ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಐಪಿಎಲ್ 9 ಟೂರ್ನಿಯ ಪ್ಲೇ ಆಫ್ ಘಟ್ಟದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಗುಜರಾತ್ ಲಯನ್ಸ್ ತಂಡ 159 ರನ್ ಗಳ ಸವಾಲಿನ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಲಯನ್ಸ್ ತಂಡ ಆರಂಭಿಕ ಆಘಾತದ ನಡುವೆಯೂ 19.5 ಓವರ್ ಗಳಲ್ಲಿ 158 ರನ್ ಗಳಿಗೆ ಸರ್ವಪತನ ಕಂಡಿತು. ಆ ಮೂಲಕ ಬೆಂಗಳೂರು ತಂಡಕ್ಕೆ ಗೆಲ್ಲಲು 159 ರನ್ ಗಳ ಸವಾಲಿನ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಗುಜರಾತ್ ಲಯನ್ಸ್ ತಂಡಕ್ಕೆ ಆರ್ ಸಿಬಿಯ ಅಬ್ದುಲ್ಲಾ ಆರಂಭಿಕ ಆಘಾತ ನೀಡಿದರು. ಎರಡನೇ ಓವರ್ ನಲ್ಲಿಯೇ ಮೆಕ್ಕಲಮ್ ಮತ್ತು ಫಿಂಚ್ ಅವರ ವಿಕೆಟ್ ಪಡೆದರು. ಬಳಿಕ ಗುಜರಾತ್ ತಂಡದ ನಾಯಕ ಸುರೇಶ್ ರೈನಾ ಕ್ರೀಸ್ ಗೆ ಬರುತ್ತಿದ್ದಂತೆಯೇ ವಾಟ್ಸನ್ ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆ ಗೂಡಿದ ಕಾರ್ತಿಕ್ ಮತ್ತು ಸ್ಮಿತ್ ಜೋಡಿ ಗುಜರಾತ್ ತಂಡ ಬ್ಯಾಟಿಂಗ್ ಗೆ ಬಲ ನೀಡುವ ಪ್ರಯತ್ನ ಮಾಡಿದರು. ಭರ್ಜರಿ ಬ್ಯಾಟಿಂಗ್ ಮಾಡಿದ ಸ್ಮಿತ್ 73 ರನ್ ಗಳಿಸಿ ಔಟ್ ಆದರು. ಬಳಿಕ ಬಂದ ಜಡೇಜಾ 3 ರನ್ ಗಳಿಸಿ ಔಟ್ ಆದರೆ, ಬ್ರಾವೋ 8 ರನ್ ಗಳಿಸಿ ವಾಟ್ಸನ್ ಗೆ ವಿಕೆಟ್ ಒಪ್ಪಿಸಿದರು.
ಅಂತಿಮ ಹಂತದಲ್ಲಿ ಆರ್ ಸಿಬಿ ಬೌಲರ್ ಗಳಿಗೆ ಪ್ರತಿರೋಧ ಒಡ್ಡುವ ಪ್ರಯತ್ನ ಮಾಡಿದ ದ್ವಿವೇದಿ ಗುಜರಾತ್ ಮೊತ್ತ 150ರ ಗಡಿ ದಾಟುವಂತೆ ನೋಡಿಕೊಂಡರು ಅಂತಿಮವಾಗಿ ಗುಜರಾತ್ ತಂಡ 19.5 ಓವರ್ ಗಳಲ್ಲಿ 158 ರನ್ ಗಳಿಸಿ ಆಲ್ ಔಟ್ ಆಯಿತು. ಆರ್ ಸಿಬಿ ಪರ ಅಬ್ದುಲ್ಲಾ ಮತ್ತು ಜೋರ್ಡನ್ ತಲಾ 2 ವಿಕೆಟ್ ಪಡೆದರೆ, ಶೇನ್ ವಾಟ್ಸನ್ 4 ವಿಕೆಟ್ ಪಡೆದು ಮಿಂಚಿದರು. ಚಹಾಲ್ 42 ರನ್ ನೀಡಿ 1 ವಿಕೆಟ್ ಪಡೆದರು.