ಕ್ರಿಕೆಟ್

ಮಹಿಳಾ ಐಪಿಎಲ್ ಟಿ20 ಸರಣಿಗೆ ಬಿಸಿಸಿಐ ಚಿಂತನೆ?

Srinivasamurthy VN

ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ಹೆಜ್ಜೆ ಇಟ್ಟಿದ್ದು, ಮಹಿಳಾ ಐಪಿಎಲ್ ಟಿ20 ಸರಣಿ  ಆಯೋಜನೆಗೆ ಸಿದ್ಧತೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ವಿದೇಶಿ ಟಿ20 ಲೀಗ್​ಗಳಲ್ಲಿ ಆಡಲು ಭಾರತದ ಮಹಿಳಾ ಕ್ರಿಕೆಟಿಗರಿಗೆ ಅನುಮತಿ ನೀಡಿದ ಬೆನ್ನಲ್ಲೇ ಬಿಸಿಸಿಐ ಈ ಮಹತ್ವದ ನಿರ್ಣಯ ಕೈಗೊಂಡಿದ್ದು, ಪುರುಷರ ಐಪಿಎಲ್ ಟೂರ್ನಿ  ಮಾದರಿಯಲ್ಲಿಯೇ ಮಹಿಳಾ ಟಿ20 ಲೀಗ್ ಆರಂಭಿಸುವ ಬಗ್ಗೆ ಚಿಂತನೆ ನಡೆಸಿದೆ. ಮೂಲಗಳ ಪ್ರಕಾರ ಈ ಬಗ್ಗೆ ಈಗಾಗಲೇ ಅಧ್ಯಕ್ಷ ಅನುರಾಗ್ ಠಾಕೂರ್ ನೇತೃತ್ವದಲ್ಲಿ ಸಭೆ ನಡೆದಿದ್ದು,  ಟೂರ್ನಿಯ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಮಾತನಾಡಿದ್ದ ಅನುರಾಗ್ ಠಾಕೂರ್ ಅವರು, ‘2020ರ ವೇಳೆಗೆ ಮಹಿಳಾ ಕ್ರಿಕೆಟ್​ನಲ್ಲಿ ಭಾರತ ನಂ. 1 ತಂಡವಾಗಬೇಕು  ಎಂಬುದು ನನ್ನ ಕನಸು. ಮುಂದಿನ 5 ವರ್ಷಗಳ ಕಾಲ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಶಿಫಾರಸುಗಳನ್ನು ಜುಲೈ ವೇಳೆಗೆ ಸಲ್ಲಿಸುವಂತೆ ಈಗಾಗಲೆ ಮಹಿಳೆಯರ ಕಾರ್ಯಕಾರಿ ಸಮಿತಿಗೆ  ಸೂಚಿಸಿದ್ದೇವೆ’ ಎಂದು ಹೇಳಿದ್ದರು.

ಇದಾದ ಕೆಲವೇ ದಿನಗಳಲ್ಲಿ ಬಿಗ್ ಬ್ಯಾಷ್ ನಂತಹ ವಿದೇಶಿ ಲೀಗ್ ಗಳಲ್ಲಿ ಪಾಲ್ಗೊಳ್ಳಲು ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಅನುಮತಿ ನೀಡಿದ್ದರು. ಇದರ ಪರಿಣಾಮ ಪ್ರಸಕ್ತ  ಸಾಲಿನಲ್ಲಿ ನಡೆಯಲಿರುವ ಬಿಗ್ ಬ್ಯಾಷ್ ಟೂರ್ನಿಯಲ್ಲಿ ಈ ವರ್ಷ ಭಾರತದ ಹರ್ಮನ್​ಪ್ರೀತ್ ಕೌರ್, ಸ್ಮೃತಿ ಮಂದನಾ, ಕನ್ನಡತಿ ವೇದಾ ಕೃಷ್ಣಮೂರ್ತಿ, ನಾಯಕಿ ಮಿಥಾಲಿ ರಾಜ್, ವೇಗಿ  ಜೂಲನ್ ಗೋಸ್ವಾಮಿ ಭಾಗವಹಿಸಲಿದ್ದಾರೆ. ಮುಂದಿನ ತಿಂಗಳು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕೂಡ ತನ್ನದೇ ಮಹಿಳಾ ಟಿ20 ಸೂಪರ್ ಲೀಗ್ ಟೂರ್ನಿಯನ್ನು ಸಂಘಟಿಸಲಿದೆ.

SCROLL FOR NEXT