ನವದೆಹಲಿ: ಪತ್ನಿ ವಸ್ತ್ರದ ಕುರಿತು ಟೀಕೆಗಳನ್ನು ವ್ಯಕ್ತಪಡಿಸಿದ್ದ ಟೀಕಾಕಾರರನ್ನು ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರು ತರಾಟೆಗೆ ತೆಗೆದುಕೊಂಡಿದ್ದರು. ಇದೀಗ ಶಮಿ ತಂದೆ ತೌಸೀಫ್ ಅವರೂ ಕೂಡ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಇದೊಂದು ಪೂರ್ವನಿಯೋಜಿತ ತಂತ್ರವಾಗಿದೆ. ಪ್ರತೀಯೊಬ್ಬ ಭಾರತೀಯರೂ ಶಮಿಗೆ ಬೆಂಬಲ ನೀಡಬೇಕಿತೆ. ಇಸ್ಲಾಂ ಏನು ಹೇಳುತ್ತದೆ ಎಂಬುದು ನಮಗೆ ಗೊತ್ತಿದೆ. ಇಸ್ಲಾಂ ಬಗ್ಗೆ ಯಾರಿಂದಲೂ ಸಲಹೆ ತೆಗೆದುಕೊಳ್ಳುವ ಅಗತ್ಯ ನಮಗಿಲ್ಲ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಪತ್ನಿಯೊಂದಿಗಿರುವ ಫೋಟೋವೊಂದನ್ನು ಮೊಹಮ್ಮದ್ ಶಮಿಯವರು ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದರು. ಫೋಟೋದಲ್ಲಿ ಶಮಿ ಅವರ ಪತ್ನಿ ಬುರ್ಖಾ ಧರಿಸಿರಲಿಲ್ಲ. ಈ ಫೋಟೋಗೆ ಕೆಲ ಸಂಪ್ರದಾಯವಾದಿಗಳು ವಿರೋಧ ವ್ಯಕ್ತಪಡಿಸಿ ಟೀಕೆಗಳನ್ನು ವ್ಯಕ್ತಪಡಿಸಲು ಆರಂಭಿಸಿದ್ದರು.
ಶಮಿ ಅವರು ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದು, ಮುಸ್ಲಿಂ ಹೆಣ್ಣು ಮಕ್ಕಳು ಮೈ ತುಂಬಾ ಬಟ್ಟೆಯನ್ನು ತೊಡಬೇಕು ಹಾಗೂ ಸಾರ್ವಜನಿಕವಾಗಿ ಅರೆಬರೆ ತೊಟ್ಟು ತೋರಿಸಿಕೊಳ್ಳಬಾರದೆಂದು ಕೆಲ ಸಂಪ್ರದಾಯವಾದಿಗಳು ಟೀಕೆಗಳನ್ನು ವ್ಯಕ್ತಪಡಿಸಿದ್ದರು.
ಈ ಹಿನ್ನಲೆಯಲ್ಲಿ ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡಿದ್ದ ಶಮಿ ಅವರು, ಇದು ನನ್ನ ಜೀವನವಾಗಿದ್ದು ಯಾವುದು ಮಾಡಿದರೆ ಸರಿ ಹಾಗೂ ಯಾವುದು ತಪ್ಪು ಎಂಬುದು ನನಗೆ ಗೊತ್ತಿದೆ. ನಾವೆಷ್ಟು ಒಳ್ಳೆಯವರೆಂಬುದನ್ನು ಮೊದಲು ನಮ್ಮ ಆಂತರಾಳವನ್ನು ಕೇಳಿಕೊಳ್ಳಬೇಕಿದೆ ಎಂದು ಹೇಳಿದ್ದರು.