ಬೆಂಗಳೂರು: ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಹಿಂದೆ ಐದು ಬಾರಿ ಮುಖಾಮುಖಿಯಾಗಿದ್ದು ಇದರಲ್ಲಿ ಆಸ್ಟ್ರೇಲಿಯಾ 2 ಪಂದ್ಯ ಗೆದ್ದಿದ್ದರೆ ಭಾರತ ಒಂದು ಪಂದ್ಯ ಗೆದ್ದಿದ್ದು ಎರಡು ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ.
ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯ
1979ರ ಸೆಪ್ಟೆಂಬರ್ 19 ರಿಂದ 24ರವರೆಗೆ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯಾ ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 333 ರನ್ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ ತಂಡದ 457 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ನಂತರ ದ್ವಿತೀಯ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 77 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಪಂದ್ಯಕ್ಕೆ ಮಳೆ ನಿರಂತರವಾಗಿ ಅಡ್ಡಿಪಡಿಸಿದ್ದರಿಂದ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.
ದ್ವಿತೀಯ ಇನ್ನಿಂಗ್ಸ್ ನಲ್ಲಿ ಕ್ಯಾಸ್ಟೊವಿಜ್ ದಾಳಿಗೆ ಸೋತ ಅಜರ್ ಟೀಂ
1998ರ ಮಾರ್ಚ್ 22 ರಿಂದ 28ರವರೆಗೆ ಟೆಸ್ಟ್ ಪಂದ್ಯ ನಡೆದಿತ್ತು. ಇದರಲ್ಲಿ ಅಜರುದ್ದೀನ್ ಸಾರಥ್ಯದ ಭಾರತ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಸಚಿನ್ ಅವರ 177 ರನ್ ಗಳ ನೆರವಿನಿಂದ 424 ರನ್ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಆಸ್ಟ್ರೇಲಿಯಾ 400 ರನ್ ಗಳನ್ನು ಪೇರಿಸಿತು. 24 ರನ್ ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದ ಭಾರತ ಮಿಚೆಲ್ ಕ್ಯಾಸ್ಟೊಮಿಜ್ ಮಾರಕ ದಾಳಿಗೆ ತತ್ತರಿಸಿ 169 ರನ್ ಗಳಿಗೆ ಸರ್ವಪತನ ಕಂಡಿತು. 194 ರನ್ ಗಳ ಗುರಿ ಪಡೆದ ಆಸ್ಟ್ರೇಲಿಯಾ ಮಾರ್ಕ್ ಟೇಲರ್ ಶತಕದ ನೆರವಿನೊಂದಿಗೆ 2 ವಿಕೆಟ್ ನಷ್ಟಕ್ಕೆ 195 ರನ್ ಸಿಡಿಸಿ ಗೆಲುವಿನ ನಗೆ ಬೀರಿತು.
ಮೂರನೇ ಪಂದ್ಯ ಡ್ರಾನಲ್ಲಿ ಅಂತ್ಯ
2008ರ ಅಕ್ಟೋಬರ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ತಂಡವನ್ನು ಮುನ್ನಡೆಸಿದ್ದರು. ಟಾಸ್ ಗೆದ್ದು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ 430 ರನ್ ಬಾರಿಸಿತ್ತು. ಪ್ರತಿಯಾಗಿ ಭಾರತ 360 ರನ್ ಸಿಡಿಸಿತ್ತು. 70 ರನ್ ಮುನ್ನಡೆ ಪಡೆದಿದ್ದ ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್ ನಲ್ಲಿ 228 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. 299 ರನ್ ಗಳ ಗುರಿ ಪಡೆದಿದ್ದ ಭಾರತ 4 ವಿಕೆಟ್ ನಷ್ಟಕ್ಕೆ 177 ರನ್ ಬಾರಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಇದರಲ್ಲಿ ವಿಶ್ವದ ಸರ್ವಶ್ರೇಷ್ಠ ಲೆಗ್ ಸ್ಪಿನ್ನರ್ ಗಳಲ್ಲಿ ಒಬ್ಬರಾಗಿದ್ದ ಅನಿಲ್ ಕುಂಬ್ಳೆ ಎರಡು ಇನ್ನಿಂಗ್ಸ್ ನಲ್ಲಿ 51 ಓವರ್ ಮಾಡಿದ್ದರು ಒಂದು ವಿಕೆಟ್ ಕೀಳಲು ಸಾಧ್ಯವಾಗಿರಲಿಲ್ಲ.
2004ರಲ್ಲಿ ಗಂಗೂಲಿ ಪಡೆಯನ್ನು ಮಣಿಸಿದ್ದ ಆಸ್ಟ್ರೇಲಿಯಾ
2004ರ ಅಕ್ಟೋಬರ್ ನಲ್ಲಿ 6 ರಿಂದ 10ರವರೆಗೆ ಪಂದ್ಯ ನಡೆದಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 474 ರನ್ ಬಾರಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಕೇವಲ 246 ರನ್ ಗಳಿಗೆ ಆಲೌಟ್ ಆಗಿತ್ತು. 228 ರನ್ ಗಳ ಮುನ್ನಡೆಯೊಂದಿಗೆ ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್ ನಲ್ಲಿ 228 ರನ್ ಗಳಿಗೆ ಆಲೌಟ್ ಆಗಿತ್ತು. ಇದರೊಂದಿಗೆ ಭಾರತ ಗೆಲ್ಲಲು 457 ರನ್ ಗಳ ಬೃಹತ್ ಸವಾಲು ಪಡೆಯಿತು. ಆದರೆ 239 ರನ್ ಗಳಿಗೆ ಆಲೌಟ್ ಆಗುವ ಮೂಲಕ 217 ರನ್ ಗಳಿಂದ ಸೋಲು ಕಂಡಿತ್ತು.
2010ರ ಟೆಸ್ಟ್ ಪಂದ್ಯದಲ್ಲಿ ಸಚಿನ್ ದ್ವಿಶತಕದೊಂದಿಗೆ ತಂಡಕ್ಕೆ ಜಯ
2010ರ ಅಕ್ಟೋಬರ್ ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ ಜಯ ಸಾಧಿಸಿತ್ತು. ಸಚಿನ್ ತೆಂಡೂಲ್ಕರ್ ಅವರ ಅಮೋಘ ದ್ವಿಶತಕದ ನೆರವಿನೊಂದಿಗೆ ಭಾರತ ಗೆಲುವಿನ ನಗೆ ಬೀರಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 478 ರನ್ ಗಳನ್ನು ಪೇರಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ 495 ರನ್ ಗಳಿಸಿತ್ತು. ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್ ನಲ್ಲಿ 223 ರನ್ ಗಳಿಗೆ ಆಲೌಟ್ ಮಾಡಿತು. ಇದರೊಂದಿಗೆ ಟೀಂ ಇಂಡಿಯಾ ಗೆಲ್ಲಲು 207 ರನ್ ಗಳ ಗುರಿ ಪಡೆಯಿತು. ಚೇತೇಶ್ವರ ಪೂಜಾರ 71 ಹಾಗೂ ಸಚಿನ್ ಅಜೇಯ 53 ರನ್ ಗಳ ನೆರವಿನೊಂದಿಗೆ ಭಾರತ 207 ರನ್ ಸಿಡಿಸಿ ಗೆಲುವು ಸಾಧಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics