ಡೇವಿಡ್ ವಾರ್ನರ್ - ಗೌತಂ ಗಂಭೀರ್
ಕೋಲ್ಕತಾ: ಭಾನುವಾರ ಕೋಲ್ಕತಾ ನೈಟ್‌ರೈಡರ್ಸ್ ತಂಡವು ನಾಕೌಟ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದ್ದು ಈ ಪಂದ್ಯದಲ್ಲಿ ಗೆದ್ದರೆ ಕೆಕೆಆರ್ ಪ್ಲೇ ಆಫ್ಗೆ ಅರ್ಹತೆ ಪಡೆಯಲಿದೆ.
ಕಳೆದ ವರ್ಷದ ಐಪಿಎಲ್‌ನ ಮಧ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಕೆಕೆಆರ್ ಎರಡು ಲೀಗ್ ಪಂದ್ಯಗಳಲ್ಲಿ ಸೋತು ಮುನ್ನಡೆಯಲು ವಿಫಲವಾಗಿತ್ತು. ಈ ಬಾರಿಯೂ ಪ್ರಸ್ತುತ ತಂಡ ಅದೇ ಪರಿಸ್ಥಿತಿಯಲ್ಲಿದ್ದು ಅಂತಿಮ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಗೆದ್ದರೆ ಮಾತ್ರ ಕೆಕೆಆರ್ ಮುನ್ನಡೆಯಲಿದೆ. ಇಲ್ಲದಿದ್ದರೆ ಬಹುತೇಕ ಹೊರಬೀಳುವ ಸಾಧ್ಯತೆಯಿದೆ.
ಅಂಕಪಟ್ಟಿಯಲ್ಲಿ 16 ಅಂಕದೊಂದಿಗೆ ಅಗ್ರಸ್ಥಾನದಲ್ಲಿರುವ ಹೈದರಾಬಾದ್ ತಂಡವು ಉತ್ತಮ ರನ್ ರೇಟ್ ಹೊಂದಿದ್ದು ಅಂತಿಮ ಲೀಗ್ ಪಂದ್ಯದಲ್ಲಿ ಸೋತರೂ ಪ್ಲೇ ಆಫ್ಗೆ ತೇರ್ಗಡೆಯಾಗಲಿದೆ. ಆದರೆ ಗೆದ್ದರೆ ಯಾವುದೇ ಚಿಂತೆಯಿಲ್ಲದೇ ಹೈದರಾಬಾದ್ ಅಗ್ರ ತಂಡವಾಗಿ ಮುನ್ನಡೆಯಲಿದೆ.
ಆದರೆ ಗೌತಮ್ ಗಂಭೀರ್ ನಾಯಕತ್ವದ ಕೆಕೆಆರ್ ತಂಡ ಹೊರಬೀಳುವ ಅಪಾಯಕ್ಕೆ ಸಿಲುಕಿದೆ. ಉತ್ತಮ ಫಾರ್ಮ್ನಲ್ಲಿದ್ದ ಆ್ಯಂಡ್ರೆ ರಸೆಲ್ ಗಾಯಗೊಂಡಿರುವುದು ಮತ್ತು ಅಸ್ಥಿರ ಬ್ಯಾಟಿಂಗ್‌ನಿಂದಾಗಿ ಕೆಕೆಆರ್ ಸೋಲುತ್ತಿದೆ. ಎರಡು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಗಿದ್ದ ಜಮೈಕಾದ ಆಲ್‌ರೌಂಡರ್ ರಸೆಲ್ ಕಾಲಿನ ಗಾಯದಿಂದಾಗಿ ಗುಜರಾತ್ ವಿರುದ್ದದ ಪಂದ್ಯ ಕಳೆದುಕೊಂಡಿದ್ದರು.
ರಸೆಲ್ ಅವರು ಈ ಋತುವಿನಲ್ಲಿ ಕೆಕೆಆರ್ ಪರವಾಗಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಇವರು ಗರಿಷ್ಠ ವಿಕೆಟ್ ಪಡೆದವರಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಬ್ಯಾಟಿಂಗ್‌ನಲ್ಲೂ ಗಮನಾರ್ಹ ನಿರ್ವಹಣೆ ನೀಡಿರುವ ಅವರು ತಂಡದ ನಾಲ್ಕನೇ ಗರಿಷ್ಠ ರನ್ ಗಳಿಸಿದ ಆಟಗಾರರಾಗಿದ್ದಾರೆ.
ಚಂಡಮಾರುತದಿಂದ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಕಾರಣ ಈಡನ್ ಗಾರ್ಡನ್ಸ್‌ನ ಮೈದಾನದಲ್ಲಿ ನಡೆಯುವ ಪಂದ್ಯಕ್ಕೆ ಮಳೆ ತಡೆಯೊಡ್ಡಲಿದೆಯೇ? ಎಂಬ ಆತಂಕವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics