ಅಹಮದಾಬಾದ್: ಟೆಸ್ಟ್ ಪಾದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತದ ಮೊದಲಿಗ ಎಂಬ ಖ್ಯಾತಿಗೆ ಭಾಜನರಾಗಿರುವ ಹಿರಿಯ ಮಾಜಿ ಕ್ರಿಕೆಟಿಗ ದೀಪಕ್ ಶೋಧನ್ ವಿಧಿವಶರಾಗಿದ್ದಾರೆ.
87ರ ಹರೆಯದ ದೀಪಕ್ ಶೋಧನ್ ಅವರು ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಇನ್ನು ದೀಪಕ್ ಸುದೀರ್ಘ ಕಾಲ ಬದುಕಿದ್ದ ಟೆಸ್ಟ್ ಕ್ರಿಕೆಟಿಗ ಎನಿಸಿಕೊಂಡಿದ್ದರು.
ದೀಪಕ್ ಅವರು 1928ರ ಅಕ್ಟೋಬರ್ 18 ರಂದು ಅಹಮದಾಬಾದ್ ನಲ್ಲಿ ಜನಿಸಿದ್ದರು. 1952ರಲ್ಲಿ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದ ಅವರು 1953ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಪಂದ್ಯ ಕೊನೆಯ ಪಂದ್ಯವಾಯಿತು. ಕೇವಲ 3 ಟೆಸ್ಟ್ ಪಂದ್ಯಗಳನ್ನಾಡಿರುವ ದೀಪಕ್ ಅವರು 181 ರನ್ ಗಳಿಸಿದ್ದಾರೆ.
1952ರಲ್ಲಿ ಈಡನ್ ಗಾರ್ಡನ್ ನಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ಮೂಲಕ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದರು. ಏಡಗೈ ಬ್ಯಾಟ್ಸ ಮನ್ ಹಾಗೂ ಏಡಗೈ ವೇಗಿ ಆಗಿದ್ದ ದೀಪಕ್ ಅವರು ಈ ಪಂದ್ಯದಲ್ಲಿ ಎಂಟನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದರು. ಆ ವೇಳೆಗೆ ಭಾರತ 179 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಭರ್ಜರಿಯಾಗಿ ಬ್ಯಾಟ್ ಬೀಸಿದ್ದ ದೀಪಕ್ ಅವರು ಮೊದಲ ಪಂದ್ಯದಲ್ಲೇ 110 ರನ್ ಗಳಿಸಿದರು. ಆ ಮೂಲಕ ಭಾರತ 140 ರನ್ ಗಳ ಮುನ್ನಡೆ ಪಡೆದುಕೊಂಡಿತ್ತು. ಅದೃಷ್ಟವಶಾತ್ ಭಾರತ ಸೋಲಬೇಕಿದ್ದ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು.