿಕಾರ್ಹ? ಇವಕ್ಕೆ ಉತ್ತರ ಕಂಡುಕೊಳ್ಳುವ ಕಾರಣಕ್ಕೇ ಮಾರುತಿ ವ್ಯಾಗನಾರ್ ನಂತಹ ಫ್ಲೆಕ್ಸ್ ಫ್ಯುಯಲ್ ವಾಹನಗಳನ್ನು ಮೊದಲಿಗೆ ಖಾಸಗಿ ಗ್ರಾಹಕರಿಗೆ ಒದಗಿಸುವ ಬದಲು, ಓಲಾ ಉಬರ್‌ನಂತಹ ಟ್ಯಾಕ್ಸಿ ಸೇವಾ ಸಂಸ್ಥೆಗಳಿಗೆ ನೀಡಲಾಗುತ್ತಿದೆ. ಇದೊಂದು ಬುದ್ಧಿವಂತಿಕೆಯ ನಡೆಯೂ ಹೌದು. ಒಂದು ಖಾಸಗಿ ವಾಹನ ಹತ್ತು ವರ್ಷಗಳಲ್ಲಿ ಕ್ರಮಿಸುವ ದೂರವನ್ನು ಒಂದು ಟ್ಯಾಕ್ಸಿ ಕೇವಲ ಎರಡು ಅಥವಾ ಮೂರು ವರ್ಷಗಳಲ್ಲಿ ಕ್ರಮಿಸಿಬಿಡುತ್ತದೆ. ಇದು ಇಂಜಿನ್ ಬಾಳಿಕೆಯಂತಹ ನೈಜ ಮಾಹಿತಿಗಳು ಬೇಗನೇ ಲಭಿಸಲು ನೆರವಾಗುತ್ತದೆ. ಸಾಮಾನ್ಯ ಗ್ರಾಹಕರು ಈ ವರದಿಯ ಅಂಕಿಅಂಶಗಳು ಲಭಿಸುವ ತನಕ ಕಾಯಬಹುದು. ಒಂದು ಟ್ಯಾಕ್ಸಿ ಹಲವು ಖಾಸಗಿ ಕಾರುಗಳು ದಹಿಸುವುದಕ್ಕಿಂತ ಹೆಚ್ಚಿನ ಎಥೆನಾಲ್ ದಹಿಸುವುದರಿಂದ, ಬೇಡಿಕೆಯೂ ಹೆಚ್ಚು ಮತ್ತು ನಿರಂತರವಾಗಿ ಮುಂದುವರಿಯುತ್ತದೆ.

ಆದರೆ, ಈ ಕುರಿತು ಪ್ರಾಮಾಣಿಕವಾಗಿಯೂ ಇರಬೇಕು. ಏಕೆಂದರೆ, ಇದಕ್ಕೂ ನಾವು ಒಂದು ಬೆಲೆ ತೆರಬೇಕಿದೆ. ಹೆಚ್ಚಿನ ಎಥೆನಾಲ್ ಉತ್ಪಾದನೆಗೆ ಹೆಚ್ಚು ಹೆಚ್ಚು ನೀರಿನ ಬೇಡಿಕೆ ಹೊಂದಿರುವ ಬೆಳೆಗಳನ್ನು ಬೆಳೆಯಬೇಕಾಗುತ್ತದೆ. ಅಕ್ಕಿಯಿಂದ ಕೇವಲ ಒಂದು ಲೀಟರ್ ಎಥೆನಾಲ್ ಉತ್ಪಾದಿಸಲು 10,000 ಲೀಟರ್ ನೀರಿನ ಅಗತ್ಯವಿದ್ದು, ಇದು ಅನಿಶ್ಚಿತ ಮಾನ್ಸೂನ್ ನಡುವೆ ಆತಂಕದ ಅಂಶವಾಗಿದೆ. ಇ85 ಇಂಧನ ಸಾಮಾನ್ಯ ಪೆಟ್ರೋಲ್‌ಗೆ ಹೋಲಿಸಿದರೆ, ಪ್ರತಿ ಲೀಟರ್‌ಗೆ 20 ರೂಪಾಯಿ ಕಡಿಮೆ ಇದೆ. ಆದರೆ, ಇದು ಕಡಿಮೆ ಶಕ್ತಿ ಹೊಂದಿರುವುದರಿಂದ, ವಾಹನಗಳು ಹೆಚ್ಚಿನ ಪ್ರಮಾಣದ ಇಂಧನವನ್ನು ದಹಿಸಬೇಕಾಗುತ್ತದೆ. ಇದರಿಂದಾಗಿ ಉಳಿತಾಯವೂ ನಾವು ಅಂದುಕೊಂಡ ಪ್ರಮಾಣದಲ್ಲಿ ಇರಲಿಕ್ಕಿಲ್ಲ.

ಒಂದು ಕಾಲದಲ್ಲಿ ಇ20 ಗುರಿಯನ್ನು ತಲುಪುವುದು ದೊಡ್ಡ ಪರ್ವತವನ್ನು ಹತ್ತುವಂತೆ ಭಾಸವಾಗುತ್ತಿತ್ತು. ಆದರೆ ಇಂದು, ಮಾತುಕತೆಗಳು ಮುಂದಿನ ಇಂಧನ ಏನು ಎನ್ನುವುದರತ್ತ ಸಾಗುತ್ತಿವೆ. ಸದ್ಯದ ಮಟ್ಟಿಗೆ ನಾವು ಮುಂದೇನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ-ಇರಾನ್ ಶಾಂತಿ ಒಪ್ಪಂದ 'ಈಗ ಸಂಪೂರ್ಣ: ಜೂನ್ 19 ರಂದು ಸಹಿ ಹಾಕಿದ ಬಳಿಕ ಹಾರ್ಮುಜ್ ರೀ ಓಪನ್- ಡೊನಾಲ್ಡ್ ಟ್ರಂಪ್ ಘೋಷಣೆ!

ರಾಜ್ಯದಲ್ಲಿ ಮುಂಗಾರು ಚುರುಕು: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ yellow ಅಲರ್ಟ್, ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

ಜಗತ್ತನ್ನು ಬೆರಗುಗೊಳಿಸಿದ ಮಾನವ ನಿರ್ಮಿತ ಅದ್ಭುತಗಳು: ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಪ್ರವಾಸಿ ತಾಣಗಳಿವು..!

1993ರಲ್ಲಿ 3 ಎಕರೆ ಇದ್ದ ಆಸ್ತಿ 2018ಕ್ಕೆ 1,400 ಕೋಟಿ ಹೇಗಾಯ್ತು?: ರೈತರಿಗೂ ಶ್ರೀಮಂತರಾಗುವ ಮಾರ್ಗ ಹೇಳಿಕೊಡಿ; ಕುಮಾರಸ್ವಾಮಿ

ಕಾಂಗ್ರೆಸ್‌ನಲ್ಲಿ Muslim ಕೋಟಾಕ್ಕೆ ಪೈಪೋಟಿ; ಜಮೀರ್ ಪರ DK brothers ಬ್ಯಾಟಿಂಗ್, ಹೈಕಮಾಂಡ್ ಮೇಲೆ ಒತ್ತಡ..!

SCROLL FOR NEXT