ಲಂಡನ್: ಚಾಂಪಿಯನ್ಸ್ ಟ್ರೋಫಿ 2017 ಸರಣಿಯ ಜೂ.11 ರ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದ್ದು, ಭಾರತದ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಭಾರತ ತಂಡ ಹಾಗೂ ದಕ್ಷಿಣ ಆಫ್ರಿಕಾಗೂ ಈ ಪಂದ್ಯ ನಿರ್ಣಾಯಕವಾಗಿದ್ದು ಫೈನಲ್ಸ್ ಪ್ರವೇಶಿಸಬೇಕೆಂದರೆ ಈ ಪಂದ್ಯ ಗೆಲ್ಲುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ತಂಡದ ಮೇಲೆ ಅಪಾರ ನಿರೀಕ್ಷೆಗಳಿದ್ದು, ನಾಯಕ ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ಒತ್ತಡವಿದೆ.
ಇನ್ನು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ, ಎಬಿ ಡಿವಿಲಿಯರ್ಸ್ ಗೆ ತಂಡವನ್ನು ಮುನ್ನಡೆಸಿ ಗೆಲುವು ಸಾಧಿಸಲು ಇದೊಂದು ಉತ್ತಮ ಅವಕಾಶ ಎಂದು ವಿಶ್ಲೇಷಿಸಲಾಗುತ್ತಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಎಬಿಡಿ ವಿಲಿಯರ್ಸ್ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಪಂದ್ಯಕ್ಕೆ ಅಲಭ್ಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.
ಗೆಲ್ಲಲೇಬೇಕಾದ ಒತ್ತಡದಲ್ಲಿ ಉಭಯ ತಂಡಗಳೂ ಇದ್ದು, ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೂ ರನ್ ರೇಟ್ ನಲ್ಲಿ ಮುಂದಿರುವ ಕಾರಣ ಭಾರತ ಸೆಮಿಫೈನಲ್ಸ್ ಪ್ರವೇಶಿಸುವುದು ಸಾಧ್ಯವಿದ್ದು ಇಂದಿನ ಪಂದ್ಯ ತೀವ್ರ ಕುತೂಹಲ ಮೂಡಿಸಿದೆ.