ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧದಿಂದ ನೋಟು ಬದಲಾವಣೆಗೆ ಗಂಟೆ ಗಟ್ಟಲೆ ಕ್ಯೂ ನಿಲ್ಲಲು ಅಸಮಾಧಾನ ವ್ಯಕ್ತಪಡಿಸುವ ದೇಶದ ಜನತೆಗೆ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಅವರ ತಾಳ್ಮೆಯನ್ನು ನೆನಪಿಸಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಲಾನ್ಯ್ ನಾಯಕ್ ಹನುಮಂತಪ್ಪ ಹಿಮಾಲಯದ ಮೈ ಕೊರೆಯುವ ಚಳಿಯಲ್ಲಿ ಹಿಮಪಾತಕ್ಕೆ ಸಿಲುಕಿದರೂ, ತಮ್ಮನ್ನು ಯಾರಾದರೂ ರಕ್ಷಿಸಿಯಾರೆಂದು ಜೀವ ಕೈಯಲ್ಲಿ ಹಿಡಿದು ಕಾದಿದ್ದರು.
35 ಅಡಿ ಆಳದಲ್ಲಿ , 45 ಡಿಗ್ರಿ ಕೊರೆಯುವ ಚಳಿಯಲ್ಲಿ ನಮ್ಮ ರಕ್ಷಣೆಗಾಗಿ ಪ್ರಾಣ ತೆತ್ತ ಯೋಧನೇಆರು ದಿನ ಕಾಯ್ದಿದ್ದರು. ಹೀಗಿರುವಾಗ ನಮಗೆ ನೋಟು ಬದಲಿಸಲು ಕೆಲವು ಗಂಟೆ ಕಾಯಲು ಕಷ್ಟವೇ ಎಂದು ಅವರು ಪ್ರಶ್ನಿಸಿದ್ದಾರೆ.
ಟ್ವಿಟರ್ ನಲ್ಲಿ ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗುವ ಸೆಹ್ವಾಗ್ ಈ ಟ್ವೀಟ್ ಮಾಡಿ ಜನರಿಗೆ ತಾಳ್ಮೆಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ.