ಕ್ರಿಕೆಟ್

70 ವರ್ಷ ಮೇಲ್ಪಟ್ಟವರು ಕ್ರಿಕೆಟ್ ಆಡಳಿತದಲ್ಲಿರಬಾರದು: ಲೋಧಾ ಸಮಿತಿ ಶಿಫಾರಸು

Shilpa D

ನವದೆಹಲಿ: 70 ವರ್ಷ ವಯಸ್ಸಿನ ಮೇಲ್ಪಟ್ಟವರು ಕ್ರಿಕೆಟ್‌ ಆಡಳಿತದಲ್ಲಿ ಇರಬಾರದು ಎಂದು ನ್ಯಾ. ಲೋಧಾ ಸಮಿತಿ ಸುಪ್ರಿಂ ಕೋರ್ಟ್ ಗೆ ಶಿಫಾರಸು ಮಾಡಿದೆ. ಜೊತೆಗೆ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎನ್ನುವುದು ಕೂಡ ಈ ಶಿಫಾರಸ್ಸಿನಲ್ಲಿದೆ.

ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ  ನೇತೃತ್ವದ ಸಮಿತಿ ಮಾಡಿರುವ  ಶಿಫಾರಸುಗಳನ್ನು ಸುಪ್ರೀಂ ಕೋರ್ಟ್‌ ಸೋಮವಾರ ಒಪ್ಪಿಕೊಂಡಿರುವ ಕಾರಣ  ಕೆಲವು ಕ್ರಿಕೆಟ್‌ ಆಡಳಿತಗಾರರ ಮುಂದಿನ ದಾರಿ ಮುಚ್ಚಿ ಹೋಗಿದೆ. ಇದರಿಂದಾಗಿ ಮುಂಬೈ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಶರದ್ ಪವಾರ್‌ (75 ವರ್ಷ)   ಮತ್ತು ತಮಿಳುನಾಡು ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಎನ್‌. ಶ್ರೀನಿವಾಸನ್‌ (71 ವರ್ಷ) ಅವರು ಈಗ ಅಧಿಕಾರದಿಂದ ಕೆಳಗಿಳಿಯಬೇಕಾಗಿದೆ.

ಇವರಷ್ಟೇ ಅಲ್ಲದೇ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್‌ (ಹಿಮಾಚಲ ಪ್ರದೇಶ),  ಕಾರ್ಯದರ್ಶಿ ಅಜಯ್‌ ಶಿರ್ಕೆ (ಮಹಾರಾಷ್ಟ್ರ), ಖಜಾಂಚಿ ಅನಿರುದ್ಧ್‌ ಚೌಧರಿ (ಹರಿಯಾಣ) ಮತ್ತು ಜಂಟಿ ಕಾರ್ಯದರ್ಶಿ ಅಮಿತಾಬ್  ಚೌಧರಿ (ಜಾರ್ಖಂಡ್‌) ಅವರು ತಮ್ಮ ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ ಇನ್ನೂ ಅಧಿಕಾರದಲ್ಲಿದ್ದಾರೆ. ಲೋಧಾ ಸಮಿತಿಯ ಶಿಫಾರಸಿನ ಪ್ರಕಾರ ಒಬ್ಬ ವ್ಯಕ್ತಿ ಕ್ರಿಕೆಟ್‌ ಆಡಳಿತದಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳನ್ನು ಹೊಂದಿರಬಾರದು ಎನ್ನುವ ನಿಯಮವಿದೆ. ಆದ್ದರಿಂದ ಇವರು ಒಂದು ಹುದ್ದೆಗೆ ರಾಜೀನಾಮೆ ನೀಡಬೇಕಿದೆ.

SCROLL FOR NEXT