ನವದೆಹಲಿ: ಟೀಂ ಇಂಡಿಯಾ ಯಾವುದೇ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದರೂ ಆಟಗಾರರಿಗೆ ಬಿಸಿಸಿಐ ವತಿಯಿಂದ ಬಳವಳಿ ಸಿಗುತ್ತಿತ್ತು. ಆದರೆ ಈ ಬಾರಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಪಡೆ ಅತ್ಯುತ್ತಮ ಪ್ರದರ್ಶನ ತೋರಿ ಐತಿಹಾಸಿಕವಾಗಿ ಸರಣಿ ಜಯಿಸಿದರೂ ಆಟಗಾರರಿಗೆ ಮಾತ್ರ ಯಾವುದೇ ರೀತಿಯ ಬಳವಳಿ ಸಿಗುತ್ತಿಲ್ಲ.
ಹೌದು. ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಆಟಗಾರರು ಅದ್ಭುತ ಪ್ರದರ್ಶನ ತೋರುವ ಮೂಲಕ ಐತಿಹಾಸಿಕ ಸರಣಿ ಜಯ ಸಾಧಿಸಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉದಯೋನ್ಮುಖ ಆಟಗಾರರೂ ಕೂಡ ಅದ್ಬುತ ಪ್ರದರ್ಶನ ನೀಡಿ ಟೀಂ ಇಂಡಿಯಾ ಗೆಲುವಿಗೆ ಕಾರಣರಾಗಿದ್ದರು. ಅಂತೆಯೇ ಭಾರತ ಬೌಲರ್ ಗಳಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ತಮ್ಮ ಅದ್ಬುತ ಪ್ರದರ್ಶನದ ಮೂಲಕ ರ್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಗಳಿಸಿದ್ದರು. ಇಷ್ಟೇಲ್ಲಾ ಸಾಧನೆಗಳಿದ್ದರೂ ಆಟಗಾರರಿಗೆ ಮಾತ್ರ ಬಿಸಿಸಿಐ ವತಿಯಿಂದ ಯಾವುದೇ ಬಳವಳಿ ಬರುತ್ತಿಲ್ಲ.
ಕಾರಣ ಸುಪ್ರೀಂ ಕೋರ್ಟ್ ನ ಆದೇಶ ಮತ್ತು ಲೋಧಾ ಸಮಿತಿಯ ಶಿಫಾರಸ್ಸುಗಳು. ಐಪಿಎಲ್ ಬೆಟ್ಟಿಂಗ್ ಪ್ರಕರಣದ ಬಳಿಕ ಸುಪ್ರೀಂ ಕೋರ್ಟ್ ನೇಮಿಸಿದ್ದ ಲೋಧಾ ಸಮಿತಿಯ ಶಿಫಾರಸ್ಸುಗಳನ್ನು ಬಿಸಿಸಿಐ ಅನುಸರಿಸಲು ಹಿಂದೇಟು ಹಾಕಿತ್ತು. ಹೀಗಾಗಿ ಬಿಸಿಸಿಐನ ಆರ್ಥಿಕ ಮೂಲದ ಮೇಲೆ ಸುಪ್ರೀಂ ಕೋರ್ಟ್ ನಿರ್ಭಂಧ ಹೇರಿತ್ತು. ಬಿಸಿಸಿಐ ಲೋಧಾ ಸಮಿತಿ ಶಿಫಾರಸ್ಸುಗಳನ್ನು ಜಾರಿಗೆ ತರುವವರೆಗೂ ಅದರ ಆರ್ಥಿಕ ಸ್ವಾತಂತ್ರ್ಯಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್ ಹಾಕಿದ್ದು, ಇದೀಗ ಬಿಸಿಸಿಐ ಯಾವುದೇ ರೀತಿಯ ವೆಚ್ಚಕ್ಕೆ ಸುಪ್ರೀಂ ಕೋರ್ಟ್ ನ ಅನುಮತಿ ಪಡೆಯಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಕೇವಲ ವೆಚ್ಚ ಮಾತ್ರವಲ್ಲದೇ ಸರಣಿ ಆಯೋಜನೆಗೂ ಬಿಸಿಸಿಐ ಹಿಂದು ಮುಂದು ನೋಡುವ ಪರಿಸ್ಥಿತಿ ಇದ್ದು, ಇದೇ ಕಾರಣಕ್ಕೆ ಆಟಗಾರರಿಗೆ ಬಳುವಳಿ ನೀಡಲಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಇದೇ ಜನವರಿ 3ರಂದು ಸುಪ್ರೀಂ ಕೋರ್ಟ್ ನಲ್ಲಿ ಬಿಸಿಸಿಐನ ಅರ್ಜಿಯ ವಿಚಾರಣೆ ಇದ್ದು, ಅಂದು ಬಿಸಿಸಿಐನ ಆರ್ಥಿಕ ಸ್ವಾತಂತ್ರ್ಯದ ಭವಿಷ್ಯ ನಿರ್ಧಾರವಾಗಲಿದೆ.
ಈ ಹಿಂದೆ ಇದೇ ಕೊಹ್ಲಿ ಪಡೆ ದಕ್ಷಿಣ ಆಫ್ರಿಕಾ ತಂಡವನ್ನು 3-0 ಅಂತರದಲ್ಲಿ ಸೋಲಿಸಿದ್ದಾಗ ಟೀಂ ಇಂಡಿಯಾಗೆ ಬಿಸಿಸಿಐ 2 ಕೋಟಿ ಬಳುವಳಿ ನೀಡಿತ್ತು. ಇದೀಗ ತವರು ನೆಲದಲ್ಲೇ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು 4-0 ಅಂತರದಿಂದ ಮಣಿಸಿದ್ದರೂ ಬಳುವಳಿ ನೀಡಲು ಸಾಧ್ಯವಾಗುತ್ತಿಲ್ಲ. ಸುಪ್ರೀಂ ಕೋರ್ಟ್ ನ ಅನುಮತಿ ಇಲ್ಲದೇ ಒಂದು ರುಪಾಯಿಯನ್ನು ಖರ್ಚು ಮಾಡುವ ಸ್ಥಿತಿಯಲ್ಲಿ ಬಿಸಿಸಿಐ ಇಲ್ಲ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ತನ್ನ ಹಣವನ್ನು ತಾನು ಖರ್ಚು ಮಾಡಲು ನ್ಯಾಯಾಲಯದ ಅನುಮತಿ ಪಡೆಯುವಂತಾಗಿದೆ. ಇದು ಬಿಸಿಸಿಐನ ಸ್ವಯಂಕೃತ ಅಪರಾಧವಲ್ಲದೇ ಬೇರೇನೂ ಅಲ್ಲ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.