ನವದೆಹಲಿ: ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ವೀಕ್ಷಣೆಗೆ ಕೇಂದ್ರ ಕ್ರೀಡಾ ಸಚಿವಾಲಯ ಮೇಜರ್ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ದೊಡ್ಡ ಟಿವಿಪರದೆಗಳನ್ನು ಅಳವಡಿಸಿದೆ.
ತೀವ್ರ ಕುತೂಹಲ ಕೆರಳಿಸಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ 2ನೇ ಸೆಮಿ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದ ನೇರ ಪ್ರಸಾರವನ್ನು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸಾರ್ವಜನಿಕವಾಗಿ ಪ್ರದರ್ಶನ ಮಾಡಲು ಕೇಂದ್ರ ಕ್ರೀಡಾ ಸಚಿವಾಲಯ ಸಿದ್ಧತೆ ನಡೆಸಿದೆ. ಮೂಲಗಳ ಪ್ರಕಾರ ದೆಹಲಿಯ ಮೇಜರ್ ಧ್ಯಾನ್ ಚಂದ್ ಕ್ರೀಡಾಂಗಣದ ಆವರಣದಲ್ಲಿ ದೊಡ್ಡ ಟಿವಿ ಪರದೆ ಅಳವಡಿಸಲಾಗಿದ್ದು, ಅಲ್ಲಿ ಬಾಂಗ್ಲಾದೇಶ-ಭಾರತ ನಡುವಿನ ಸೆಮಿಫೈನಲ್ ಕದನ ಹಾಗೂ ಭಾನುವಾರ ನಡೆಯಲಿರುವ ಫೈನಲ್ ಕದನವನ್ನು ನೇರ ಪ್ರಸಾರ ಮಾಡಲು ನಿರ್ಧರಿಸಲಾಗಿದೆ.
ಈ ಸಾರ್ವಜನಿಕ ನೇರ ಪ್ರದರ್ಶನ ಉಚಿತವಾಗಿರಲಿದ್ದು, ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರಲ್ಲಿ ಕ್ರೀಡೆ ಕುರಿತು ಆಸಕ್ತಿ ಮೂಡಿಸುವುದು ಹಾಗೂ ಕ್ರೀಡಾ ಸಂಸ್ಕೃತಿ ಬೆಳೆಸುವುದು ಇದರ ಉದ್ದೇಶವಾಗಿದೆ' ಎಂದು ಕೇಂದ್ರ ಸಚಿವ ಗೋಯಲ್ ಹೇಳಿದರು.
ಫೈನಲ್ ಗೆ ಭಾರತ-ಪಾಕಿಸ್ತಾನ?
ಇನ್ನು ಭಾರತೀಯ ಕ್ರೀಡಾ ಸಚಿವಾಲಯ ಈ ನಡೆ ತೀವ್ರ ಕುತೂಹಲ ಕೆರಳಿಸಿದ್ದು, ಫೈನಲ್ ನಲ್ಲಿ ಭಾರತ-ಪಾಕಿಸ್ತಾನ ತಂಡಗಳೇ ಸೆಣಸಲಿವೆ. ಇದೇ ಕಾರಣಕ್ಕೆ ಈ ಹೈವೋಲ್ಟೇಜ್ ಪಂದ್ಯಕ್ಕೆ ಬೃಹತ್ ಎಲ್ ಇಡಿ ಟಿವಿ ಪರದೆಗಳನ್ನು ಅಳವಡಿಸಲಾಗಿದೆ ಎಂಬ ಅಭಿಪ್ರಾಯ ಕೂಡ ಕೇಳಿಬರುತ್ತಿವೆ.