ಕ್ರಿಕೆಟ್

ಕೆಕೆಆರ್ ಗೆ ನಿರಾಯಾಸ ಜಯ ತಂದಿತ್ತ ಗಂಭೀರ್ ಬ್ಯಾಟಿಂಗ್

Srinivasamurthy VN

ಹೈದರಾಬಾದ್: ಶನಿವಾರ ನಡೆದ ಐಪಿಎಲ್-9ರ ಲೀಗ್ ಪಂದ್ಯದಲ್ಲಿ ನಾಯಕ ಗಂಭೀರ್ (ಅಜೇಯ 90 ರನ್) ಅವರ ಬಿರುಸಿನ ಅರ್ಧಶತಕದ  ನೆರವಿನಿಂದ ಕೋಲ್ಕತ ನೈಟ್‌ ರೈಡರ್ಸ್ ತಂಡ  8 ವಿಕೆಟ್‌ ಗಳಿಂದ ಸನ್‌ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದೆ.

ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ತವರಿನ ತಂಡ ಸನ್‌ರೈಸರ್ಸ್ ಬ್ಯಾಟಿಂಗ್ ಆರಿಸಿಕೊಂಡಿತು. ಅನುಭವಿ ಬ್ರಾಡ್ ಹಾಗ್  ಬದಲಾಗಿ ಶಂಕಿತ ಬೌಲಿಂಗ್ ಶೈಲಿಯಿಂದಾಗಿ ಅಮಾನತುಗೊಂಡಿದ್ದ ಸ್ಪಿನ್ನರ್ ಸುನೀಲ್ ನರೇನ್ ಗೆ ಗಂಭೀರ್ ಸ್ಥಾನ ನೀಡಿದ್ದರು. ಗಂಭೀರ್ ಅವರ ಈ ಯೋಜನೆ ಸಫಲವಾಗಿ ಸನ್‌ರೈಸರ್ಸ್  ತಂಡವನ್ನು 7 ವಿಕೆಟ್‌ಗೆ 142 ರನ್‌ಗಳಿಗೆ ನಿಯಂತ್ರಿಸಲು ಸಾಧ್ಯವಾಯಿತು. ಪ್ರತಿಯಾಗಿ ಹೆಚ್ಚಿನ ಪ್ರಯಾಸವಿಲ್ಲದೆ ಚೇಸಿಂಗ್ ಮಾಡಿದ ಕೆಕೆಆರ್, 18.2 ಓವರ್‌ಗಳಲ್ಲಿ ಇನ್ನೂ 10 ಎಸೆತಗಳು  ಬಾಕಿ ಇರುವಂತೆಯೇ 2 ವಿಕೆಟ್‌ಗೆ 146 ರನ್ ಬಾರಿಸಿ ಗೆಲುವು ಒಲಿಸಿಕೊಂಡಿತು. ಇದು ಕೆಕೆಆರ್‌ಗೆ ಲೀಗ್‌ನ ಮೂರನೇ ಪಂದ್ಯದಲ್ಲಿ 2ನೇ ಗೆಲುವು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೇವಿಡ್ ವಾರ್ನರ್ ನೇತೃತ್ವದ ಸನ್ ರೈಸರ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಮಾರ್ಗನ್ ಅವರ ಅರ್ಧಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ  142 ರನ್ ಕಲೆ ಹಾಕಿತು. ಈ ಮೊತ್ತವನ್ನು ಬೆನ್ನುಹತ್ತಿದ ಕೆಕೆಆರ್ ಗೆ ನಾಯಕ ಗಂಭೀರ್ (ಅಜೇಯ 90) ಹಾಗೂ ರಾಬಿನ್ ಉತ್ತಪ್ಪ (38 ರನ್) ಉತ್ತಮ ಆರಂಭ ಒದಗಿಸಿಕೊಟ್ಟರು. ಕೆಕೆಆರ್ ಗೆಲುನಿ  ಸನಿಹದಲ್ಲಿದ್ದಾಗ ಉತ್ತಪ್ಪ ಮತ್ತು 2 ರನ್ ಗಳಿಸಿದ್ದ ರಸೆಲ್ ಔಟ್ ಆದರು. ಬಳಿಕ ಬಂದ ಪಾಂಡೇ ಗೆಲುವಿನ ಲೆಕ್ಕಾಚಾರ ಪೂರ್ಣಗೊಳಿಸಿದರು.

ಸತತ 2 ಪಂದ್ಯಗಳಲ್ಲಿ ಅಮೋಘ ಅರ್ಧಶತಕ ಗಳಿಸಿರುವ ಗೌತಮ್ ಗಂಭೀರ್ ಮತ್ತೆ ಟೀಂ ಇಂಡಿಯಾ ಪುನರಾಗಮನದ ಆಸೆಗೆ ಬಲ ತುಂಬಿಸಿಕೊಂಡಿದ್ದಾರೆ.

SCROLL FOR NEXT