ಟೀಂ ಇಂಡಿಯಾ ನಾಯಕ ಕೊಹ್ಲಿ ಕೈಗೊಳ್ಳುವ ನಿರ್ಧಾರಗಳು ಪರಿಣಾಮಕಾರಿ: ಡೇವ್ ವಾಟ್ಮೋರೆ
ಟೀಂ ಇಂಡಿಯಾದ ನೂತನ ನಾಯಕ ವಿರಾಟ್ ಕೊಹ್ಲಿ ಅವರು ತೆಗೆದುಕೊಳ್ಳುವ ನಿರ್ಧಾರಗಳು ಸೂಕ್ತವಾಗಿರುತ್ತದೆ ಎಂದು ಮಾಜಿ ಕ್ರಿಕೆಟಿಗ ಡೇವ್ ವಾಟ್ಮೋರೆ ಹೇಳಿದ್ದಾರೆ...
ಚೆನ್ನೈ: ಟೀಂ ಇಂಡಿಯಾದ ನೂತನ ನಾಯಕ ವಿರಾಟ್ ಕೊಹ್ಲಿ ಅವರು ತೆಗೆದುಕೊಳ್ಳುವ ನಿರ್ಧಾರಗಳು ಸೂಕ್ತವಾಗಿರುತ್ತದೆ ಎಂದು ಮಾಜಿ ಕ್ರಿಕೆಟಿಗ ಡೇವ್ ವಾಟ್ಮೋರೆ ಹೇಳಿದ್ದಾರೆ.
ಸದ್ಯ ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಸರಣಿ ತುಂಬ ಕುತೂಹಲಕಾರಿಯಾಗಿದೆ. ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಕಳಪೆ ಪ್ರದರ್ಶನ ತೋರಿತ್ತು ಆದರೆ, ಏಕದಿನ ಪಂದ್ಯಕ್ಕೆ ಸಖತ್ ಕಸರತ್ತು ಮಾಡಿದಂತೆ ಕಾಣುತ್ತದೆ. ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 350 ರನ್ ಪೇರಿಸಿದ್ದೇ ಇದಕ್ಕೆ ಉತ್ತಮ ನಿದರ್ಶನ. ಹೀಗಾಗಿ ಸರಣಿ ಬಲಾಬಲದಿಂದ ಕೂಡಿರುತ್ತದೆ ಎಂದರು.
ಇದೇ ವೇಳೆ ಕೊಹ್ಲಿಯ ನಾಯಕತ್ವದ ಬಗ್ಗೆ ಮಾತನಾಡಿರುವ ವಾಟ್ಮೋರೆ ಅವರು, ಅಂಡರ್ 19 ವಿಶ್ವಕಪ್ ನಾಯಕನಾಗಿದ್ದ ವಿರಾಟ್ ಕೊಹ್ಲಿ ತಂಡವನ್ನು ಚಾಂಪಿಯನ್ ಆಗಿಸಿದ್ದರು. ಇದು ಅವರ ಉತ್ತಮ ನಾಯಕತ್ವನ್ನು ಎತ್ತಿ ತೋರಿಸುತ್ತದೆ. ಇನ್ನು ಐಪಿಎಲ್ ಮತ್ತು 2011ರ ವಿಶ್ವಕಪ್ ಬಳಿಕ ಕೊಹ್ಲಿ ಪ್ರದರ್ಶನ ದಿನದಿಂದ ದಿನಕ್ಕೆ ಉತ್ತಮವಾಗುತ್ತಿದೆ ಎಂದರು.
ಕೊಹ್ಲಿ ಓರ್ವ ಆಕ್ರಮಣಶೀಲ ಆಟಗಾರ, ಅದೇ ರೀತಿ ಅವರು ತೆಗೆದುಕೊಳ್ಳುವ ನಿರ್ಧಾರಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಆಕ್ರಮಣಶೀಲ ಆಟ ಅವರಿಗೆ ಭೂಷಣ. ಆದರೆ ಒಬ್ಬ ನಾಯಕನಾಗಿ ಅವರು ತಮ್ಮ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.