ಕ್ರಿಕೆಟ್

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಇಂಗ್ಲೆಂಡ್ ಮಣಿಸಿದ ಪಾಕಿಸ್ತಾನ ಫೈನಲ್ ಗೆ!

Srinivasamurthy VN
ಲಂಡನ್: ತೀವ್ರ ಕುತೂಹಲ ಕೆರೆಳಿಸಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಪಾಕಿಸ್ತಾನ ಫೈನಲ್ ಗೇರಿದೆ.
ಲಂಡನ್ ನ ಕಾರ್ಡಿಫ್ ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 212ರನ್ ಗಳ ಸಾಧಾರಣ ಗುರಿಯನ್ನು ಪಾಕಿಸ್ತಾನ ತಂಡ ಕೇವಲ 37.1 ಓವರ್ ಗಳಲ್ಲಿ ಗುರಿ ಮುಟ್ಟಿ ಅರ್ಹವಾಗಿಯೇ ಫೈನಲ್ ಗೇರಿದೆ. ಇಂಗ್ಲೆಂಡ್ ನೀಡಿದ 212 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನ ತಂಡಕ್ಕೆ  ಆರಂಭಿಕ ಆಟಗಾರರಾದ ಅಜರ್ ಅಲಿ (76 ರನ್) ಹಾಗೂ ಫಖರ್ ಝಮಾನ್ (57 ರನ್) ಉತ್ತಮ ಆರಂಭ ಒದಗಿಸಿದರು. ನಿಧಾನಗತಿಯಲ್ಲೇ ಬ್ಯಾಟಿಂಗ್ ಆರಂಭಿಸಿದರೂ ತಂಡಕ್ಕೆ ಯಾವುದೇ ರೀತಿಯ ಅಪಾಯ ಎದುರಾಗದಂತೆ ನೋಡಿಕೊಂಡರು. ಅಂತೆಯೇ ದುರ್ಬಲ ಎಸೆತಗಳನ್ನು  ದಂಡಿಸುತ್ತಾ ಭರ್ಜರಿ ಶತಕದ ಜೊತೆಯಾಟ ನೀಡಿದರು. 

ತಂಡದ ಮೊತ್ತ 118 ರನ್ ಗಳಾಗಿದ್ದಾಗ ಫಕರ್ ಝಮಾನ್ ರಷೀದ್ ಬೌಲಿಂಗ್ ನಲ್ಲಿ ಕ್ಯಾಚಿತ್ತು ಹೊರ ನಡೆದರು. ಆದರೆ ಈ ಹಂತದಲ್ಲಿ ಬಾಬರ್ ಅಜಮ್ ಜೊತೆಗೂಡಿ ತಮ್ಮ ನೈಜ ಆಟ ಮುಂದುವರೆಸಿದ ಅಜರ್ ಅಲಿ 76 ರನ್ ಗಳಿಸಿ ಔಟ್ ಆದರು. ಬಳಿಕ ಬಂದ ಮಹಮದ್ ಹಫೀಜ್ (31  ರನ್) ಗೆಲುವಿನ ಔಪಚಾರಿಕತೆಯನ್ನು ಪೂರ್ಣಗೊಳಿಸಿದರು. ಅಂತಿಮವಾಗಿ ಪಾಕಿಸ್ತಾನ ತಂಡ 37.1 ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು. ಅಂತೆಯೇ ಇಂಗ್ಲೆಂಡ್ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. ಅಂತೆಯೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಗೇರಿತು.

ಇನ್ನು ಇಂಗ್ಲೆಂಡ್ ನ ಪ್ರಮುಖ 3 ವಿಕೆಟ್ ಪಡೆದು ಪಾಕಿಸ್ತಾನ ಮೇಲುಗೈ ಸಾಧಿಸುವಂತೆ ಮಾಡಿದ ಬೌಲರ್ ಹಸನ್ ಅಲಿ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
SCROLL FOR NEXT