ನವದೆಹಲಿ: ಟೀಮ್ ಇಂಡಿಯಾದ ಕೋಚ್ ಆಗಿ ನೇಮಕಗೊಂಡಿರುವ ಅನಿಲ್ ಕುಂಬ್ಳೆ ಭಾರತ ಕ್ರಿಕೆಟ್ ತಂಡದ ಭವಿಷ್ಯಕ್ಕಾಗಿ ದೂರದೃಷ್ಟಿ ಯೋಜನೆಯನ್ನು ಹೊಂದಿದ್ದು, ಅಂಡರ್ 19 ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್, ಟೀಮ್ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಅವರೊಂದಿಗೆ ಜು.3 ರಂದು ಸಭೆ ನಡೆಸಲಿದ್ದಾರೆ.
ಭಾರತ ಕ್ರಿಕೆಟ್ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಹೊಂದಿರುವ ಅನಿಲ್ ಕುಂಬ್ಳೆ ಭಾರತೀಯ ಕ್ರಿಕೆಟ್ ಗೆ ಸಂಬಂಧಿಸಿದಂತೆ ಮಹತ್ವದ ಜವಾಬ್ದಾರಿಯುಳ್ಳ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿರುವ ಅನಿಲ್ ಕುಂಬ್ಳೆ ಭಾರತೀಯ ಕ್ರಿಕೆಟ್ ತಂಡದ ಅಂಡರ್ 19 ತರಬೇತುದಾರರಾಗಿರುವ ರಾಹುಲ್ ದ್ರಾವಿಡ್, ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಸಭೆ ನಡೆಸಲಿದ್ದಾರೆ.
ಅಂಡರ್ 19 ಕ್ರಿಕೆಟ್ ತರಬೇತಿಗೆ ಕುಂಬ್ಳೆ ಸಹ ಹೆಚ್ಚಿನ ಆದ್ಯತೆ ನೀಡಿದ್ದು, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲೂ ತರಬೇತಿ ಪರಿಣಾಮಕಾರಿಯಾಗಿರಬೇಕೆಂಬುದು ಅನಿಲ್ ಕುಂಬ್ಳೆ ಇರಾದೆಯಾಗಿದೆ. ಇದೆ ಮೊದಲ ಬಾರಿ ಭಾರತೀಯ ಕ್ರಿಕೆಟ್ ತಂಡದ ಕೋಚ್ ಅನಿಲ್ ಕುಂಬ್ಳೆ ಅಂಡರ್ 19 ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್, ಭಾರತ ಕ್ರಿಕೆಟ್ ತಂಡದ ನಾಯಕ, ಟೆಸ್ಟ್ ಕ್ರಿಕೆಟ್ ತಂಡದ ನಾಯಕನೊಂದಿಗೆ ಅನಿಲ್ ಕುಂಬ್ಳೆ ಸಭೆ ನಡೆಸುತ್ತಿದ್ದು, ಸಭೆಯಲ್ಲಿ ಭಾಗವಹಿಸಲಿರುವ ಬಿಸಿಸಿಐ ಪದಾಧಿಕಾರಿಗಳು ಕ್ರಿಕೆಟ್ ತಂಡಕ್ಕೆ ಅಗತ್ಯವಿರುವ ತರಬೇತಿ ಬಗ್ಗೆ ಸಲಹೆ, ಅಭಿಪ್ರಾಯ ವ್ಯಕ್ತಪಡಿಸಬಹುದಾಗಿದೆ.