ಕ್ರಿಕೆಟ್

ಮುಂದಿನ 5 ವರ್ಷಗಳ ಅವಧಿಗೆ ವಿವೋಗೆ ಐಪಿಎಲ್ ಪ್ರಾಯೋಜಕತ್ವ!

Srinivasamurthy VN

ನವದೆಹಲಿ: ಚೀನಾ ಮೂಲದ ಮೊಬೈಲ್ ತಯಾರಿಕಾ ಕಂಪನಿ "ವಿವೋ", ಮುಂದಿನ 5 ವರ್ಷಗಳ ಅವಧಿಗೆ ಪ್ರತಿಷ್ಠಿತ ಐಪಿಎಲ್ ಟಿ20 ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ಉಳಿಸಿಕೊಂಡಿದೆ.

ಹಾಲಿ ಶೀರ್ಷಿಕೆ ಪ್ರಾಯೋಜಕ ಸಂಸ್ಥೆ ಕೂಡ ಆಗಿರುವ ವಿವೋ, ಇತರೆ ಸಂಸ್ಥೆಗಳಿಗಿಂತ ಹೆಚ್ಚಿನ ಮೊತ್ತ ಪಾವತಿಸಿದ ಹಿನ್ನಲೆಯಲ್ಲಿ ಇದೇ ಸಂಸ್ಥೆಗೆ ಶೀರ್ಷಿಕೆ ಪ್ರಾಯೋಜಕತ್ವ ನೀಡಲು ಬಿಸಿಸಿಐ ನಿರ್ಧರಿಸಿದೆ. ಮೂಲಗಳ ಪ್ರಕಾರ  ಹಿಂದಿನ ಅವಧಿಗಿಂತಲೂ ಸುಮಾರು 5 ಪಟ್ಟು ಹೆಚ್ಚಿನ ಮೊತ್ತ ಪಾವತಿಸಿರುವ ವಿವೋ, ಒಟ್ಟು 2,199 ಕೋಟಿ ರುಪಾಯಿಗೆ ಶೀರ್ಷಿಕೆ ಪ್ರಾಯೋಜಕತ್ವ ಹಕ್ಕು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. ಇದರಿಂದ ಪ್ರತಿ ವರ್ಷ ವಿವೋ  ಸಂಸ್ಥೆ ಬಿಸಿಸಿಐಗೆ 440 ಕೋಟಿ ರು. ಪಾವತಿಸಬೇಕಿದೆ.

2017ರ ಆಗಸ್ಟ್ 1ರಿಂದ 2022ರ ಜುಲೈ 31ರವರೆಗೆ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಕಳೆದ ತಿಂಗಳು ಬಿಸಿಸಿಐ ಬಿಡ್ ಆಹ್ವಾನಿಸಿತ್ತು. 2016 ಹಾಗೂ 2017ನೇ ಸಾಲಿನಲ್ಲೂ ವಿವೋ ಸಂಸ್ಥೆಯೇ ಐಪಿಎಲ್​ನ ಶೀರ್ಷಿಕೆ  ಪ್ರಾಯೋಜಕತ್ವ ಹೊಂದಿತ್ತು. ಪ್ರತಿ ವರ್ಷಕ್ಕೆ ತಲಾ 100 ಕೋಟಿ ರುಪಾಯಿಯಂತೆ ವಿವೋ ಸಂಸ್ಥೆ ಪ್ರಾಯೋಜಕತ್ವ ಪಡೆದುಕೊಂಡಿತ್ತು. ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ವಿವೋಗೆ ಪ್ರಬಲ ಪೈಪೋಟಿ ನೀಡಿದ ಮತ್ತೊಂದು ಚೀನಾ  ಮೊಬೈಲ್ ಸಂಸ್ಥೆ "ಒಪ್ಪೊ" 1,430 ಕೋಟಿ ರು. ಬಿಡ್ ಸಲ್ಲಿಸಿತ್ತು ಎನ್ನಲಾಗಿದೆ.

"ವಿವೋ" ಸಂಸ್ಥೆ ಮತ್ತೊಮ್ಮೆ ಮಂಡಳಿಯೊಂದಿಗೆ ಕೈಜೋಡಿಸಿದಕ್ಕೆ ಧನ್ಯವಾದಗಳು. ಹಿಂದಿನ 2 ವರ್ಷ ಕೂಡ ಉತ್ತಮ ರೀತಿಯಲ್ಲಿ ವಿವೋ ಸಂಸ್ಥೆ ಕಾರ್ಯನಿರ್ವಹಿಸಿತ್ತು. ಇದೀಗ ದೊಡ್ಡ ಮಟ್ಟದಲ್ಲಿ ಮುಂದುವರಿಯುವ ವಿಶ್ವಾಸ  ವಿದೆ" ಎಂದು ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ತಿಳಿಸಿದ್ದಾರೆ. ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ವಿವೋ ಹಾಗೂ ಮಂಡಳಿ ಯೊಂದಿಗಿನ ಫಲಪ್ರದವಾದ ಸಂಬಂಧ ಹೀಗೆ ಮುಂದುವರಿಯಲಿ"  ಎಂದು ಬಿಸಿಸಿಐನ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ತಿಳಿಸಿದ್ದಾರೆ.

2014-15ನೇ ಸಾಲಿನಲ್ಲಿ ಪೆಪ್ಸಿ ಕಂಪನಿಯಿಂದ ವಿವೋ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿತ್ತು. ಇದಕ್ಕೂ ಮೊದಲು 5 ವರ್ಷಗಳ ಅವಧಿಗೆ ಪೆಪ್ಸಿ ಕಂಪನಿ 396 ಕೋಟಿ ರುಪಾಯಿಗೆ ಒಪ್ಪಂದ ಮಾಡಿಕೊಂಡಿದ್ದರೂ  ಮಧ್ಯದಲ್ಲಿಯೇ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು. ಐಪಿಎಲ್ ಆರಂಭಗೊಂಡ 2008ರಿಂದ 2012ರವರೆಗೆ 5 ವರ್ಷ ಕಾಲ ರಿಯಲ್ ಎಸ್ಟೇಟ್ ಕಂಪನಿ ಡಿಎಲ್​ಎಫ್ ಶೀರ್ಷಿಕೆ ಪ್ರಾಯೋಜಕತ್ವ ಪಡೆದುಕೊಂಡಿತ್ತು.

SCROLL FOR NEXT