ಕಾಂಗ್ರೆಸ್ ಧ್ವಜ 
ಅಂಕಣಗಳು

ಕೇರಳ ಚುನಾವಣೆ: ಕಾಂಗ್ರೆಸ್ ಗೆ ಮಾಡು ಇಲ್ಲವೇ ಮಡಿ ಹೋರಾಟ (ನೇರ ನೋಟ)

ಕೇರಳದಲ್ಲಿ ಅನೇಕ ವರ್ಷಗಳ ಕಾಲ ಒಮ್ಮೆ ಎಲ್‌ಡಿಎಫ್‌ ಮತ್ತೊಮ್ಮೆ ಯುಡಿಎಫ್‌ ನಡುವೆ ಅಡಳಿತ ಸೂತ್ರದ ಹಗ್ಗಜಗ್ಗಾಟ. ಇದು ಬ್ರೇಕ್‌ ಆಗಿದ್ದು 2021ರಲ್ಲಿ.

ಕಾಂಗ್ರೆಸ್ಸಿಗೆ ಇಲ್ಲಿ ಈ ಬಾರಿ ಮಾಡು ಇಲ್ಲ ಮಡಿ ಹೋರಾಟ. ಗೆಲುವಿಗಾಗಿ ಹರಸಾಹಸ. ಗೆದ್ದರೆ ರಾಷ್ಟ್ರಮಟ್ಟದಲ್ಲಿ ಸ್ವಲ್ಪ ಚೇತರಿಕೆ. ಸೋತರೆ ಮತ್ತಷ್ಟು ದುರ್ಬಲ. ಈ ಮಧ್ಯೆ ಪಕ್ಷದಲ್ಲಿರುವ ಬಣ ರಾಜಕಾರಣದ್ದೇ ಹೈಕಮಾಂಡಿಗೆ ಚಿಂತೆ. ಇದು ಕೇರಳದಲ್ಲಿ ಏಪ್ರಿಲ್‌ 9 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸ್ಥಿತಿ.

ಕರ್ನಾಟಕದ ನೆರೆಯ ರಾಜ್ಯ ಕೇರಳದಲ್ಲಿ ಈಗ ಚುನಾವಣೆಯ ಹವಾ. ವಿಧಾನಸಭೆಯ 140 ಕ್ಷೇತ್ರಗಳು ಇದೀಗ ಸಮರದ ಕಣ. ಕಳೆದ

ಹತ್ತು ವರ್ಷಗಳಿಂದ ಸಿಪಿಐ (ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗದ (ಎಲ್ ಡಿಎಫ್‌) ಆಳ್ವಿಕೆ. ಕಾಂಗ್ರೆಸ್‌ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್‌) ಪ್ರತಿಪಕ್ಷದಲ್ಲಿ. ಎಲ್‌ಡಿಎಫ್‌ ಹಾಗೂ ಯುಡಿಎಫ್‌ ನಡುವಿನ ಈ ನೇರ ಜಿದ್ದಾಜಿದ್ದಿಯಲ್ಲಿ ಬಿಜೆಪಿ ಸಾರಥ್ಯದ ಎನ್‌ಡಿಎ ಸಿಕ್ಕಿದಷ್ಟು ಸೀರುಂಡೆ ಎಂದು ನುಸುಳಲು ಕಸರತ್ತು.

ಅರಬ್ಬೀ ಸಮುದ್ರದ ದಡದಲ್ಲಿರುವ ಕೇರಳ ದೇವರನಾಡೆಂದು ಹೆಸರು. ಕೇರಳವನ್ನು ಭಾರತದ ರಾಜಕಾರಣದ ಪ್ರಯೋಗ ಶಾಲೆ ಎಂದು ಒಂದು ಕಾಲಘಟ್ಟದಲ್ಲಿ ಕರೆದಿದ್ದು ಉಂಟು. ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಕಮ್ಯುನಿಸ್ಟ್‌ ಸರಕಾರ ಮೊದಲು ರಚನೆಯಾಗಿದ್ದೇ ಕೇರಳದಲ್ಲಿ. ಅದು 05 ಏಪ್ರಿಲ್‌ 1957ರಂದು. ಆಗ ಮುಖ್ಯಮಂತ್ರಿಯಾದವರು ಸಿಪಿಐನ ಇ.ಎಂ.ಎಸ್‌.ನಂಬೂದರಿಪಾದ್‌. ಆ ಸರಕಾರದ ಕೆಲವು ನೀತಿಗಳಿಂದ 1958ರಲ್ಲಿ ವಿಮೋಚನಾ ಸಮರಮ್‌ (ವಿಮೋಚನಾ ಹೋರಾಟ) ಆರಂಭ. ಹಿಂಸಾಚಾರ ಭುಗಿಲು. ಪರಿಣಾಮ- ನಂಬೂದರಿಪಾದ್‌ ಸರಕಾರ ವಜಾ. ಆಗ ಕೇಂದ್ರದಲ್ಲಿದ್ದದ್ದು ಪ್ರಧಾನಿ ಜವಾಹರಲಾಲ್‌ ನೆಹರೂ ನೇತೃತ್ವದ ಕಾಂಗ್ರೆಸ್‌ ಸರಕಾರ. ಅದು 31 ಜುಲೈ 1959. ಕೇರಳ ಅವತ್ತಿನಿಂದ ಇವತ್ತಿನವರೆಗೂ ಎಡಪಂಥೀಯರ ನೆಲೆ.

ಕೇರಳದಲ್ಲಿ ಅನೇಕ ವರ್ಷಗಳ ಕಾಲ ಒಮ್ಮೆ ಎಲ್‌ಡಿಎಫ್‌ ಮತ್ತೊಮ್ಮೆ ಯುಡಿಎಫ್‌ ನಡುವೆ ಅಡಳಿತ ಸೂತ್ರದ ಹಗ್ಗಜಗ್ಗಾಟ. ಇದು ಬ್ರೇಕ್‌ ಆಗಿದ್ದು 2021ರಲ್ಲಿ. ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ಗೆ 2016 ಹಾಗೂ 2021 ಎರಡೂ ಚುನಾವಣೆಗಳಲ್ಲಿ ಸತತ ಗೆಲುವು. ಕಾಂಗ್ರೆಸ್‌ ಎರಡು ಚುನಾವಣೆಗಳ ಕಹಿ ಅನುಭವದಿಂದ ಪಾಠ ಕಲಿತಂತೆ ತೋರಿಸಿಕೊಂಡರೂ ಆಂತರಿಕವಾಗಿ ಈ ರಾಷ್ಟ್ರೀಯ ಪಕ್ಷದಲ್ಲಿ ಬಣ ರಾಜಕಾರಣದ್ದೇ ಸದಾ ಸದ್ದು.

ಕಾಂಗ್ರೆಸ್‌ ಅಧಿನಾಯಕರಾದ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ರಾಜಕಾರಣಕ್ಕೂ ಕೇರಳಕ್ಕೂ ಒಂದು ರೀತಿಯ ನಂಟು. ರಾಹುಲ್‌ ಗಾಂಧಿ ಅವರಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಅಮೇಥಿ ಹಾಗೂ ದಕ್ಷಿಣದ ಕೇರಳದ ವಯನಾಡು ಕ್ಷೇತ್ರದಿಂದಲೂ ಸ್ಪರ್ಧೆ. ಅಮೇಥಿಯ ಜನರು ರಾಹುಲ್‌ ಕೈಹಿಡಿಯಲಿಲ್ಲ. ವಯನಾಡುವಿನ ಮತದಾರರು ಕೈಬಿಡಲಿಲ್ಲ.

ರಾಹುಲ್‌ ಗಾಂಧಿ 2024ರ ಚುನಾವಣೆಯಲ್ಲಿ ರಾಯ್‌ಬರೇಲಿ ಹಾಗೂ ವಯನಾಡು ಎರಡೂ ಕ್ಷೇತ್ರಗಳಿಂದ ಕಣಕ್ಕೆ ಇಳಿದು ಜಯ. ವಯನಾಡು ಕ್ಷೇತ್ರವನ್ನು ಬಿಟ್ಟುಕೊಟ್ಟರು. ರಾಹುಲ್‌ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು.

ಕೇರಳ ಕಾಂಗ್ರೆಸ್‌ನಲ್ಲಿ ಲಾಗಾಯ್ತಿನಿಂದಲೂ ಬಣ ರಾಜಕಾರಣದ್ದೇ ಕಾರುಬಾರು. ಒಂದು ಕಾಲದಲ್ಲಿ ಕಾಂಗ್ರೆಸ್ಸಿನಲ್ಲಿಯೇ ಕೆ.ಕರುಣಾಕರನ್‌ ಹಾಗೂ ಎ.ಕೆ.ಆಂಟನಿ ಅವರ ಆಂತರಿಕ ಸಮರ ನಿತ್ಯ ಸುದ್ದಿ. ಇಬ್ಬರೂ ನಾಯಕರು ಪರಸ್ಪರ ಜಿದ್ದಿಗೆ ಬಿದ್ದವರು. ಎಷ್ಟರಮಟ್ಟಿಗೆ ಎಂದರೆ ಕೇರಳದ ಕಾಂಗ್ರೆಸ್ಸಿಗರು ಈ ಎರಡರಲ್ಲಿ ಯಾವುದಾದರೂ ಒಂದು ಬಣದಲ್ಲಿ ಗುರುತಿಸಿಕೊಳ್ಳಬೇಕಿತ್ತು.

ಕರುಣಾಕರನ್‌ ನಾಲ್ಕು ಬಾರಿ ಹಾಗೂ ಆಂಟನಿ ಮೂರು ಬಾರಿ ಕೇರಳದ ಮುಖ್ಯಮಂತ್ರಿಯಾಗಿದ್ದವರು. ನಂತರ ಕರುಣಾಕರನ್‌ ಡೆಮಾಕ್ರಾಟಿಕ್‌ ಇಂದಿರಾ ಕಾಂಗ್ರೆಸ್‌ ಪಕ್ಷವನ್ನು ಸ್ಥಾಪಿಸಿದ್ದರು. ಕರುಣಾಕರನ್‌ ಪುತ್ರಿ ಪದ್ಮಜಾ ವೇಣುಗೋಪಾಲ್‌ ಹಾಗೂ ಆಂಟನಿ ಪುತ್ರ ಅನಿಲ್‌ ಆಂಟನಿ ಇಬ್ಬರೂ ವಿಭಿನ್ನ ಸಂದರ್ಭಗಳಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದವರು.

ಅಖಿಲ ಭಾರತ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್‌, ವಿಧಾನಸಭೆ ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್‌, ಮಾಜಿ ಸಚಿವ ರಮೇಶ್ ಚೆನ್ನಿತ್ತಲ ಕೇರಳ ಕಾಂಗ್ರೆಸ್‌ನಲ್ಲಿ ಇವತ್ತು ಪ್ರಮುಖ ನಾಯಕರು. ಈ ಮೂವರೂ ಮುಂದುವರಿದ ನಾಯರ್‌ ಸಮುದಾಯದವರು. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟವರು. ವೇಣುಗೋಪಾಲ್ ಆಲಪ್ಪುಳ ಕ್ಷೇತ್ರದ ಲೋಕಸಭಾ ಸದಸ್ಯರು. ರಾಹುಲ್‌ ಗಾಂಧಿ ಆಪ್ತರು. ರಮೇಶ್‌ ಚೆನ್ನಿತ್ತಲ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿದ್ದವರು.

ಕೇರಳ ಕಾಂಗ್ರೆಸ್‌ನಲ್ಲಿ ಸಂಸದರು ವಿಧಾನಸಭಾ ಚುನಾವಣೆಗೆ ಟಿಕೆಟ್‌ ಕೇಳುತ್ತಿದ್ದಾರೆ. ಇದು ಅಲ್ಲಿ ಬಿಕ್ಕಟ್ಟು ಸೃಷ್ಟಿಸಿದೆ. ಲೋಕಸಭಾ ಸದಸ್ಯರಾದ ಕೆ.ಸುಧಾಕರನ್‌ ಕಣ್ಣೂರಿನಿಂದ, ಆಡೂರು ಪ್ರಕಾಶ್‌ ಕೊನ್ನಿ ಕ್ಷೇತ್ರದ ಪ್ರಬಲ ಟಿಕೆಟ್‌ ಆಕಾಂಕ್ಷಿಗಳು. ಹಿಂದುಳಿದ ಈಳವ ಸಮಾಜದ ಈ ಇಬ್ಬರು ನಾಯಕರಿಗೆ ರಾಜ್ಯ ರಾಜಕಾರಣಕ್ಕೆ ವಾಪಸಾಗುವ ತವಕ. ಆದರೆ, ಜಾತಿ ರಾಜಕಾರಣದಲ್ಲಿ ಇದಕ್ಕೆ ಕೆಲವರ ಅಡ್ಡಗಾಲು. ಇದರಿಂದಾಗಿ ಹಿರಿಯ ನಾಯಕ ಸುಧಾಕರನ್ ಅವರಿಗೆ ಬೇಸರ. ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರೂ ಆದ ಸುಧಾಕರನ್‌ ಪಕ್ಷ ತೊರೆಯುವ ಚಿಂತನೆ. ಕಡೇ ಘಳಿಗೆಯಲ್ಲಿ ಎ.ಕೆ.ಆಂಟನಿ ಅವರಿಂದ ಮನವೊಲಿಕೆ ಪ್ರಯತ್ನ. ಸುಧಾಕರನ್‌ ಅವರಿಗೆ ಟಿಕೆಟ್‌ ವಿಚಾರ ಇನ್ನೂ ತೂಗೂಯ್ಯಾಲೆಯಲ್ಲಿ. ಟಿಕೆಟ್‌ ಹಂಚಿಕೆಯಲ್ಲಿ ತಮ್ಮ ಕೈ ಮೇಲಾಗಬೇಕೆಂದು ನಾಯಕರ ಮಧ್ಯೆ ಪ್ರಬಲ ಪೈಪೋಟಿ. ಹೈಕಮಾಂಡ್‌ ನಿರ್ಧಾರ ಕುತೂಹಲಕಾರಿ.

ಕಾಂಗ್ರೆಸ್ಸಿಗೆ ಕೇರಳದಲ್ಲಿ ಮುಖ್ಯಮಂತ್ರಿ ಹುದ್ದೆಯ ವಿಚಾರದಲ್ಲಿ ಎಲ್ಲರಿಗೂ ಒಪ್ಪಿಗೆಯಾಗುವಂತಹ ಒಬ್ಬ ನಾಯಕರಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಚುನಾವಣಾ ಪ್ರಚಾರವನ್ನು ಮುನ್ನಡೆಸುವ ಸ್ಥಳೀಯ ಸಮರ್ಥ ನಾಯಕತ್ವ ಇಲ್ಲ. ಹೀಗಾಗಿ, ಕಾಂಗ್ರೆಸ್‌ ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿಯನ್ನೂ ಬಿಂಬಿಸಿಲ್ಲ. ಬಣ ರಾಜಕಾರಣವಿದ್ದರೂ ಒಂದು ಕಾಲದಲ್ಲಿ ಕರುಣಾಕರನ್‌, ಆಂಟನಿ ಅವರಂತಹ ಪ್ರಬಲ ನಾಯಕರಿದ್ದರು. ಆಂಟನಿ ಅವರು ರಾಜಕಾರಣದಲ್ಲಿ ಸಕ್ರಿಯರಾಗಿಲ್ಲ. ವೇಣುಗೋಪಾಲ್‌, ಸುಧಾಕರನ್‌, ರಮೇಶ್‌ ಚೆನ್ನಿತ್ತಲ, ಸತೀಶನ್‌ ಮತ್ತಿತರ ಕೆಲವು ನಾಯಕರಿಗೆ ಅವರದ್ದೇ ಆದ ಹಿಂಬಾಲಕರ ಪಡೆ ಇದೆ. ಇದನ್ನು ನೋಡಿಯೇ ರಾಹುಲ್‌ ಗಾಂಧಿ ಅವರು ಇತ್ತೀಚೆಗೆ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಹೀಗೆ ಹೇಳಿದ್ದರು – “ಗ್ರೂಪ್‌ ಡ್ಯಾನ್ಸ್‌ನಲ್ಲಿ ಹೇಗೆ ಎಲ್ಲರೂ ಪರಸ್ಪರ ಹೊಂದಾಣಿಕೆಯಿಂದ ಡ್ಯಾನ್ಸ್‌ ಮಾಡುತ್ತಾರೆಯೋ ಅದೇ ರೀತಿ ಕೇರಳದಲ್ಲಿ ಕಾಂಗ್ರೆಸ್‌ ನಾಯಕರು ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಬೇಕು’’. ರಾಹುಲ್‌ ನಿರ್ದೇಶನದಂತೆ ‘ಕಲಾವಿದರು’ ಡ್ಯಾನ್ಸ್‌ ಮಾಡುತ್ತಾರೆಯೋ ನೋಡಬೇಕು.

ಕಾಂಗ್ರೆಸ್ಸಿಗೆ ಕೇರಳದ ಜನತೆ ಈ ಬಾರಿ ತಮ್ಮ ಕೈಹಿಡಿಯುತ್ತಾರೆಂಬ ವಿಶ್ವಾಸ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಕಳೆದ ಡಿಸೆಂಬರ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಗೆಲುವು, ಕಳೆದ 2024ರ ಲೋಕಸಭಾ ಚುನಾವಣೆಯಲ್ಲಿ ತನ್ನ ನೇತೃತ್ವದ ಯುಡಿಎಫ್‌ 20ರಲ್ಲಿ 18 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದು, ಐದು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ನಾಲ್ಕರಲ್ಲಿ ವಿಜಯ.

ಕೇರಳದಲ್ಲಿ ಈ ಬಾರಿ ಕಾಂಗ್ರೆಸ್ ಗೆದ್ದರೆ ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ ವೇಣುಗೋಪಾಲ್‌ ಕಣ್ಣೂರು ಜಿಲ್ಲೆಯವರು. ಗಣಿತದಲ್ಲಿ ಸ್ನಾತಕೋತ್ತರ ಪದವೀಧರರು. ರಾಜಕೀಯ ಲೆಕ್ಕಾಚಾರದಲ್ಲೂ ಸೈ.

ವೇಣುಗೋಪಾಲ್‌ ಪ್ರಾರಂಭದಲ್ಲಿ ಗುರುತಿಸಿಕೊಂಡಿದ್ದು ಕರುಣಾಕರನ್‌ ಬಣದಲ್ಲಿ. ನಿಧಾನವಾಗಿ ಆಂಟನಿ ಬಣಕ್ಕೆ ಸರಿದರು. ವೇಣುಗೋಪಾಲ್‌ ಆಗ ಮೂರು ಬಾರಿ ಶಾಸಕರಾಗಿದ್ದರು. ಕೇರಳದಲ್ಲಿ ಸಚಿವರೂ ಆಗಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅಲಪ್ಪುಳ ಲೋಕಸಭಾ ಕ್ಷೇತ್ರದಿಂದ 2009ರಲ್ಲಿ ಕಣಕ್ಕಿಳಿದು ಗೆದ್ದರು. ಮೊದಲ ಬಾರಿಗೆ ಸಂಸದರಾಗಿ ಡಾ.ಮನಮೋಹನಸಿಂಗ್‌ ಸಂಪುಟದಲ್ಲಿ ಸಚಿವರೂ ಆದರು. ಆಗ ಇದಕ್ಕೆ ಕಾರಣರಾಗಿದ್ದು ಆಂಟನಿ ಅವರು.

ರಾಹುಲ್‌ ಗಾಂಧಿ ಅವರು 2019ರಲ್ಲಿ ಅಮೇಥಿ ಜೊತೆ ವಯನಾಡು ಕ್ಷೇತ್ರದಲ್ಲೂ ಕಣಕ್ಕಿಳಿಯಲು ಮುಖ್ಯ ಕಾರಣ ವೇಣುಗೋಪಾಲ್‌. ರಾಹುಲ್‌ ಗಾಂಧಿ ಅವರಿಗೆ ಅಮೇಥಿ ಸುರಕ್ಷಿತವಲ್ಲ ಎಂದು ಗೊತ್ತಾದಾಗ ಅವರನ್ನು ಕೇರಳಕ್ಕೆ ಕರೆತಂದಿದ್ದು ವೇಣುಗೋಪಾಲ್‌ ಹಾಗೂ ಎ.ಕೆ.ಆಂಟನಿ ಅವರು. ಆ ಚುನಾವಣೆಯಲ್ಲಿ ವೇಣುಗೋಪಾಲ್‌ ಸ್ಪರ್ಧಿಸದೇ ರಾಹುಲ್ ಗಾಂಧಿ ಅವರ ಗೆಲುವಿಗಾಗಿ ವಯನಾಡುವಿನಲ್ಲಿ ಶ್ರಮಿಸಿದರು. ರಾಹುಲ್‌ ಗೆದ್ದರು.

ಕೇರಳ ಕಾಂಗ್ರೆಸ್‌ನಲ್ಲಿ ವೇಣುಗೋಪಾಲ್‌ ಅವರಿಗೆ ಪ್ರತಿಸ್ಪರ್ಧಿ ರಮೇಶ್‌ ಚೆನ್ನಿತ್ತಲ. ರಮೇಶ್‌ ಅವರೂ ನಾಯರ್‌ ಸಮುದಾಯದವರು. ಸಂಘಟನೆಯಲ್ಲಿ ನಿಸ್ಸೀಮರು. ಚೆನ್ನಿತ್ತಲ ಪ್ರಾರಂಭದಲ್ಲಿ ಕರುಣಾಕರನ್‌ ಗುಂಪಿನಲ್ಲೇ ಇದ್ದವರು. ನಂತರ ಹೊರ ಬಂದವರು. ಈ ಮಧ್ಯೆ ಕಾಂಗ್ರೆಸ್‌ನಲ್ಲಿ ಹಿಂದುಳಿದ ಈಳವರಿಗೆ ಮುಖ್ಯಮಂತ್ರಿ ಸ್ಥಾನದಿಂದ ತಾವು ವಂಚಿತರಾಗುತ್ತಿದ್ದೇವೆ ಎಂಬ ಅಸಮಾಧಾನವೂ ಇದೆ.

ಕೇರಳದಲ್ಲಿ ಗೆಲುವು ಕಾಂಗ್ರೆಸ್ಸಿಗೆ ಕೇಕ್‌ವಾಕ್‌ ಅಲ್ಲ.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia war: ಇರಾನ್ ಗ್ಯಾಸ್ ಫೀಲ್ಡ್ ಮೇಲಿನ ದಾಳಿ ‘ಸೋಲೋ ಆಪರೇಷನ್’; ಅಮೆರಿಕಾ ಪಾತ್ರವಿಲ್ಲ- ಇಸ್ರೇಲ್ ಸ್ಪಷ್ಟನೆ

ಯುಗಾದಿ ಆಯ್ತು, ಇದೀಗ ಎಲ್ಲೆಡೆ ಹೊಸ ತೊಡಕು ಸಂಭ್ರಮ: ಮಾಂಸ ಖರೀದಿಗೆ ಪಾಪಣ್ಣ ಮಟನ್‌ ಸ್ಟಾಲ್‌ ಮುಂದೆ ಜನರ ಕ್ಯೂ..!

ದೇವೇಗೌಡರು- ಕುಮಾರಸ್ವಾಮಿ ಅವರಿಗೆ ವಿಶಾಲ ಹೃದಯ ಇರಲಿಲ್ಲ: ಅವರನ್ನು ಪಿಎಂ- ಸಿಎಂ ಮಾಡಿದ್ದು ನಮ್ಮ ಪಕ್ಷ; ಡಿ.ಕೆ‌. ಶಿವಕುಮಾರ್

ಮೂತ್ರನಾಳದ ಸೋಂಕಿನ ಕುರಿತು ನಿರ್ಲಕ್ಷ ಬೇಡ: ಯುಟಿಐ ತಡೆಗಟ್ಟಲು ಇಲ್ಲಿದೆ ಮಾರ್ಗದರ್ಶನ..

ಹೈಕೋರ್ಟ್ ಮೊರೆ ಹೋದ ಗೌತಮ್ ಗಂಭೀರ್: 2.5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟ ಟೀಮ್ ಇಂಡಿಯಾ ಕೋಚ್!

SCROLL FOR NEXT