ಲಂಡನ್: ತೀವ್ರ ಕುತೂಹಲ ಕೆರಳಿಸಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿ ಇದೀಗ ನಿರ್ಣಾಯಕ ಹಂತ ತಲುಪಿದ್ದು, ಗುರುವಾರ ಬಾಂಗ್ಲಾದೇಶ ಮತ್ತು ಭಾರತ ತಂಡಗಳು ಫೈನಲ್ ಗೇರಲು ಸೆಣಸಾಡಲಿವೆ. ಈ ಹಂತದಲ್ಲಿ ಮಳೆ ಬಂದರೆ ಯಾವ ತಂಡ ಫೈನಲ್ ಗೇರಬಹುದು?
ಹೌದು..ಇಂತಹುದೊಂದು ಪ್ರಶ್ನೆ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳನ್ನು ಕಾಡುತ್ತಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿ ಆರಂಭವಾದಾಗಿನಿಂದಲೂ ಸರಣಿ ಮೇಲೆ ಮಳೆಯ ಕರಿ ನೆರಳು ಇದ್ದೇ ಇದೆ. ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳ ಸ್ಥಾನದಲ್ಲಿದ್ದ ಘಾಟಾನುಘಟಿ ತಂಡಗಳು ಅಂದರೆ, ಅಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಇದೇ ಮಳೆ ಕಾರಣದಿಂದ ಟೂರ್ನಿಯಿಂದ ಹೊರಬಿದ್ದಿದ್ದವು. ಅದರಲ್ಲೂ ಪ್ರಮುಖವಾಗಿ ಇದೇ ಮೊದಲ ಬಾರಿಗೆ ಎಂಬಂತೆ ಐಸಿಸಿ ಆಯೋಜಿಸಿರುವ ಪ್ರಮುಖ ಟೂರ್ನಿಯೊಂದರಲ್ಲಿ ಆಸ್ಟ್ರೇಲಿಯಾ ತಂಡ ಒಂದೇ ಒಂದು ಗೆಲುವು ಕಾಣದೇ ಹೊರಬಿದ್ದಿದೆ. ಅದೂ ಕೂಡ ಮಳೆ ಕಾರಣದಿಂದಾಗಿ ಎಂಬುದು ಗಮನಾರ್ಹ.
ತಂಡ ಎಷ್ಟೇ ಬಲಿಷ್ಠವಾಗಿದ್ದರೂ, ಅದೃಷ್ಟ ಕೂಡ ಮುಖ್ಯ ಎಂಬುದುಕ್ಕೆ ಆಸ್ಟ್ರೇಲಿಯಾ ತಂಡ ಟೂರ್ನಿಯಿಂದ ಹೊರಬಿದ್ದ ರೀತಿ ಸೂಕ್ತ ನಿದರ್ಶನ ಎನ್ನಬಹುದು. ಇನ್ನು ಇಂದು ಬಾಂಗ್ಲಾದೇಶ ಮತ್ತು ಭಾರತ ತಂಡಗಳು ಫೈನಲ್ ಪ್ರವೇಶಕ್ಕಾಗಿ ಸೆಮಿ ಫೈನಲ್ ನಲ್ಲಿ ಕಾದಾಡಲು ಸಿದ್ಧತೆ ನಡೆಸಿಕೊಂಡಿದ್ದು, ಸೆಮಿ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಮುಂದೇನು ಎಂಬ ಪ್ರಶ್ನೆ ಕೂಡ ಕಾಡುತ್ತಿದೆ. ಇಂಗ್ಲೆಂಡ್ ಹವಮಾನ ಇಲಾಖೆ ಮಳೆ ಬರುವ ಸಾಧ್ಯತೆಯನ್ನು ಅಲ್ಲಗಳೆದಿಲ್ಲವಾದರೂ, ಸಾಧ್ಯತೆ ಕಡಿಮೆ ಎಂದು ಹೇಳಿದೆ.
ಹೀಗಿದ್ದೂ ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಮುಂದೇನು? ಟೂರ್ನಿ ಆಯೋಜಕರು ಸರಣಿಯ ಪ್ರಮುಖ ಘಟ ಸೆಮಿ ಫೈನಲ್ ಪಂದ್ಯಗಳಿಗೆ ಮಳೆ ಅಡ್ಡಿಯಾದರೆ ಬದಲಿ ದಿನಾಂಕವನ್ನು ನಿಗದಿ ಪಡಿಸಿಲ್ಲ. ಹೀಗಾಗಿ ಮಳೆ ಬಂದರೂ ಸರಿ ಬಾರದಿದ್ದರೂ ಇಂದೇ ಸೆಮಿಫೈನಲ್ ಪಂದ್ಯ ನಡೆಯಬೇಕು. ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಸರಣಿಯ ಇತರೆ ಪಂದ್ಯಗಳಲ್ಲಿ ಕೈಗೊಂಡ ಕ್ರಮಗಳಂತೆ ಡಕ್ವರ್ಥ್ ಲೂಯಿಸ್ ನಿಯಮದನ್ವಯ ಪಂದ್ಯ ನಡೆಯುತ್ತದೆ. ಒಂದು ವೇಳೆ ಟಾಸ್ ಅಥವಾ ಆಟ ಶುರುವಾಗುವುದಕ್ಕೂ ಮೊದಲೇ ಮಳೆ ಅಡ್ಡಿ ಪಡಿಸಿದರೆ ಆಗ ಪಂದ್ಯದ ಓವರ್ ಗಳ ಕಡಿತವಾಗಬಹುದು. ಒಂದು ವೇಳೆ 2 ಗಂಟೆಗೂ ಅಧಿಕ ಸಮಯ ಮಳೆ ಸುರಿದರೆ ಆಗ ಪಂದ್ಯವನ್ನು ಟಿ20 ಮಾದರೆ ಅಂದರೆ ತಲಾ 20 ಓವರ್ ಗಳಿಗೆ ಕಡಿತ ಮಾಡಿ ಪಂದ್ಯವನ್ನಾಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ
ಫೈನಲ್ ಪಂದ್ಯಕ್ಕೆ ಬದಲಿ ದಿನಾಂಕ ನಿಗದಿಯಾಗಿದೆ
ಇನ್ನು ಫೈನಲ್ ಪಂದ್ಯಕ್ಕೆ ಆಯೋಜಕರು ಮುಂಜಾಗ್ರತೆ ವಹಿಸಿದ್ದು, ಫೈನಲ್ ಪಂದ್ಯದ ವೇಳೆ ಮಳೆ ಅಡ್ಡಿ ಪಡಿಸಿದರೆ ಅದನ್ನು ಬೇರೊಂದು ದಿನಾಂಕದೊಂದು ಆಡಿಸಲು ಆಯೋಜಕರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.