ಟೀ ಇಂಡಿಯಾ ಆಟಗಾರ್ತಿಯರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ಲಂಡನ್ ನಡೆದ ಪ್ರತಿಷ್ಠಿತ ಐಸಿಸಿ ಮಹಿಳಾ ವಿಶ್ವಕಪ್ ನಲ್ಲಿ ಮಿಥಾಲಿ ರಾಜ್ ನೇತೃತ್ವದ ಟೀಂ ಇಂಡಿಯಾ ಭರ್ಜರೆ ಪ್ರದರ್ಶನ ನೀಡಿ ಎಲ್ಲರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿರುವ ನಡುವಲ್ಲೇ ಭಾರತೀಯ ಕ್ರಿಕೆಟ್ ಆಟಗಾರ್ತಿಯರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಸಂವಾದ ನಡೆಸಿದ್ದಾರೆ.
ಫೈನಲ್ ಪಂದ್ಯಾದಲ್ಲಿ ಎದುರಾಳಿ ಇಂಗ್ಲೆಂಡ್ ತಂಡದ ವಿರುದ್ಧ 9 ರನ್ ಗಳ ಸೋಲು ಕಂಡು ರನ್ನರ್ ಆಪ್ ಆಗಿರುವ ಟೀಂ ಇಂಡಿಯಾ ಈಗಾಗಲೇ ತವರಿಗೆ ಆಗಮಿಸಿದ್ದು, ಭಾರತದ ವನಿತೆಯರ ತಂಡಕ್ಕೆ ಭರ್ಜರಿ ಸ್ವಾಗತ ದೊರೆಯಿತು. ಈಗಾಗಲೇ ಕೇಂದ್ರ ಕ್ರೀಡಾ ಇಲಾಖೆ, ರೈಲ್ವೇ ಇಲಾಖೆ ಸನ್ಮಾನ ಮಾಡಿದೆ. ಇದರ ನಡುವೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ತಂಡ ಭೇಟಿ ಮಾಡಿ ಮಾತುಕತೆ ನಡೆಸಿದೆ.
ಟೀ ಇಂಡಿಯಾ ಆಟಗಾರ್ತಿಯರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೆಲ ಸಮಯದ ಕಾಲ ಸಂವಾದ ನಡೆಸಿದ್ದು, ಆಟಗಾರ್ತಿಯರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀವು ಸೋತಿಲ್ಲ. 125 ಕೋಟಿ ಭಾರತೀಯರ ಮೆಚ್ಚುಗೆಯನ್ನು ಗಳಿಸಿದ್ದೀರಾ. ಅದೇ ನಿಮ್ಮ ದೊಡ್ಡ ಗೆಲುವು. ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಭಾರತದ ಹೆಣ್ಣು ಮಕ್ಕಳು ದೇಶ ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಗತಿ ಹಾಗೂ ಅವರ ಸಾಧನೆಗಳು ಸಮಾಜಕ್ಕೆ ಲಾಭದಾಯಕವಾಗಿದೆ ಎಂದಿದ್ದಾರೆ. ಇದೇ ವೇಳೆ ಮಿಥಾಲಿ ರಾಜ್ ತಂಡ ಪ್ರಧಾನಿ ಮೋದಿಯವರಿಗೆ ತಮ್ಮ ಸಹಿ ಹಾಕಿರುವ ಬ್ಯಾಟ್ ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಮಹಿಳಾ ಆಟಗಾರ್ತಿಯರ ಭೇಟಿಯ ಫೋಟೋವನ್ನು ಪ್ರಧಾನಿ ಮೋದಿಯವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಪ್ರತ್ಯೇಕ ಸರಣಿ ಟ್ವೀಟ್ ಗಳ ಮೂಲಕ ಪ್ರತೀಯೊಬ್ಬ ಆಟಗಾರ್ತಿಯರನ್ನು ವೈಯಕ್ತಿವಾಗಿ ಶ್ಲಾಘಿಸಿದ್ದಾರೆ.
ಪ್ರಧಾನಿ ಮೋದಿಯವರ ಈ ಟ್ವೀಟ್ ಗೆ ಆಟಗಾರರು ಕೊಂಡಾಡಿದ್ದು, ಮಹಿಳಾ ಕ್ರಿಕೆಟ್ ತಂಡದ ಕುರಿತಂತೆ ಪ್ರಧಾನಮಂತ್ರಿಗಳು ಟ್ವೀಟ್ ಮಾಡುತ್ತಿರುವುದನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ. ಈ ಸಂದರ್ಭ ನಮಗೆ ಬಹಳ ಹೆಮ್ಮೆ ಎನಿಸುತ್ತಿದೆ. ನಮ್ಮ ಏಳಿಗೆ ಹಾಗೂ ಪ್ರಗತಿಯನ್ನು ಪ್ರಧಾನಮಂತ್ರಿಗಳು ಗಮನಿಸುತ್ತಿರುವುದನ್ನು ನೋಡಿ ಬಹಳ ಸಂತೋಷ ಹಾಗೂ ಸ್ಫೂರ್ತಿ ಪಡೆದುಕೊಳ್ಳುತ್ತಿದ್ದೇವೆಂದು ಹೇಳಿದ್ದಾರೆ.