ಕೋಲ್ಕತಾ: ಸುರೇಶ್ ರೈನಾ ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಶುಕ್ರವಾರ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಗುಜರಾತ್ ಲಯನ್ಸ್ ತಂಡ ಕೋಲ್ಕತಾ ವಿರುದ್ಧ 4 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.
ಟಾಸ್ ಗೆದ್ದ ಗುಜರಾತ್ ಲಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್ ಕಲೆ ಹಾಕಿತು. ಆರಂಭಿಕರಾದ ಗೌತಮ್ ಗಂಭೀರ್ (33 ರನ್) ಮತ್ತು ನರಿನ್ (42 ರನ್)ಉತ್ತಮ ಆರಂಭ ಒದಗಿಸಿದರು. 2ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಾಬಿನ್ ಉತ್ತಪ್ಪ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಕೋಲ್ತತಾ ತಂಡ ಬೃಹತ್ ಮೊತ್ತ ಪೇರಿಸಲು ನೆರವಾದರು. ಕೇವಲ 64 ಎಸೆತಗಳಲ್ಲಿ 72 ರನ್ ಸಿಡಿಸಿದ ಉತ್ತಪ್ಪ ಕುಮಾರ್ ಬೌಲಿಂಗ್ ನಲ್ಲಿ ನಿರ್ಗಮಿಸಿದರು. ಅಂತಿಮವಾಗಿ ಕೋಲ್ಕತಾ ತಂಡ ನಿಗದಿತ 20 ಓವರ್ ಗಳಲ್ಲಿ 187 ರನ್ ಗಳನ್ನು ಕಲೆಹಾಕಿತು.
ಗೆಲ್ಲಲು 188 ರನ್ ಗಳ ಗುರಿ ಬೆನ್ನು ಹತ್ತಿದ ಗುಜರಾತ್ ತಂಡಕ್ಕೆ ಆರಂಭಿಕರಾದ ಫಿಂಚ್, ಮೆಕ್ಕಲಮ್ ಉತ್ತಮ ಆರಂಭ ಒದಗಿಸಿದರು. ಫಿಂಚ್ 31 ರನ್ ಗಳಿಸಿದರೆ, ಮೆಕ್ಕಲಮ್ 33 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ಕ್ರೀಸ್ ಗೆ ಆಗಮಿಸಿದ ರೈನಾ ಇಡೀ ಪಂದ್ಯದ ಗತಿಯನ್ನೇ ಬದಲಿಸಿದರು. ಒಂದೆಡೆ ತಮ್ಮ ತಂಡದ ಮಧ್ಯಮ ಕ್ರಮಾಂಕದ ವಿಕೆಟ್ ಗಳ ಉರುಳುತ್ತಿದ್ದರೂ ಎದೆಗುಂದದ ರೈನಾ ಭರ್ಜರಿ ಆಟ ಪ್ರದರ್ಶಿಸಿದರು. ಕೇವಲ 46 ಎಸೆತಗಳಲ್ಲಿ 84 ರನ ಸಿಡಿಸಿದ ರೈನಾ, ತಂಡ ಪಂದ್ಯ ಗೆಲ್ಲಲು ಕೇವಲ 8 ರನ್ ಗಳ ಅವಶ್ಯಕತೆ ಇದ್ದಾಗ ಯಾದವ್ ಬೌಲಿಂಗ್ ನಲ್ಲಿ ಔಟ್ ಆದರು.
ಬಳಿಕ ಕ್ರೀಸ್ ಗೆ ಬಂದ ರವೀಂದ್ರ ಜಡೇಜಾ ಮತ್ತು ಫಾಲ್ಕನರ್ ಗೆಲುವಿನ ಔಪಚಾರಿಕತೆ ಮುಗಿಸಿದರು. ಅಂತಿಮವಾಗಿ ಗುಜರಾತ್ ತಂಡ ಕೇವಲ 18.2 ಓವರ್ ಗಳಲ್ಲಿಯೇ 188 ರನ್ ಗಳಿಸಿ ಗೆಲುವಿನ ನಗೆ ಬೀರಿತು. 83 ರನ್ ಗಳಿಸಿ ತಂಡದೆ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ರೈನಾ ಅರ್ಹವಾಗಿಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.