ಬೆಂಗಳೂರು: ಹಲವು ರೋಚಕತೆಗೆ ಕಾರಣವಾದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯಕ್ಕೆ ಭಾರತದ ಹಾಕಿ ಆಟಗಾರರೂ ಕೂಡ ಸಾಕ್ಷಿಯಾಗಿದ್ದರು.
ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವನ್ನು ಭಾರತದ ತಂಡದ ನಾಯಕ ಸರ್ದಾರ್ ಸಿಂಗ್ ನೇತೃತ್ವದ ಹಾಕಿ ತಂಡದ ಆಟಗಾರರು ಕಣ್ತುಂಬಿಕೊಂಡರು. ರಿಯೋ ಒಲಿಂಪಿಕ್ಸ್ ಹಾಗೂ ಅಜ್ಲಾನ್ ಷಾ ಕಪ್‌ಗಾಗಿ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಶಿಬಿರದಲ್ಲಿ ಪಾಲ್ಗೊಂಡಿರುವ ಭಾರತ ಹಾಕಿ ತಂಡದ ಆಟಗಾರರು ಬುಧವಾರದ ಪಂದ್ಯ ವೀಕ್ಷಿಸಿದರು.
ಬೆಂಗಳೂರಿನಲ್ಲಿ ಅಭ್ಯಾಸ ನಡೆಸುತ್ತಿದ್ದ ಹಾಕಿ ಆಟಗಾರರಿಗೆ ಪಂದ್ಯ ವೀಕ್ಷಿಸುವಂತೆ ಖುದ್ದು ಬಿಸಿಸಿಐ ಆಹ್ವಾನ ನೀಡಿತ್ತು. ಅಲ್ಲದೆ ಸಂಪೂರ್ಣ ಹಾಕಿ ತಂಡಕ್ಕೆ ಪಂದ್ಯ ವೀಕ್ಷಿಸಲು ಬೇಕಾದ ಎಲ್ಲ ಏರ್ಪಾಟುಗಳನ್ನೂ ಬಿಸಿಸಿಐ ಮಾಡಿತ್ತು. ಬಿಸಿಸಿಐ ಆಹ್ವಾನದ ಮೇರೆಗೆ ಕೆಂಪು ಟಿಶರ್ಟ್ ಧರಿಸಿ ಕ್ರೀಡಾಂಗಣಕ್ಕೆ ಆಗಮಿಸಿದ ಹಾಕಿ ಆಟಗಾರರ ಭಾರತ ತಂಡವನ್ನು ಹುರಿದುಂಬಿಸಿದರು. ಅಲ್ಲದೆ ಭಾರತ ತಂಡ ಕೊನೆಯ ಓವರ್ ನಲ್ಲಿ ರೋಚಕ ಜಯ ದಾಖಲಿಸುತ್ತಿದ್ದಂತೆಯೇ ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದರು.
ಕ್ರೀಡಾ ಉತ್ತೇಜನದ ದೃಷ್ಟಿಯಿಂದ ಬಿಸಿಸಿಐನ ಈ ಕಾರ್ಯ ನಿಜಕ್ಕೂ ಶ್ಲಾಘನಾರ್ಹವಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಬಿಸಿಸಿಐನ ಈ ಕಾರ್ಯಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
Good luck team india