ಕ್ರಿಕೆಟ್

ಐಸಿಸಿ ಕ್ರಿಕೆಟ್ ಸಮಿತಿ ಸದಸ್ಯತ್ವಕ್ಕೆ ರವಿಶಾಸ್ತ್ರಿ ರಾಜಿನಾಮೆ

Vishwanath S

ನವದೆಹಲಿ: ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆ ವಂಚಿತ ರವಿಶಾಸ್ತ್ರಿ ಅವರು ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಕ್ರಿಕೆಟ್ ಸಮಿತಿ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. 

ಐಸಿಸಿಯ ನನ್ನ ಸ್ಥಾನಕ್ಕೇ ರಾಜಿನಾಮೆ ನೀಡಿದ್ದೇನೆ. ಖಾಸಗಿ ಕಾರಣಗಳಿಂದಾಗಿ ನಾನು ರಾಜಿನಾಮೆ ನೀಡುತ್ತಿದ್ದೇನೆ. ಜತೆಗೆ 6 ವರ್ಷಗಳಿಂದ ನಾನು ಆ ಸ್ಥಾನದಲ್ಲಿ ಸೇವೆ ಸಲ್ಲಿಸಿದ್ದೇನೆ ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ. ಈ ಮಧ್ಯೆ ಅವರು ವೀಕ್ಷಕ ವಿತರಣೆಕಾರನಾಗಿ, ಅಂಕಣಕಾರರಾಗಿ ಸಾಕಷ್ಟು ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದರಿಂದ ರಾಜಿನಾಮೆ ನೀಡಿದ್ದಾರೆ.

ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆ ರೇಸ್ ನಲ್ಲಿದ್ದ ರವಿಶಾಸ್ತ್ರಿಯನ್ನು ಹಿಂದಿಕ್ಕಿ ಕನ್ನಡಿಗ ಅನಿಲ್ ಕುಂಬ್ಳೆ ಆಯ್ಕೆಯಾಗಿದ್ದರು. ಇದರ ಬಳಿಕ ತಂಡದ ಬ್ಯಾಟಿಂಗ್ ಕೋಚ್ ಹುದ್ದೆಗೂ ಅವರು ಅರ್ಜಿ ಸಲ್ಲಿಸಿದ್ದು ಎರಡು ಹುದ್ದೆಗಳು ಸಿಗದೇ ಬೇಸರಗೊಂಡಿದ್ದರು.

ಅನಿಲ್ ಕುಂಬ್ಳೆ ಅವರು ಐಸಿಸಿ ಕ್ರಿಕೆಟ್ ಸಮಿತಿಯ ಅಧ್ಯಕ್ಷರಾಗಿರುವ ಕಾರಣ ರವಿಶಾಸ್ತ್ರಿ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎನ್ನಲಾಗಿದೆ.

ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಸ್ಥಾನ ತಪ್ಪಿದ್ದರಿಂದ ಕೋಪಗೊಂಡ ರವಿಶಾಸ್ತ್ರಿ ಅವರು ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾದ ಸೌರವ್ ಗಂಗೂಲಿ ವಿರುದ್ದ ವಾಗ್ದಾಳಿ ನಡೆಸಿದ್ದರು.
SCROLL FOR NEXT