ಎಲ್ಲೆಡೆ ದುರಂಧರ್ ಸಿನಿಮಾದ ಚರ್ಚೆ. ಪ್ರಶಂಸೆಯೇ ಹೆಚ್ಚಿದ್ದರೂ, ಇದರ ಟೀಕಾಕಾರರು ಉಪಯೋಗಿಸುತ್ತಿರುವ ಒಂದು ಪದ ಎಂದರೆ ಇದು ಪ್ರಾಪಗಂಡಾ ಮೂವಿ ಅನ್ನೋದು. ಅಂದರೆ ಯಾರದೋ ಪರ ವಕಾಲತ್ತನ್ನು ಮಾಡುವುದಕ್ಕೆ, ಯಾರಿಗೋ ಪ್ರಚಾರ ಕೊಡುವುದಕ್ಕೆ ಸಿನಿಮಾ ಮಾಡಲಾಗಿದೆ ಎಂಬರ್ಥದಲ್ಲಿ ಈ ಮಾತುಗಳು. ದ ಕಾಶ್ಮೀರ್ ಫೈಲ್ಸ್ ಸೇರಿದಂತೆ ಈ ಹಿಂದಿನ ಹಲವು ಸಿನಿಮಾಗಳಿಗೂ ಈ ಟೀಕೆ ಕೆಲವರಿಂದ ಬಂದಿತ್ತು. ಇಂತಹ ಸಂದರ್ಭದಲ್ಲಿ ಸಹಜವಾಗಿಯೇ ಈ ಸಿನಿಮಾಗಳ ಸಮರ್ಥಕರು ಹಾಗೂ ಅಭಿಮಾನಿಗಳು ಇದು ಪ್ರಚಾರದ ಅರ್ಥಾತ್ ಪ್ರಾಪಗಂಡಾ ಹೊತ್ತ ಮೂವಿ ಅಲ್ಲ ಎಂಬ ತರ್ಕ ಮುಂದೊಡ್ಡುವುದಕ್ಕೆ ಪ್ರಯತ್ನ ಮಾಡುತ್ತಾರೆ.
ಆದರೆ ಇಲ್ಲಿರುವ ವಿಷಯ ಏನೆಂದರೆ, ಒಂದು ವಿಚಾರದಲ್ಲಿ ನಂಬಿಕೆ ಇದೆ ಎಂದಾದ ಮೇಲೆ ಅದನ್ನು ಕಥಾನಕದ ಸೊಬಗಿನಲ್ಲಿ ಕಟ್ಟಿಕೊಡುವುದು ಪ್ರಾಪಗಂಡಾ ಎಂದಾದರೆ, ಆ ಪ್ರಾಪಗಂಡಾ ಹಣೆಪಟ್ಟಿಯ ಮೇಲೆ ಏಕಾದರೂ ಭಯ ಇರಿಸಿಕೊಳ್ಳಬೇಕು ಎನ್ನುವುದು.
ಅದೆಂತಹುದೇ ವಾಸ್ತವವಾಗಿದ್ದಿರಲಿ, ಅದನ್ನು ಸಿನಿಮಾ ಮಾಧ್ಯಮದಲ್ಲಿ ತೋರಿಸಲು ನಿರ್ಧರಿಸಿದಕೂಡಲೇ ಅದಕ್ಕೊಂದು ಕಥಾನಕದ, ಆಕರ್ಷಕ ನಿರೂಪಣೆಯ ಚೌಕಟ್ಟು ಬೇಕೇ ಬೇಕಾಗುತ್ತದೆ. ಅದಿಲ್ಲದಿದ್ದರೆ ಸಾಕ್ಷ್ಯಚಿತ್ರವಾಗುತ್ತದೆ. ಯಾವುದೇ ವಿಷಯ ದೊಡ್ಡ ಪ್ರಮಾಣದಲ್ಲಿ ಜನಮಾನಸವನ್ನು ಮುಟ್ಟುವುದಕ್ಕೆ ಅದು ಕಥಾನಕದ ರೂಪದಲ್ಲೇ ಇರಬೇಕು. ಇದನ್ನು ಪ್ರಾಪಗಂಡಾ ಎನ್ನುವುದಾದರೆ, ಬಹುತೇಕ ಎಲ್ಲವೂ ಪ್ರಾಪಗಂಡಾವೇ. ಈ ಪ್ರಾಪಗಂಡಾ ಅಥವಾ ಪ್ರಚಾರವೈಭವವು ಕೆಟ್ಟ ಸಂಗತಿಗಳಿಗೂ ಜತೆಯಾಗುತ್ತದೆ, ಒಳ್ಳೆ ಸಂಗತಿಗಳಿಗೂ ಜತೆಯಾಗುತ್ತದೆ. ಒಳ್ಳೆಯ ಸಂಗತಿ ಜನಮಾನಸವನ್ನು ಆವರಿಸಿಕೊಂಡು ಕೆಟ್ಟ ವಿಚಾರಗಳು ಕಡಿಮೆ ಜಾಗ ಪಡೆಯುತ್ತವೆ ಎಂದಾದರೆ ಅಂಥ ಕಡೆಗಳಲ್ಲಿ ಪ್ರಚಾರ ವೈಭವ ಆಗಲಿ ಬಿಡಿ.
ಗೊತ್ತಿರಲಿ, ಯಾವುದೇ ದೇಶ ಮತ್ತು ನಾಗರಿಕತೆ ಉಳಿದು ಬೆಳೆಯಬೇಕೆಂದರೆ ಅಲ್ಲಿ ಗಟ್ಟಿಯಾದ್ದೊಂದು ಕಥಾನಕದ ಶಕ್ತಿ ಇರಬೇಕು. ಕತೆಗೂ ವಾಸ್ತವಕ್ಕೂ ಅತಿಯಾದ ಅಂತರ ಇರಬಾರದೆಂಬುದೇನೋ ಹೌದು. ಹಾಗೆ ಅಂತರ ಅತಿಯಾಗಿದ್ದರೆ ಜನರೇ ಅದನ್ನು ತಿರಸ್ಕರಿಸಿಬಿಡುತ್ತಾರೆ. ಆದರೆ, ಸಾಧನೆಯೊಂದು ಸಾಕಾರವಾಗಿದ್ದೇ ಹೌದಾಗಿದ್ದರೆ ಅದನ್ನು ಕತೆಗಳಲ್ಲಿರಿಸಿ ಅದರ ವೈಭವ ಹೆಚ್ಚಿಸುವುದು ಅಗತ್ಯವಾಗಿ ಆಗಲೇಬೇಕಿರುವ ಕೆಲಸ. ಏಕೆಂದರೆ ಸಾಮಾನ್ಯರು ನೆನಪಿಟ್ಟುಕೊಳ್ಳುವುದು ಕತೆಗಳನ್ನೇ ಹೊರತು ದಿನಾಂಕ ಮತ್ತು ಅಂಕಿಸಂಖ್ಯೆಗಳನ್ನಲ್ಲ.
ಅಮೆರಿಕವು ಡಾಲರ್ ಬಲದಲ್ಲಿ ಜಗತ್ತಿನ ಆರ್ಥಿಕ ಶಕ್ತಿ ಎಂಬುದೇನೋ ನಿಜ. ಆದರೆ, ಈ ಆರ್ಥಿಕ ಬಲದ ಜತೆ ಜತೆಗೆ ಅಮೆರಿಕವನ್ನು ಜಗತ್ತಿನ ಬಹುಪಾಲು ಮಂದಿ ನಿಜಕ್ಕೂ ಸೂಪರ್ ಪವರ್ ಎಂದು ನೆಚ್ಚಿಕೊಂಡಿರುವುದು ಜನಪ್ರಿಯ ಮಾದರಿಯಲ್ಲಿ ಅದಕ್ಕಿರುವ ಕತೆ ಹೇಳುವ ಶಕ್ತಿಯಿಂದ. ಬ್ಯಾಟ್ಮನ್, ಸೂಪರ್ ಮ್ಯಾನ್ ಹೀಗೆ ಏನೇ ಕತೆಗಳಿದ್ದಿರಬಹುದು, ಅವು ಫ್ಯಾಂಟಸಿ ಅಂತ ನೋಡುವವರಿಗೆಲ್ಲ ಗೊತ್ತಿದ್ದರೂ, ಅಲ್ಲಿರುವ ಕಥಾನಕ ಶಕ್ತಿಯೊಂದು ಕೆಲವು ಗ್ರಹಿಕೆಗಳನ್ನು ನಮಗರಿವಿಲ್ಲದಂತೆ ನಮ್ಮ ಮನಸ್ಸಿಗೆ ಇಳಿಸಿರುತ್ತದೆ. ಜಗತ್ತಿನ ಯಾವುದೇ ಭಾಗ ಸಂಕಷ್ಟಕ್ಕೆ ಸಿಲುಕಲಿ, ಅನ್ಯಗ್ರಹಜೀವಿಗಳಿಂದಲೇ ಭೂಮಿಗೆ ಆಪತ್ತು ಬಂದಿರಲಿ, ಅಲ್ಲಿ ವಿಶ್ವವನ್ನೆಲ್ಲ ರಕ್ಷಿಸುವ ವ್ಯಕ್ತಿ ಅಮೆರಿಕದ ನೆಲದಿಂದ ಬಂದ ಹೀರೋವೇ ಆಗಿರುತ್ತಾನೆ.
ಆದರೆ, ವಾಸ್ತವ ಏನು? ಅಮೆರಿಕದ ಬಳಿ ಆರ್ಥಿಕ ಶಕ್ತಿ, ಮಿಲಿಟರಿ ಶಕ್ತಿ, ತಂತ್ರಜ್ಞಾನ ಶಕ್ತಿಗಳೆಲ್ಲ ಇರುವುದು ಖರೆ. ಆದರೆ ಅಷ್ಟೆಲ್ಲ ಇಟ್ಟುಕೊಂಡೂ ಅದು ತಾನು ಒಳಹೊಕ್ಕ ಸಂಘರ್ಷಗಳಲ್ಲಿ ನಿಜಕ್ಕೂ ವಿಜಯ ಸಾಧಿಸಿದೆಯೇ ಎಂಬುದನ್ನು ತಥ್ಯಗಳ ಆಧಾರದಲ್ಲಿ ನೋಡಿದರೆ ಅದು ಪ್ರಶ್ನಾರ್ಹವೇ ಆಗಿಬಿಡುತ್ತದೆ. ಉದಾಹರಣೆಗೆ, 1960ರ ವೇಳೆಗೆ ವಿಯೆಟ್ನಾಂ ಎಂಬ ಚಿಕ್ಕ ದೇಶವನ್ನು ಕಮ್ಯುನಿಸ್ಟ್ ಆಗುವುದರಿಂದ ತಡೆಯುತ್ತೇನೆಂದು 50 ಸಾವಿರ ಪಡೆಯೊಂದಿಗೆ ಅಲ್ಲಿಗೆ ಕಾಲಿಟ್ಟಿದ್ದ ಅಮೆರಿಕವು ಅಲ್ಲಿನ ಗೆರಿಲ್ಲಾ ಯುದ್ಧತಂತ್ರಕ್ಕೆ ಬಲವಳಿದು 1973ರ ವೇಳೆಗೆ ಹಿಂದಕ್ಕೆ ಬರಬೇಕಾಯಿತು.
ಇರಾಕಿಗೆ ನುಗ್ಗಿ ಸದ್ದಾಂ ಹುಸೇನನನ್ನು ಬಂಧಿಸಿದೆ ಎಂದು ಬೀಗಿದ್ದಷ್ಟೇ ಬಂತು. ನಂತರದ ದಿನಗಳಲ್ಲಿ ಅಲ್ಲಿನ ಪರಿಸ್ಥಿತಿ ಸದ್ಧಾಂ ಅವಧಿಗಿಂತ ಬಿಗಡಾಯಿಸಿತು, ಐಎಸ್ಐಎಸ್ ಹುಟ್ಟಿಕೊಂಡಿತು. ಅಫಘಾನಿಸ್ತಾನದಲ್ಲಿ ಅಷ್ಟೆಲ್ಲ ದಿನ ಬೀಡು ಬಿಟ್ಟಿದ್ದರೂ ಆ ದೇಶವನ್ನು ಇಡಿಇಡಿಯಾಗಿ ನಿಯಂತ್ರಣಕ್ಕೆ ತೆಗೆದುಕೊಂಡು ಹೊಸದಿಕ್ಕು ತೋರಿಸುವುದೇನೂ ಅಮೆರಿಕಕ್ಕೆ ಸಾಧ್ಯವಾಗಲಿಲ್ಲ. ಇಷ್ಟೆಲ್ಲ ತಥ್ಯಗಳ ನಡುವೆಯೂ ಜನಸಾಮಾನ್ಯರಲ್ಲಿ ಬೇರೂರಿಬಿಟ್ಟಿರುವ ಗ್ರಹಿಕೆ ಎಂದರೆ ಅಮೆರಿಕವು ಯಾವ ದೇಶದಲ್ಲಿ ಸಹ ಕಾರ್ಯಾಚರಣೆ ನಡೆಸಿ ದಕ್ಕಿಸಿಕೊಳ್ಳಬಲ್ಲದು ಎನ್ನೋದು. ಅದಕ್ಕೆ ಬಹುದೊಡ್ಡ ಯೋಗದಾನ ಇರುವುದು ಸಿನಿಮಾವೇ ಮೊದಲಾದ ಜನಪ್ರಿಯ ಮಾಧ್ಯಮಗಳಲ್ಲಿ ಅಮೆರಿಕವು ತನ್ನ ಕತೆ ಹೇಳಿಕೊಳ್ಳುವ ಪರಿ.
2012ರಲ್ಲಿ ‘ಜಿರೋ ಡಾರ್ಕ್ ಥರ್ಟಿ’ ಎಂಬ ಸಿನಿಮಾವೊಂದು ಬಂದು ಭಾರಿ ಮೆಚ್ಚುಗೆ ಗಳಿಸಿತ್ತು. ಒಸಾಮಾ ಬಿನ್ ಲಾಡೆನ್ ನನ್ನು ಹೇಗೆ ಹುಡುಕಿ ಕೊಲ್ಲಲಾಯಿತು ಎಂಬ ಕತೆಯನ್ನು ಹೇಳುವ ಈ ಸಿನಿಮಾದ ನಿರ್ಮಾಣ ಕೌಶಲ, ಕಥನಶೈಲಿ ಎಲ್ಲವೂ ತುಂಬ ಉತ್ತಮವೇ ಇರುವುದು ನಿಜ. ಅಬ್ಬಾ, ಅಮೆರಿಕದ ಗುಪ್ತಚರ ವಿಭಾಗ ಹಾಗೂ ಮಿಲಿಟರಿ ಈ ಉಗ್ರನನ್ನು ಹೊಡೆಯುವುದಕ್ಕೆ ಏನೆಲ್ಲ ಶ್ರಮ - ಬುದ್ಧಿವಂತಿಕೆ ಮೆರೆದಿವೆ ಎಂಬ ಅಂಶ ಆ ಸಿನಿಮಾದ ಮುಖಾಂತರ ಮನಸ್ಸಿಗಿಳಿಯುತ್ತದೆ. ಆದರೆ, ಒಮ್ಮೆಗೆ ಈ ಭಾವನಾತ್ಮಕತೆ ಪಕ್ಕಕ್ಕಿಟ್ಟು ಯೋಚನೆ ಮಾಡಿ ನೋಡಿ. ಒಸಾಮಾ ಬಿನ್ ಲಾಡೆನ್ ನಿರ್ದೇಶನದಂತೆ, ಊಹಿಸಲಾಗದ ರೀತಿಯಲ್ಲಿ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳು ಧ್ವಂಸವಾಗಿದ್ದು 2001ರ ಸೆಪ್ಟೆಂಬರಿನಲ್ಲಿ. ಅದಾಗಿ, ಅಫಘಾನಿಸ್ತಾನದ ಮೇಲೆ ಅಮೆರಿಕವು ಯುದ್ಧ ಸಾರಿತು.
ಕೊನೆಗೆ, ಸರಿಸುಮಾರು ಹತ್ತು ವರ್ಷಗಳ ನಂತರ 2011ರ ಮೇನಲ್ಲಿ ಪಾಕಿಸ್ತಾನದ ಅಬೊಟಾಬಾದಿನಲ್ಲಿ ಅಡಗಿದ್ದ ಒಸಾಮಾನನ್ನು ಬೇಟೆ ಮಾಡಲಾಯಿತು. ಒಂದು ಸೂಪರ್ ಪವರ್ ದೇಶವು ತನ್ನ ಮೇಲಾದ ಅತ್ಯಂತ ಭೀಕರ ಉಗ್ರದಾಳಿಯ ರೂವಾರಿಯನ್ನು ಹತ್ತು ವರ್ಷಗಳ ನಂತರ ಕೊಂದು ಹಾಕಿದ ವಿದ್ಯಮಾನ ಬಹುದೊಡ್ಡ ಹೀರೊಗಿರಿ ಏನಲ್ಲ. ಒಂದೆರಡೇ ವರ್ಷಗಳಲ್ಲಿ ಒಸಾಮಾನನ್ನು ಹೊಡೆದಿದ್ದರೆ ಸೂಪರ್ ಪವರ್ ಎನ್ನಿಸಿಕೊಳ್ಳುವ ದೇಶಕ್ಕೆ ಅದು ಶೋಭೆ. ಇದನ್ನೇನೂ ಗಮನಿಸದೇ ಅಮೆರಿಕದ ಇಂಥ ಕಾರ್ಯಾಚರಣೆಗಳ ಬಗ್ಗೆ ಹೆಚ್ಚಿನವರು ಅತಿ ಪ್ರಶಂಸೆ ವ್ಯಕ್ತಪಡಿಸುವುದು ಏಕೆಂದರೆ, ಅಮೆರಿಕವು ಜಗತ್ತಿನೆದುರು ತನ್ನ ಕತೆಯನ್ನು ಕಟ್ಟಿಕೊಟ್ಟಿರುವ ರೀತಿಯೇ ಹಾಗಿದೆ.
ಇತಿಹಾಸದ ಪುರಾತನ ನಗರಗಳು, ವೈಭವಗಳನ್ನು ನೀವು ಅಂತರ್ಜಾಲದಲ್ಲಿ ಹುಡುಕಲು ಪ್ರಯತ್ನಿಸಿದರೆ ಅಲ್ಲೆಲ್ಲ ಬಹುತೇಕ ಎದುರಾಗುವುದು ಪ್ರಾಚೀನ ರೋಮ್ ನಗರದ ದೊಡ್ಡ ಕಟ್ಟಡಗಳು, ನಗರ ಚಿತ್ರ, ಥಿಯೇಟರ್ ಇತ್ಯಾದಿ. ರೋಮ್ ಇತಿಹಾಸ ವೈಭವಯುತವಾದದ್ದೇ ಎನ್ನುವುದರಲ್ಲಿ ನಿರಾಕರಣೆ ಏನಿಲ್ಲ. ಆದರೆ ಇದೇ ಬಗೆಯಲ್ಲಿ ಭಾರತದ ಪ್ರಾಚೀನ ನಗರಗಳಾದ ಪಾಟಲೀಪುತ್ರವೋ, ಉಜ್ಜಯಿನಿಯೋ ಚಿತ್ರವತ್ತಾಗಿ ತೆರೆದುಕೊಳ್ಳದು ಏಕೆ? ಅಪಾರ ಸಂಪತ್ತನ್ನು ಬಯಸಿಯೇ ತಾನೇ ಆಕ್ರಮಣಕಾರರು ಭಾರತಕ್ಕೆ ಬಂದದ್ದು? ಹೀಗಾಗಿ, ನಗರೀಕೃತ-ಸಂಪದ್ಭರಿತ ಭಾರತವಿದ್ದದ್ದು ಸುಸ್ಪಷ್ಟ.
ಆದರೆ ಇವತ್ತಿಗೆ ಕೇವಲ ಅವಶೇಷಗಳ ರೂಪದಲ್ಲಿರುವ ಹಂಪಿಯಂಥ ಸ್ಥಳಗಳನ್ನು ಅದರ ಈ ಹಿಂದಿನ ಅವತಾರದಲ್ಲಿ ಚಿತ್ರವತ್ತಾಗಿ ತೋರಿಸುವ ಕೆಲಸಗಳು ವ್ಯಾಪಕ ರೀತಿಯಲ್ಲಿ ಆಗಲಿಲ್ಲ. ರೋಮ್ ವಿಷಯಕ್ಕೆ ಬಂದರೆ, 1974ರಲ್ಲಿ ಬರ್ನಾರ್ಡ್ ಫ್ರಿಶರ್ ಎಂಬ ಡಿಜಿಟಲ್ ಪುರಾತತ್ತ್ವಶಾಸ್ತ್ರಜ್ಞ ‘ರೋಮ್ ರಿಬಾರ್ನ್’ ಎಂಬ ಯೋಜನೆ ಕೈಗೆತ್ತಿಕೊಳ್ಳುತ್ತಾನೆ. ಅವಶೇಷಗಳು, ಲಭ್ಯ ಮಾಹಿತಿಗಳನ್ನಿಟ್ಟುಕೊಂಡು ಕಂಪ್ಯೂಟರ್ ಗ್ರಾಫಿಕ್ಸ್ ಹಾಗೂ 3ಡಿ ಮಾಡೆಲ್ ಮೂಲಕ ಸಾಮಾನ್ಯ ಶಕೆಗಿಂತ 300 ವರ್ಷ ಪೂರ್ವದ ರೋಮ್ ಅನ್ನು ಡಿಜಿಟಲ್ ಆವೃತ್ತಿಯಲ್ಲಿ ಮರುಸೃಷ್ಟಿಸುವ ಪ್ರಯತ್ನ ಅದು. ಅದಕ್ಕೆ ದೊಡ್ಡಮಟ್ಟದಲ್ಲಿ ಫಂಡ್ ಹರಿದುಬಂದು, ಇವತ್ತಿಗೂ ಅದು ಸುಧಾರಿತ ಆವೃತ್ತಿಗಳನ್ನು ತರುತ್ತಿದೆ. ರೋಮ್ ಕುರಿತು ಅಂತರ್ಜಾಲದಲ್ಲಿ ಸಿಗುವ ಬೆರಗಿನ ಚಿತ್ರಗಳು ಬಹುತೇಕ ಇಲ್ಲಿಯದ್ದೇ ಆಗಿರುತ್ತವೆ.
ಇವೆಲ್ಲದರ ಅರ್ಥ ಇಷ್ಟೆ. ನಮ್ಮ ಮೌಲ್ಯಗಳು ಎಷ್ಟೇ ಒಳ್ಳೆಯದ್ದಿದ್ದಿರಬಹುದು. ಅನೇಕ ಕಾರ್ಯಸಿದ್ಧಿಗಳೂ ಆಗಿದ್ದಿರಬಹುದು. ಆದರೆ ಅವನ್ನೆಲ್ಲ ಕೇವಲ ದಾಖಲೆಗಳಲ್ಲಿಡದೇ ಕಥಾನಕ ಕಟ್ಟಿಕೊಂಡುವ ಕೆಲಸ ಕಾಲಕಾಲಕ್ಕೆ ಆಗಲೇಬೇಕು. ಸಮಾಜವೊಂದರ ಹೊಸ ಪೀಳಿಗೆ ಆತ್ಮವಿಶ್ವಾಸ ಮತ್ತು ಐಡೆಂಟಿಟಿಗಳನ್ನು ಪಡೆಯುವುದು ಇಂಥ ಕತೆಗಳಿಂದಲೇ.
ದುರಂಧರ್, ಛಾವಾ ಈ ಬಗೆಯ ಚಲನಚಿತ್ರಗಳು ಭಾರತದ ಅಂತಃಸತ್ತ್ವವನ್ನು ಬೇರೆಯವರಿಗೆ ಸಾರುವುದಷ್ಟೇ ಅಲ್ಲದೇ ಮುಖ್ಯವಾಗಿ ಇಲ್ಲಿನವರಿಗೆ ನಮ್ಮ ಸಾಮರ್ಥ್ಯ, ನಾಗರಿಕತೆ ಮತ್ತು ಪರಂಪರೆಗಳ ಶಕ್ತಿ ಇತ್ಯಾದಿಗಳ ಮೇಲೆ ನಂಬಿಕೆ ಹುಟ್ಟಿಸುತ್ತಿವೆ ಹಾಗೂ ಈ ಪರಂಪರೆಯನ್ನು ಅಭಿಮಾನದಿಂದ ಅಪ್ಪಿಕೊಳ್ಳುವತ್ತ ಪ್ರೇರೇಪಿಸುತ್ತಿವೆ. ಜಗತ್ತಿನ ಪ್ರಮುಖ ಆರ್ಥಿಕ ಶಕ್ತಿಯಾಗಿ ಭಾರತ ಬೆಳೆಯುತ್ತಿರುವ ಸಂದರ್ಭದಲ್ಲಿ ಇಂಥದೊಂದು ಕಥಾನಕ ಶಕ್ತಿ ಅತ್ಯಗತ್ಯ. ಭಾರತದಂಥ ಪ್ರಾಚೀನ ನಾಗರಿಕತೆಗೆ ಹೇಳಿಕೊಳ್ಳುವುದಕ್ಕೆ, ಜಾಗತಿಕ ಹಂತದಲ್ಲಿ ತನ್ನ ವಿಶ್ವಾಸ ವೃದ್ಧಿಸಿಕೊಳ್ಳುವುದಕ್ಕೆ ಎಷ್ಟೆಲ್ಲ ಸಂಗತಿಗಳಿವೆ.
ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ದ್ವೀಪವೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದ ಬ್ರಿಟಿಷ್ ಪಡೆಯ ತುಮುಲಗಳನ್ನು ಚಿತ್ರಿಸುವ ಡಂಕಿರ್ಕ್ ಸಿನಿಮಾ ಬಂತು. ವಾಸ್ತವದಲ್ಲಿ, ಎರಡೂ ವಿಶ್ವಯುದ್ಧಗಳಲ್ಲಿ ಪಾಶ್ಚಾತ್ಯರ ಗೆಲವಿಗೆ ಕಾರಣವಾಗಿದ್ದು ಎಂಬತ್ತು ಸಾವಿರಗಳ ಸಂಖ್ಯೆಯಲ್ಲಿ ಪ್ರಾಣತೆತ್ತ ಭಾರತೀಯ ಯೋಧರು. ಕಂಡುಕೇಳರಿಯದ ನೆಲದಲ್ಲಿ, ಭಿನ್ನ ವಾತಾವರಣದಲ್ಲಿ, ತಮ್ಮದಲ್ಲದ ಯುದ್ಧದಲ್ಲಿ ವೀರ ಹೋರಾಟ ಮಾಡಿದವರು ಮನೋಗಾಥೆ ವಿವರಿಸುವ ಚಿತ್ರ ಬೇಕಲ್ಲವೇ? ಉದ್ದಿಮೆ- ನವೋದ್ಯಮ ಎಂದೆಲ್ಲ ಸ್ಫೂರ್ತಿಯ ಮಾತುಗಳು ಬರುತ್ತಿರುವ ಈ ಕಾಲಘಟ್ಟದಲ್ಲಿ, ಸಮುದ್ರಸಾಹಸಗಳನ್ನು ಮಾಡಿ ಅರಬ್ ಹಾಗೂ ಆಗ್ನೇಯ ಏಷ್ಯದ ನೆಲಗಳಲ್ಲಿ ತಮ್ಮ ಪ್ರಭಾವ ಮೆರೆದ ಭಾರತೀಯ ವ್ಯಾಪಾರಿಯ ಕತೆ ಕಟ್ಟಿಕೊಡಬೇಕಲ್ಲವೇ? ಇಂಥದ್ದೇ ಲೆಕ್ಕವಿಲ್ಲದಷ್ಟು ಸಾಧ್ಯತೆಗಳ ಹೆಬ್ಬಾಗಿಲಿನಲ್ಲಿ ಭಾರತ ನಿಂತಿದೆ ಎಂಬುದನ್ನು ಅರಿತುಕೊಳ್ಳುವುದಕ್ಕೆ ಸಹ ದುರಂಧರ್ ಥರದ ಸಿನಿಮಾಗಳು ಮುಖ್ಯವಾಗುತ್ತವೆ.
- ಚೈತನ್ಯ ಹೆಗಡೆ
cchegde@gmail.com