ಕ್ರಿಕೆಟ್

ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ದ.ಆಫ್ರಿಕಾಗೆ ಜಯ

Srinivasamurthy VN

ನವದೆಹಲಿ: ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಪ್ರಸಕ್ತ ವರ್ಷದ ಟಿ20 ವಿಶ್ವಕಪ್ ಫೇವರಿಟ್ ಪಟ್ಟಿಯೊಂದಿಗೆ ಸರಣಿ ಆರಂಭಿಸಿದ್ದ ಶ್ರೀಲಂಕಾ ತಂಡ ಸೋಲಿನ ವಿದಾಯ ಕಂಡಿತು.

ಸೋಮವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೂರ್ನಿಯ ಲೀಗ್ ಹಂತದ ಕೊನೇ ಹಾಗೂ ಔಪಚಾರಿಕ ಪಂದ್ಯದಲ್ಲಿ ಶ್ರೀಲಂಕಾ ತಂಡ 8 ವಿಕೆಟ್‌ಗಳಿಂದ ಸೋಲನುಭವಿಸಿತು. ಫಿರೋಜ್ ಷಾ  ಕೋಟ್ಲಾ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 19.3 ಓವರ್‌ಗಳಲ್ಲಿ 120ರನ್‌ಗಳಿಗೆ ಆಲೌಟ್ ಆಯಿತು. ಆರಂಭಿಕ ಆಟಗಾರ ದಿಲ್ಶಾನ್ (36ರನ್),  ಚಾಂಡಿಮಾಲ್ (21ರನ್) ಮತ್ತು ಶನಕ (20ರನ್) ಅವರನ್ನು ಹೊರತು ಪಡಿಸಿದರೆ ಲಂಕಾದ ಇನ್ನಾವುದೇ ಆಟಗಾರರೂ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆಯೂರು ಪ್ರಯತ್ನ ಮಾಡಲಿಲ್ಲ.  ಹೀಗಾಗಿ ಶ್ರೀಲಂಕಾ ತಂಡ 19.3 ಓವರ್ಗಳಲ್ಲಿ ಕೇವಲ 120ರನ್ ಗಳಿಗೆ ಆಲ್ ಔಟ್ ಆಯಿತು.

ದಕ್ಷಿಣ ಆಫ್ರಿಕಾ ಪರ ಅಬಾಟ್, ಫಂಗಿಸೋ ಮತ್ತು ಬೆಹರ್ಡೀನ್ ತಲಾ 2 ವಿಕೆಟ್ ಪಡೆದರೆ, ಸ್ಟೇಯ್ನ್ ಮತ್ತು ಇಮ್ರಾನ್ ತಾಹಿರ್ ತಲಾ 1 ವಿಕೆಟ್ ಪಡೆದರು.

ಲಂಕಾ ನೀಡಿದ 121ರನ್ ಗಳ ಗುರಿಯನ್ನು ಬೆನ್ನುಹತ್ತಿದ ದಕ್ಷಿಣ ಆಫ್ರಿಕಾ ತಂಡ ಹಶೀಮ್ ಆಮ್ಲಾ (ಅಜೇಯ 56ರನ್) ಮತ್ತು ಫಾಫ್ ಡುಪ್ಲೆಸಿಸ್ (31ರನ್) ಅವರ ಸಮಯೋಚಿತ ಆಟದ ನೆರವಿನಿಂದ 17.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿ ಲಂಕಾ ವಿರುದ್ಧ 8 ವಿಕೆಟ್ ಗಳ ಜಯಭೇರಿ ಭಾರಿಸಿತು. ಈ ಪಂದ್ಯದ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಪಡೆ ಟಿ20 ವಿಶ್ವಕಪ್ ಗೆ ಗೆಲುವಿನ ವಿದಾಯ ಹೇಳಿದರೆ. ಹಾಲಿ ಚಾಂಪಿಯನ್ ಎಂಬ ಹಣೆಪಟ್ಟಿಯ ಹೊರತಾಗಿಯೂ ಶ್ರೀಲಂಕಾ ತಂಡ ಸೋಲಿನ ವಿದಾಯ ಹೇಳಿದೆ.

ಶ್ರೀಲಂಕಾದ ಪ್ರಮುಖ 2 ವಿಕೆಟ್ ಕಬಳಿಸಿದ ಫಂಗಿಸೋ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

SCROLL FOR NEXT