ನವದೆಹಲಿ: ಇತ್ತೀಚೆಗಷ್ಟೇ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಕೋಚ್ ಅನಿಲ್ ಕುಂಬ್ಳೆ ವಿರುದ್ದ ಗಂಭೀರ ಆರೋಪ ಮಾಡಿದ್ದ ಆಸ್ಟ್ರೇಲಿಯಾ ಮಾಧ್ಯಮವೊಂದು ಮತ್ತೆ ಕೊಹ್ಲಿಯನ್ನು ಛೇಡಿಸಿದೆ.
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನು ಪ್ರಾಣಿಗಳಿಗೆ ಹೋಲಿಸಿರುವ ಫೋಟೋವನ್ನು ಫಾಕ್ಸ್ ಸ್ಪೋರ್ಟ್ಸ್ ಆಸ್ಟ್ರೇಲಿಯಾ ಎಂಬ ಪತ್ರಿಕೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದೆ.
ರಾಟ್ ಕೊಹ್ಲಿ ಪಂದ್ಯದ ವೇಳೆ ಆಸೀಸ್ ಸಿಬ್ಬಂದಿಯತ್ತ ಎನರ್ಜಿ ಡ್ರಿಂಕ್ ನ ಬಾಟಲ್ ಅನ್ನು ಎಸೆದಿದ್ದರೂ, ಆಸ್ಟ್ರೇಲಿಯಾದ ಬದ್ಧತೆ ಪ್ರಶ್ನಿಸುವ ಭಾರತದ ನಿರ್ಲಜ್ಜ ಅಭಿಯಾನಕ್ಕೆ ಕೊಹ್ಲಿ ಸೂತ್ರಧಾರರಾಗಿದ್ದಾರೆ. ಇನ್ನು ಮಂಕಿಗೇಟ್ ಪ್ರಕರಣಕ್ಕೆ ಪ್ರಚೋದನೆ ನೀಡಿದ ಪ್ರಮುಖ ವ್ಯಕ್ತಿ ಕುಂಬ್ಳೆ, ಮತ್ತೊಮ್ಮೆ ತೆರೆಯ ಹಿಂದೆ ನಿಂತು ಗೊಂಬೆ ಆಡಿಸುವ ಕೆಲಸವನ್ನು ಸಂಪಾದಿಸಿದಂತೆ ಕಾಣುತ್ತಿದೆ ಎಂದು ಪತ್ರಿಕೆ ವರದಿ ಮಾಡಿತ್ತು. ಇದರ ಬೆನ್ನಲ್ಲೆ ಮತ್ತೆ ಇಂಥ ಪೋಸ್ಟ್ ಹಾಕಿರುವುದು ಎರಡು ತಂಡಗಳ ಮಧ್ಯೆ ಮತ್ತಷ್ಟು ಭಿನ್ನಾಭಿಪ್ರಾಯಗಳಿಗೆ ಎಡೆ ಮಾಡಿಕೊಡುವಂತಿದೆ.
ಫಾಕ್ಸ್ ಸ್ಪೋರ್ಟ್ಸ್ ಆಸ್ಟ್ರೇಲಿಯಾ ಎಂಬ ಪತ್ರಿಕೆ ವೆಟ್ಟೆಲ್ ಆಫ್ ದಿ ವೀಕ್ ಎಂಬ ಶೀರ್ಷಿಕೆಯಡಿ ಕೊಹ್ಲಿ ಫೋಟೋ ಪ್ರಕಟಿಸಿ, ಅದರ ಜೊತೆಗೆ ಎ ಫಂಡಾ, ಎ ಪಪ್ಪಿ, ಎ ಕಿಟ್ಟನ್ ಫೋಟೋ ಹಾಕಿ ನಿಮ್ಮ ಆಯ್ಕೆ ಯಾವುದು ಎಂದು ವೋಟ್ ಮಾಡಿ ಎಂದು ಹೇಳಿ ಫೇಸ್ ಬುಕ್ ನಲ್ಲಿ ಫೋಟೋ ಪೋಸ್ಟ್ ಮಾಡಿದೆ.
ವಿರಾಟ್ ಕೊಹ್ಲಿ ವಿರುದ್ಧದ ಈ ಪೋಸ್ಟ್ ಗೆ ಜಗತ್ತಿನಾದ್ಯಂತ ಇರುವ ಅಭಿಮಾನಿಗಳು ಪತ್ರಿಕೆ ವಿರುದ್ಧ ಕಿಡಿಕಾರಿದ್ದಾರೆ. ಫಾಕ್ಸ್ ಪತ್ರಿಕೆ ವಿರುದ್ಧ ಹರಿಹಾಯ್ದಿದ್ದಾರೆ.