ಅನಿಲ್ ಕುಂಬ್ಳೆ, ವಿರಾಟ್ ಕೊಹ್ಲಿ
ನವದೆಹಲಿ: ತೀವ್ರ ಬೇಸರದಿಂದ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ನಿನ್ನೆ ರಾಜಿನಾಮೆ ನೀಡಿದ ಅನಿಲ್ ಕುಂಬ್ಳೆ ಹಾಗೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಡುವಿನ ಭಿನ್ನಾಭಿಪ್ರಾಯ ಶಮನಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸಾಕಷ್ಟು ಯತ್ನಿಸಿದರೂ ಯಾವುದೇ ಪ್ರಯೋಜನೆ ಆಗಿಲ್ಲ ಎಂದು ಬುಧವಾರ ಬಿಸಿಸಿಐ ಹಿರಿಯ ಅಧಿಕಾರಿ ರಾಜೀವ್ ಶುಕ್ಲಾ ಅವರು ಹೇಳಿದ್ದಾರೆ.
ನಾಯಕ ಮತ್ತು ಕೋಚ್ ನಡುವಿನ ಭಿನ್ನಾಭಿಪ್ರಾಯ ಶಮನಕ್ಕೆ ನಾವು ಎಲ್ಲಾ ರೀತಿಯಿಂದಲೂ ಯತ್ನಿಸಿದ್ದೇವೆ. ಇಬ್ಬರೊಂದಿಗೆ ಚರ್ಚಿಸಿದ್ದೇವೆ. ಅಲ್ಲದೆ ಈ ಸಂಬಂಧ ಬಿಸಿಸಿಐ ಸಿಒಎ ಅಧ್ಯಕ್ಷ ವಿನೋದ್ ರೈ ಅವರನ್ನು ಸಂಪರ್ಕಿಸಿದ್ದೇವೆ ಎಂದು ಶುಕ್ಲಾ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಅನಿಲ್ ಕುಂಬ್ಳೆ ಮುಂದಿನ ಭವಿಷ್ಯಕ್ಕೆ ಶುಭ ಕೋರಿರುವ ಬಿಸಿಸಿಐ ಶೀಘ್ರದಲ್ಲೇ ನೂತನ ಕೋಚ್ ನೇಮಕ ಮಾಡುವುದಾಗಿ ತಿಳಿಸಿದೆ.
ಶ್ರೀಲಂಕಾ ಪ್ರವಾಸಕ್ಕೂ ಮುನ್ನವೇ ಟೀಂ ಇಂಡಿಯಾಗೆ ಮುಖ್ಯ ಕೋಚ್ ನೇಮಕ ಮಾಡಲಾಗುವುದು ಮತ್ತು ನೂತನ ಕೋಚ್ ಇಂಗ್ಲೆಂಡ್ ನಲ್ಲಿ ನಡೆಯುವ 2019ರ ವಿಶ್ವಕಪ್ ಮುಗಿಯುವವರೆಗೆ ಮುಂದುವರೆಯಲಿದ್ದಾರೆ ಎಂದು ಹಂಗಾಮಿ ಅಧ್ಯಕ್ಷ ಸಿಕೆ ಖನ್ನ ಅವರು ಹೇಳಿದ್ದಾರೆ.
ಅನಿಲ್ ಕುಂಬ್ಳೆ ಅವರು ನಿನ್ನೆ ಕೋಚ್ ಹುದ್ದೆಗೆ ರಾಜಿನಾಮೆ ನೀಡಿದ ನಂತರ ತಮ್ಮ ಹಾಗೂ ನಾಯಕ ಕೊಹ್ಲಿ ನಡುವೆ ಸಮನ್ವಯತೆಯಿರಲಿಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ಚಾಂಪಿಯನ್ಸ್ ಟ್ರೋಫಿ ಫೈನಲ್ ಗೆ ಮುನ್ನವಷ್ಟೇ ಕೊಹ್ಲಿಗೆ ನನ್ನ ಜತೆ ಕೆಲಸ ಮಾಡಲು ಇಷ್ಟವಿಲ್ಲವೆಂದು ತಿಳಿಯಿತು. ಸ್ವತಃ ನಾಯಕನಿಗೆ ನನ್ನ ಜತೆ ಕೆಲಸ ಮಾಡಲು ಇಷ್ಟವಿಲ್ಲವೆಂದ ಮೇಲೆ ಆ ಹುದ್ದೆಯಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲವೆನಿಸಿತು. ಹೀಗಾಗಿ ರಾಜಿನಾಮೆ ನೀಡುವ ನಿರ್ಧಾರಕ್ಕೆ ಬಂದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics