ನವದೆಹಲಿ: ಅಂಡರ್ 19 ಕ್ರಿಕೆಟ್ ನಲ್ಲಿ ವಯಸ್ಸಿನ ಮೋಸಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ನಿರ್ಣಯ ಕೈಗೊಂಡಿದ್ದು, ಈ ನಿರ್ಧಾರವನ್ನು ಅಂಡರ್ 19 ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಸ್ವಾಗತಿಸಿದ್ದಾರೆ.
ಈ ಹಿಂದೆ ಬಿಸಿಸಿಐ ಅಂಡರ್ 19 ಕ್ರಿಕೆಟ್ ಆಟಗಾರರ ವಯಸ್ಸಿನ ಮೋಸಕ್ಕೆ ಕಡಿವಾಣ ಹಾಕಲೆಂದು 2 ಸೀಸನಲ್ಲಿ ಮತ್ತು ಒಮ್ಮೆ ಮಾತ್ರ ಕಿರಿಯರ ವಿಶ್ವಕಪ್ ನಲ್ಲಿ ಪಾಲ್ಗೊಳ್ಳುವ ನಿರ್ಧಾರ ಕೈಗೊಂಡಿತ್ತು. ಈ ನಿರ್ಧಾರಕ್ಕೆ ಬೆಂಬಲ ನೀಡಿರುವ ಕೋಚ್ ರಾಹುಲ್ ದ್ರಾವಿಡ್, ಬಿಸಿಸಿನ ಈ ಕ್ರಮದಿಂದ ವಯೋಮಾನ ಮೋಸದ ಪ್ರಕರಣಗಳು ತಗ್ಗಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಇಂಥಹ ನಿರ್ಧಾರದಿಂದ ವಯೋಮಿತಿಯ ಸಂಘರ್ಷ ತಪ್ಪುತ್ತದೆ. ಜತೆಗೆ ಪಕ್ಷಪಾತ ರಹಿತ ಆಟ ಉಳಿಯತ್ತದೆ. ಫಲಿತಾಂಶದ ಮೇಲೆ ಹೆಚ್ಚು ನಿಗಾ ಇಡಬಹುದು. ವಯೋಮಿತಿ ಪ್ರಮಾಣಪತ್ರದ ಗೊಂದಲದಿಂದಲೇ ಸಾಕಷ್ಟು ಉತ್ತಮ ಕ್ರಿಕೆಟಿಗರನ್ನು ಕಳೆದುಕೊಂಡಿದ್ದೇವೆ. ಜತೆಗೆ ಜನನ ಪ್ರಮಾಣಪತ್ರ ಸಲ್ಲಿಸುವ ವಿಷಯದಲ್ಲಿ ಕಠಿಣ ನಿರ್ಧಾರ ಕೈಗೊಳ್ಳಬೇಕು" ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಕೇವಲ ಸರಣಿ ಗೆಲುವಿನ ಮೇಲಷ್ಟೇ ಕೇಂದ್ರವಾಗಿರುವುದಕ್ಕಿಂತ ಆಟಗಾರರ ಸಾಮರ್ಥ್ಯ ಹೆಚ್ಚಿಸುವ ಮತ್ತು ಉತ್ತಮ ಆಟವಾಡುವ ಕುರಿತು ಗಮನ ಕೇಂದ್ರೀಕರಿಸಬೇಕು. ಭವಿಷ್ಯದ ಉತ್ತಮ ಕ್ರಿಕೆಟಿಗರನ್ನು ರೂಪಿಸುವ ನಿಟ್ಟಿನಲ್ಲಿ ಗೆಲುವಿಗಿಂತ ಉತ್ತಮ ಆಟವೇ ಮುಖ್ಯ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.