ನಾಗಪುರ: ಸತತ ಗೆಲುವಿನ ಹುಮ್ಮಸಿನಲ್ಲಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಬ್ರೇಕ್ ಹಾಕಿ ಶಾಕ್ ಕೊಟ್ಟಿದೆ.
ನಾಗಪುರದಲ್ಲಿ ನಡೆದ ಟಿ20 ವಿಶ್ವಕಪ್ ನ ಮೊದಲ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಫ್ಘಾನಿಸ್ತಾನ 6 ರನ್ ಗಳಿಂದ ರೋಚಕ ಜಯ ಪಡೆದಿದೆ. ಗೆಲ್ಲಲು 124 ರನ್ ಗುರಿ ಪಡೆದ ವೆಸ್ಟ್ ಇಂಡೀಸ್ ಇನ್ನಿಂಗ್ಸ್ ಕೇವಲ 117 ರನ್ನಿಗೆ ಅಂತ್ಯಗೊಂಡಿದೆ. ಆಫ್ಘನ್ ನ ಬೌಲರ್ ಗಳು ಶಿಸ್ತುಬದ್ಧ ದಾಳಿ ನಡೆಸಿದರು. ಗೆಲುವಿಗೆ ಪ್ರಮುಖ ಕಾರಣವಾಯಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ 123 ರನ್ ಪೇರಿಸಲು ಪ್ರಮುಖವಾಗಿ ಕಾರಣವಾಗಿದ್ದು ಮಧ್ಯಕ್ರಮಾಂಕದ ಆಟಗಾರ ನಜೀಬುಲ್ಲಾ ಜದ್ರಾನ್. ಕೇವಲ 40 ಎಸೆತಗಳಲ್ಲಿ ಅವರು ಅಜೇಯ 48 ರನ್ ಗಳಿಸಿದರು. ಅವರನ್ನು ಬಿಟ್ಟರೆ ಓಪನರ್ ಮೊಹಮ್ಮದ್ ಶಹಜಾದ್ ಹಾಗೂ ನಾಯಕ ಅಸ್ಘರ್ ಸ್ಟಾನಿಕ್'ಝೈ ಅವರು ಒಂದಷ್ಟು ಉಪಯುಕ್ತ ರನ್ ಗಳಿಸಿ ತಂಡಕ್ಕೆ ಮರ್ಯಾದೆಯ ಸ್ಕೋರು ಬರಲು ನೆರವಾದರು.
ಆಫ್ಘಾನಿಸ್ತಾನ ತಂಡಕ್ಕೆ ಈ ವಿಶ್ವಕಪ್'ನಲ್ಲಿ ಇದು ಚೊಚ್ಚಲ ಗೆಲುವಾಗಿದೆ. ಟೂರ್ನಿಯ ಫೇವರಿಟ್'ಗಳಲ್ಲೊಬ್ಬರೆನಿಸಿರುವ ಕೆರಿಬಿಯನ್ ತಂಡದ ವಿರುದ್ಧ ಗೆಲುವಿನೊಂದಿಗೆ ಆಫ್ಘಾನಿಸ್ತಾನವು ವಿಶ್ವಕಪ್ ಟೂರ್ನಿಯನ್ನು ಅಂತ್ಯಗೊಳಿಸಿದೆ. ಇಂಜಮಮ್ ಉಲ್ ಹಕ್ ಗರಡಿಯಲ್ಲಿ ಪಳಗಿರುವ ಆಫ್ಘಾನಿಸ್ತಾನ ತನ್ನ ಹಿಂದಿನ ಮೂರು ಪಂದ್ಯಗಳನ್ನು ಸೋತರೂ ವೀರೋಚಿತ ಹೋರಾಟ ತೋರಿದ್ದು ಗಮನಾರ್ಹ.
ಆಫ್ಘಾನಿಸ್ತಾನ ಪರ ನಜೀಬುಲ್ಲಾ ಜದ್ರಾನ್ ಅಜೇಯ 48, ಮೊಹಮ್ಮದ್ ಶಹಜಾದ್ 24, ಅಸ್ಘರ್ ಸ್ಟಾನಿಕ್ಜಾಯ್ 16 ರನ್ ಗಳಿಸಿದ್ದಾರೆ.
ವೆಸ್ಟ್ ಇಂಡೀಸ್ ಪರ ಡ್ವೇಯ್ನ್ ಬ್ರಾವೋ 28, ಜಾನ್ಸನ್ ಚಾರ್ಲ್ಸ್ 22, ದಿನೇಶ್ ರಾಮದಿನ್ 18, ಕಾರ್ಲಸ್ ಬ್ರಾತ್'ವೇಟ್ 13, ಆಂಡ್ರೆ ಫ್ಲೆಚರ್ ಅಜೇಯ 11 ರನ್ ಗಳಿಸಿದ್ದಾರೆ.