ಆಯುರ್ವೇದ ಪದ್ಧತಿ Yan Krukau / pexels.com
ಅಂಕಣಗಳು

ಆಯುರ್ವೇದ ದಿನ 2026: ಆರೋಗ್ಯಕರ ಭವಿಷ್ಯಕ್ಕಾಗಿ ಆಯುರ್ವೇದ

ಆಯುರ್ವೇದವು ಪ್ರಾಚೀನ ಕಾಲದ ಜ್ಞಾನವಾಗಿದ್ದರೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಪ್ರಯೋಗಗಳ ಮೂಲಕ ಆಯುರ್ವೇದ ಔಷಧಗಳ ಗುಣಮಟ್ಟವನ್ನು ಸಾಬೀತುಪಡಿಸಲಾಗುತ್ತಿದೆ.

ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಆಯುರ್ವೇದವು ಕೇವಲ ರೋಗಗಳಿಗೆ ಮದ್ದು ನೀಡುವುದಷ್ಟೇ ಅಲ್ಲ, ಮನುಷ್ಯನಿಗೆ ಪರಿಪೂರ್ಣ ಜೀವನಶೈಲಿಯನ್ನು ಕಲಿಸುವ ಅಮೂಲ್ಯ ಜ್ಞಾನವಾಗಿದೆ. ಇಂದಿನ ಧಾವಂತದ ಬದುಕಿನಲ್ಲಿ ನಾವು ಎದುರಿಸುತ್ತಿರುವ ನಾನಾ ರೀತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸವಾಲುಗಳಿಗೆ ನೈಸರ್ಗಿಕ ಪರಿಹಾರ ಒದಗಿಸುವಲ್ಲಿ ಆಯುರ್ವೇದದ ಪಾತ್ರ ಹಿರಿದಾದದ್ದು. ಆದ್ದರಿಂದಲೇ ಪ್ರತಿವರ್ಷ ಸೆಪ್ಟೆಂಬರ್ 23ರ ದಿನವನ್ನು ರಾಷ್ಟ್ರೀಯ ಆಯುರ್ವೇದ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ವರ್ಷದ ಆಯುರ್ವೇದ ದಿನದ ಘೋಷವಾಕ್ಯ ʼಆರೋಗ್ಯಕರ ಭವಿಷ್ಯಕ್ಕಾಗಿ ಆಯುರ್ವೇದʼ. ಈ ಘೋಷವಾಕ್ಯವು ನಮ್ಮ ಪ್ರಾಚೀನ ಪಾರಂಪರಿಕ ಜ್ಞಾನವನ್ನು ಭವಿಷ್ಯದ ಆರೋಗ್ಯ ಅಗತ್ಯಗಳೊಂದಿಗೆ ಬೆಸೆಯುವ ಸತ್ಸಂಕಲ್ಪವನ್ನು ಹೊಂದಿದೆ.

ಆರೋಗ್ಯಕ್ಕೆ ಆಯುರ್ವೇದಲ್ಲಿ ಪರಿಹಾರ

ಇಂದಿನ ದಿನಮಾನದಲ್ಲಿ ಅಸಮರ್ಪಕ ಆಹಾರ ಪದ್ಧತಿ, ರಾಸಾಯನಿಕಗಳ ಅತಿಯಾದ ಬಳಕೆ, ದೈಹಿಕ ಚಟುವಟಿಕೆಯ ಕೊರತೆ, ದೀರ್ಘಕಾಲದ ಒತ್ತಡ ಮತ್ತು ಡಿಜಿಟಲ್ ಸಾಧನಗಳ ನಿರಂತರ ಬಳಕೆಯಿಂದಾಗಿ ಮನುಷ್ಯ ಹಲವಾರು ಜೀವನಶೈಲಿ ಸಂಬಂಧಿತ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಹೃದಯ ಸಂಬಂಧಿತ ತೊಂದರೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ರೋಗ ಬಂದ ನಂತರ ಪರಿಹಾರ ಹುಡುಕುವುದಕ್ಕಿಂತ, ರೋಗವೇ ಬಾರದಂತೆ ತಡೆಯುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ಈ ನಿಟ್ಟಿನಲ್ಲಿ ಆಯುರ್ವೇದ ನಮಗೆ ಬಹಳ ಸಹಾಯ ಮಾಡುತ್ತುದೆ. ಆಯುರ್ವೇದವು ಕೇವಲ ರೋಗಲಕ್ಷಣಗಳನ್ನು ನಿವಾರಿಸುವುದಿಲ್ಲ, ಬದಲಿಗೆ ದಿನಚರ್ಯೆ, ಋತುಚರ್ಯೆ ಹಾಗೂ ಯೋಗಾಭ್ಯಾಸಗಳ ಮೂಲಕ ರೋಗದ ಮೂಲವನ್ನೇ ಕಿತ್ತುಹಾಕಲು ನೈಸರ್ಗಿಕ ವಿಧಾನಗಳನ್ನು ತಿಳಿಸುತ್ತದೆ. ವ್ಯಕ್ತಿಯ ದೇಹಪ್ರಕೃತಿ, ವಯಸ್ಸು ಮತ್ತು ಪರಿಸರಕ್ಕೆ ಅನುಗುಣವಾಗಿ ಆಹಾರ ಕ್ರಮವನ್ನು ರೂಪಿಸಿಕೊಳ್ಳಲು ಇದು ಮಾರ್ಗದರ್ಶನ ನೀಡುತ್ತದೆ.

ಆಯುರ್ವೇದವು ಪ್ರಾಚೀನ ಕಾಲದ ಜ್ಞಾನವಾಗಿದ್ದರೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಪ್ರಯೋಗಗಳ ಮೂಲಕ ಆಯುರ್ವೇದ ಔಷಧಗಳ ಗುಣಮಟ್ಟವನ್ನು ಸಾಬೀತುಪಡಿಸಲಾಗುತ್ತಿದೆ. ಆಧುನಿಕ ವಿಜ್ಞಾನ ಮತ್ತು ಆಯುರ್ವೇದದ ಸಮ್ಮಿಲನದಿಂದ ರೋಗಿಗಳಿಗೆ ಅತ್ಯುತ್ತಮ ಹಾಗೂ ನಂಬಿಕಾರ್ಹ ಚಿಕಿತ್ಸೆ ಲಭ್ಯವಾಗುತ್ತಿದೆ.

ಆಯುರ್ವೇದ ಚಿಕಿತ್ಸೆ

ಆಯುರ್ವೇದ ಎಂದರೆ ಕೇವಲ ಕಾಯಿಲೆ ಬಂದಾಗ ಚಿಕಿತ್ಸೆ ಪಡೆಯುವ ಪದ್ಧತಿಯಲ್ಲ. ಆರೋಗ್ಯವನ್ನು ಕಾಪಾಡಿಕೊಳ್ಳುವುದು, ಕಾಯಿಲೆಗಳನ್ನು ಸಾಧ್ಯವಾದಷ್ಟು ದೂರವಿಡುವುದು, ದೇಹ ಮತ್ತು ಮನಸ್ಸಿನ ಸಮತೋಲನವನ್ನು ಉಳಿಸಿಕೊಳ್ಳುವುದು ಹಾಗೂ ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಬದುಕುವುದು ಇದರ ಮೂಲ ಆಶಯ. ಇದೇ ಕಾರಣಕ್ಕೆ ಆಧುನಿಕ ಜೀವನಶೈಲಿಯಿಂದ ಎದುರಾಗುತ್ತಿರುವ ಹೊಸ ಆರೋಗ್ಯ ಸವಾಲುಗಳ ನಡುವೆ ಆಯುರ್ವೇದದ ಮಹತ್ವ ಮತ್ತಷ್ಟು ಹೆಚ್ಚುತ್ತಿದೆ

ಆಯುರ್ವೇದವು ದಿನಚರ್ಯೆ, ಋತುಚರ್ಯೆ, ಆಹಾರ, ವಿಹಾರ ಮತ್ತು ಜೀವನಶೈಲಿಗೆ ಮಹತ್ವ ನೀಡುತ್ತದೆ. ವ್ಯಕ್ತಿಯ ದೇಹಪ್ರಕೃತಿ, ವಯಸ್ಸು, ಪರಿಸರ ಮತ್ತು ಜೀವನಶೈಲಿಗೆ ಅನುಗುಣವಾಗಿ ಆಹಾರ ಮತ್ತು ದಿನನಿತ್ಯದ ಕ್ರಮವನ್ನು ರೂಪಿಸಿಕೊಳ್ಳುವಂತೆ ಅದು ಹೇಳುತ್ತದೆ. ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದು, ಸಾಕಷ್ಟು ನಿದ್ರೆ ಮಾಡುವುದು, ನಿಯಮಿತ ದೈಹಿಕ ಚಟುವಟಿಕೆಗಳು, ಒತ್ತಡವನ್ನು ನಿಯಂತ್ರಿಸುವುದು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಇವು ಆರೋಗ್ಯಕರ ಜೀವನದ ಮೂಲಭೂತ ಅಂಶಗಳಾಗಿವೆ. ಈ ವಿಚಾರಗಳಲ್ಲಿ ಅಯುರ್ವೇದವು ಇಂದಿನ ಸಾರ್ವಜನಿಕ ಆರೋಗ್ಯದ ದೃಷ್ಟಿಕೋನಕ್ಕೂ ಹತ್ತಿರವಾಗಿವೆ. ಇದರ ಜೊತೆಗೆ ಆಧುನಿಕ ವೈದ್ಯಕೀಯ ವ್ಯವಸ್ಥೆ ಮತ್ತು ಆಯುರ್ವೇದವನ್ನು ಪರಸ್ಪರ ವಿರೋಧಿಗಳಂತೆ ನೋಡುವ ಬದಲು ಅಗತ್ಯವಿರುವ ಸಂದರ್ಭಗಳಲ್ಲಿ ವಿವಿಧ ವೈದ್ಯಕೀಯ ಪದ್ಧತಿಗಳ ಪರಿಣತಿಯನ್ನು ಸಮನ್ವಯಗೊಳಿಸುವ ದೃಷ್ಟಿಕೋನವೂ ಭವಿಷ್ಯದ ಆರೋಗ್ಯ ಸೇವೆಗೆ ನೆರವಾಗಬಹುದು. ರೋಗಿಯ ಸುರಕ್ಷತೆ, ಪರಿಣಾಮಕಾರಿ ಚಿಕಿತ್ಸೆ ಮತ್ತು ಉತ್ತಮ ಆರೋಗ್ಯ ಫಲಿತಾಂಶವೇ ವೈದ್ಯಕೀಯ ವ್ಯವಸ್ಥೆಯ ಅಂತಿಮ ಗುರಿಯಾಗಬೇಕು. ಆದ್ದರಿಂದ ಸಮಗ್ರ ಆರೋಗ್ಯ ಸೇವೆಯಲ್ಲಿ ಆಯುರ್ವೇದದ ಸಾಧ್ಯತೆಗಳನ್ನು ಸಂಶೋಧನೆ ಮತ್ತು ಸೂಕ್ತ ವೈದ್ಯಕೀಯ ಮಾರ್ಗಸೂಚಿಗಳ ಆಧಾರದ ಮೇಲೆ ಬಳಸಿಕೊಳ್ಳುವುದು ಅಗತ್ಯ.

ಆರೋಗ್ಯಕರ ಭವಿಷ್ಯ

ʼಆರೋಗ್ಯಕರ ಭವಿಷ್ಯʼ ಎಂಬುದು ವ್ಯಕ್ತಿಯೊಬ್ಬನ ಆರೋಗ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಆರೋಗ್ಯಕರ ಕುಟುಂಬ, ಆರೋಗ್ಯಕರ ಸಮುದಾಯ ಮತ್ತು ಪರಿಸರದೊಂದಿಗೆ ಸಮತೋಲನ ಹೊಂದಿರುವ ಸಮಾಜವೂ ಅದರ ಭಾಗವಾಗಿದೆ. ಸ್ಥಳೀಯ ಆಹಾರ ಪದ್ಧತಿಗಳು, ಔಷಧೀಯ ಸಸ್ಯಗಳ ಸಂರಕ್ಷಣೆ, ಪ್ರಕೃತಿ ಸ್ನೇಹಿ ಜೀವನಶೈಲಿ ಮತ್ತು ನಮ್ಮಲ್ಲಿರುವ ಎಲ್ಲಾ ಸಂಪನ್ಮೂಲಗಳ ಸುಸ್ಥಿರ ಬಳಕೆಯಂತಹ ವಿಚಾರಗಳಲ್ಲಿಯೂ ಆಯುರ್ವೇದದ ಪರಂಪರೆಯಲ್ಲಿ ಹಲವು ಪಾಠಗಳಿವೆ. ಹೀಗಾಗಿ ಆರೋಗ್ಯ ಮತ್ತು ಪರಿಸರವನ್ನು ಪ್ರತ್ಯೇಕವಾಗಿ ನೋಡುವ ಬದಲು ಎರಡರ ನಡುವಿನ ಸಂಬಂಧವನ್ನು ಅರಿಯುವುದು ಇಂದಿನ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆಯುರ್ವೇದ ದಿನವು ಆಯುರ್ವೇದದ ಪರಂಪರೆಯನ್ನು ಆಚರಿಸುವ ಒಂದು ದಿನವಾಗಿರುವುದಕ್ಕಿಂತ ಆರೋಗ್ಯದ ಬಗ್ಗೆ ನಮ್ಮ ದಿನನಿತ್ಯದ ದೃಷ್ಟಿಕೋನವನ್ನು ಮರುಪರಿಶೀಲಿಸುವ ಸಂದರ್ಭವಾಗಬೇಕು. ಪ್ರತಿಯೊಬ್ಬರೂ ತಮ್ಮ ಆಹಾರ, ನಿದ್ರೆ, ದೈಹಿಕ ಚಟುವಟಿಕೆ ಮತ್ತು ಮಾನಸಿಕ ನೆಮ್ಮದಿಯ ಬಗ್ಗೆ ಹೆಚ್ಚು ಜಾಗರೂಕರಾಗುವಂತೆ ಇದು ಪ್ರೇರೇಪಿಸಬೇಕು. ವೈದ್ಯರ ಸಲಹೆಯಿಲ್ಲದೇ ಯಾವುದೇ ಔಷಧಿ ಅಥವಾ ಚಿಕಿತ್ಸೆಯನ್ನು ಸ್ವಯಂಪ್ರೇರಿತವಾಗಿ ಬಳಸುವುದಕ್ಕಿಂತ, ಅರ್ಹ ವೈದ್ಯರಿಂದ ಸೂಕ್ತ ಮಾರ್ಗದರ್ಶನ ಪಡೆಯುವ ಅಭ್ಯಾಸವೂ ಬೆಳೆಬೇಕು.

ಆಯುರ್ವೇದ ದಿನದ ಆಚರಣೆ ಎಂದರೆ ಹಳೆಯ ಜ್ಞಾನವನ್ನು ಹಾಗೆಯೇ ಪುನರಾವರ್ತಿಸುವುದಲ್ಲ. ಅದರಲ್ಲಿರುವ ಉಪಯುಕ್ತ ಅಂಶಗಳನ್ನು ಸಂಶೋಧನೆಯ ಬೆಳಕಿನಲ್ಲಿ ಅರ್ಥೈಸಿ ಇಂದಿನ ಮತ್ತು ನಾಳೆಯ ಆರೋಗ್ಯ ಅಗತ್ಯಗಳಿಗೆ ಹೊಂದಿಸುವುದೇ ನಮ್ಮ ಮುಂದಿನ ಹೆಜ್ಜೆಯಾಗಬೇಕು. ಪರಂಪರೆಯಿಂದ ಜ್ಞಾನಕ್ಕೆ, ಜ್ಞಾನದಿಂದ ಸಾಕ್ಷ್ಯಕ್ಕೆ, ಸಾಕ್ಷ್ಯದಿಂದ ನವೀನತೆಗೆ ಮತ್ತು ನವೀನತೆಯಿಂದ ಜನಕಲ್ಯಾಣಕ್ಕೆ ಸಾಗುವ ಈ ಪಯಣವೇ ʼಆರೋಗ್ಯಕರ ಭವಿಷ್ಯಕ್ಕಾಗಿ ಆಯುರ್ವೇದʼ ಎಂಬ 2026ರ ಸಂದೇಶದ ನಿಜವಾದ ಅರ್ಥವಾಗಿದೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾಗೆ ಟ್ರಂಪ್‌ ಬಿಗ್ ಶಾಕ್: ಶೇ.100ರಷ್ಟು ಸುಂಕಕ್ಕೆ ಅಸ್ತು, ಭಾರತ-ಚೀನಾ ಮೇಲೂ ನಿರ್ಬಂಧದ ತೂಗುಗತ್ತಿ..!

ಮಂಗಳೂರಿನಲ್ಲಿ ಡಿಕೆಶಿ ಸಂಪುಟ ಸಭೆ, ತುಮಕೂರಿನಲ್ಲಿ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್: ಕೈ ಪಾಳಯದಲ್ಲಿ ಶುರುವಾಯ್ತಾ ಹೊಸ ಆಂತರಿಕ ತಂತ್ರಗಾರಿಕೆ..?

ರಾಜ್ಯದ 32,611 ಕೋಟಿ ರೂ. ಯೋಜನೆಗಳಿಗೆ ಗ್ರೀನ್‌ ಸಿಗ್ನಲ್‌: ಮಂಗಳೂರು ಸಂಪುಟ ಸಭೆಯಲ್ಲಿ ಸರ್ಕಾರ ಮಹತ್ವದ ಘೋಷಣೆ..!

ಕರಾವಳಿಯಲ್ಲಿ ಅಭಿವೃದ್ಧಿಯ ಅಲೆ: 16 ಸಾವಿರ ಕೋಟಿ ರೂ. ಪ್ಯಾಕೇಜ್‌ಗೆ ಸಂಪುಟ ಒಪ್ಪಿಗೆ, ಪ್ರವಾಸೋದ್ಯಮ, ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು..!

ಸರ್ಕಾರದ ಎಲ್ಲ ಘೋಷಣೆಗಳೂ ಕಾಗದದ ಮೇಲೆಯೇ ಉಳಿಯಲಿವೆ: ಆರ್. ಅಶೋಕ್