ಕ್ರಿಕೆಟ್

ನೋವಿನಲ್ಲೂ ಕಾರ್ಯ ನಿರ್ವಹಿಸಿದ ಜೆಫ್ !

Srinivasamurthy VN

ಢಾಕಾ: ಚುಟುಕು ಕ್ರಿಕೆಟ್ ನ ಜನಕ ಎಂದೇ ಖ್ಯಾತರಾಗಿದ್ದ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಮಾರ್ಟಿನ್ ಕ್ರೋವ್ ನಿಧನರಾದ ಕೆಲವೇ ಗಂಟೆಗಳಲ್ಲಿ ಅವರ ಹಿರಿಯ ಸಹೋದರ ಜೆಫ್  ಕ್ರೋವ್ ಅವರು ತಮ್ಮ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಏಷ್ಯಾಕಪ್ ಸರಣಿ ನಿಮಿತ್ತ ನಿನ್ನೆ ಢಾಕಾದಲ್ಲಿ ನಡೆದ ಭಾರತ ಮತ್ತು ಯುಎಇ ನಡುವಿನ ಪಂದ್ಯದ ರೆಫರಿಯಾಗಿದ್ದ ಜೆಫ್ ಕ್ರೋವ್ ಅವರು ಮಾರ್ಟಿನ್ ಕ್ರೋವ್ ನಿಧನದಿಂದಾಗಿ ಕರ್ತವ್ಯಕ್ಕೆ  ಹಾಜರಾಗುವುದು ಬಹುತೇಕ ಅನುಮಾನವಾಗಿತ್ತು. ಆದರೆ ಕಿರಿಯ ಸಹೋದರನ ನಿಧನ ಸುದ್ದಿ ತಲುಪಿದ್ದರೂ, ಜೆಫ್ ಕ್ರೋವ್ ಭಾರತ ಹಾಗೂ ಯುಎಇ ನಡುವಿನ ಪಂದ್ಯದಲ್ಲಿ ಮ್ಯಾಚ್  ರೆಫ್ರಿಯಾಗಿ ಕಾರ್ಯನಿರ್ವ ಹಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾದರು. ನೋವಿನ ನಡುವೆಯೂ ಕರ್ತವ್ಯಕ್ಕೆ ಹಾಜರಾಗಿ ತಮ್ಮ ಜವಾಬ್ದಾರಿ ನಿಭಾಯಿಸಿದರು.

ಇನ್ನು ಪಂದ್ಯಕ್ಕೂ ಮುನ್ನ ಭಾವುಕವಾಗಿಯೇ ಮೈದಾನಕ್ಕೆ ಆಗಮಿಸಿದ ಜೆಫ್ ಕ್ರೋವ್ ಮೌನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆ ಬಳಿಕ ದೈತ್ಯ ಪರದೆಯಲ್ಲಿ ಮಾರ್ಟಿನ್ ಕ್ರೋವ್ ಚಿತ್ರ  ಬಿತ್ತರವಾಗುತ್ತಿದ್ದಂತೆ ಭಾವುಕರಾದ ಜೆಫ್ ಕ್ರೋವ್ ಕ್ರೀಡಾಭಿಮಾನಿಗಳಿಗೆ ಸೆಲ್ಯೂಟ್ ಮಾಡುತ್ತ ತಮ್ಮ ಕೊಠಡಿಯತ್ತ ಹೆಜ್ಜೆ ಹಾಕಿದರು. ಈ ಅಪರೂಪದ ಘಟನೆ ಕ್ರಿಕೆಟ್ ಲೋಕದಲ್ಲಿ ಅಚ್ಚಳಿಯದೇ  ಉಳಿಯಲಿದೆ. ಜೆಫ್ ಕ್ರೋವ್‌ರ ಕ್ರೀಡಾ ಸ್ಫೂರ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಟ್ವಿಟರ್‌ನಲ್ಲಿ ಕ್ರಿಕೆಟ್ ಅಭಿಮಾನಿಗಳು ಅವರನ್ನು ಹಾಡಿ ಹೊಗಳಿದ್ದಾರೆ.

SCROLL FOR NEXT