ಸಂಗ್ರಹ ಚಿತ್ರ 
ಕ್ರಿಕೆಟ್

ಐಪಿಎಲ್ 2017: ಅಭಿಮಾನಿಗಳಿಗೆ ನಿರಾಸೆ ತರಲಿದೆಯೇ ಸ್ಟಾರ್ ಪ್ಲೇಯರ್ ಗಳ ಅನುಪಸ್ಥಿತಿ?

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿರುವಂತೆಯೇ ವಿವಿಧ ಕಾರಣಗಳಿಂದಾಗಿ ಮಿಲಿಯನ್ ಡಾಲರ್ ಟೂರ್ನಿಯಿಂದ ಹೊರಗುಳಿಯುತ್ತಿರುವ ಸ್ಟಾರ್ ಆಟಗಾರರ ಪಟ್ಟಿ ಕೂಡ ಬೆಳೆಯುತ್ತಾ ಹೋಗುತ್ತಿದೆ.

ಬೆಂಗಳೂರು: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಗೆ ದಿನಗಣನೆ ಆರಂಭವಾಗಿರುವಂತೆಯೇ ವಿವಿಧ ಕಾರಣಗಳಿಂದಾಗಿ ಮಿಲಿಯನ್ ಡಾಲರ್ ಟೂರ್ನಿಯಿಂದ ಹೊರಗುಳಿಯುತ್ತಿರುವ ಸ್ಟಾರ್ ಆಟಗಾರರ ಪಟ್ಟಿ ಕೂಡ ಬೆಳೆಯುತ್ತಾ ಹೋಗುತ್ತಿದೆ.

ಈಗಷ್ಟೇ ಮುಕ್ತಾಯಗೊಂಡ ಬಾರ್ಡರ್-ಗಾವಾಸ್ಕರ್ ಟೆಸ್ಟ್ ಸರಣಿಯಿಂದಾಗಿ ಆರ್ ಸಿಬಿ ತಂಡದ ಪ್ರಮುಖ ತಾರಾ ಆಟಗಾರರು ಗಾಯಗೊಂಡಿದ್ದು, ನಾಯಕ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಟೂರ್ನಿಯಿಂದ ಹೊರಗುಳಿದು  ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನು ಇದೇ ಗಾಯದ ಸಮಸ್ಯೆಯಿಂದಾಗಿ ಸ್ಟಾರ್ ಸ್ಪಿನ್ನರ್ ಆರ್ ಅಶ್ವಿನ್ ಕೂಡ ಐಪಿಎಲ್ ಟೂರ್ನಿಯನ್ನು ಒಂದಷ್ಟು ಸಮಯ ಮಿಸ್ ಮಾಡಿಕೊಳ್ಳಲಿದ್ದು, ಈ ಪಟ್ಟಿಗೆ ಇದೀಗ ಮುರಳಿ ವಿಜಯ್ ಕೂಡ  ಸೇರ್ಪಡೆಯಾಗಿದ್ದಾರೆ.

ಒಟ್ಟಾರೆ ಪ್ರಸಕ್ತ ಸಾಲಿನ ಅಂದರೆ 2017ನೇ ಸಾಲಿನ ಐಪಿಎಲ್ ಟೂರ್ನಿಯಿಂದ ಹೊರಗುಳಿದಿರುವ ಸ್ಟಾರ್ ಆಟಗಾರರ ಪಟ್ಟಿ ಇಲ್ಲಿದೆ.

ವಿರಾಟ್ ಕೊಹ್ಲಿ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಯಕ ಕೂಡ ಆಗಿರುವ ವಿರಾಟ್ ಕೊಹ್ಲಿ 2017ನೇ ಸಾಲಿನ ಟೂರ್ನಿಯಿಂದ ಹಿಂದೆ  ಸರಿದಿದ್ದಾರೆ. ಕಾರಣ ಆಸ್ಟ್ರೇಲಿಯಾ ತಂಡದ ವಿರುದ್ಧ ಈಗಷ್ಟೇ ಮುಕ್ತಾಯವಾದ ಬಾರ್ಡರ್ ಗವಾಸ್ಕರ್ ಸರಣಿ ವೇಳೆ ಕೊಹ್ಲಿ ತಮ್ಮ ಭುಜಕ್ಕೆ ಗಾಯ ಮಾಡಿಕೊಂಡಿದ್ದಾರೆ. ರಾಂಚಿಯಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಕೊಹ್ಲಿ ಗಾಯದ  ಸಮಸ್ಯೆಗೆ ಒಳಗಾಗಿ ನಾಲ್ಕನೇ ಪಂದ್ಯದಿಂದ ಹೊರಗೆ ಉಳಿದಿದ್ದರು. ಹೀಗಾಗಿ ಉಪನಾಯಕ ಅಜಿಂಕ್ಯಾ ರಹಾನೆ ನಾಲ್ಕನೇ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು.

ಆರ್ ಅಶ್ವಿನ್
ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ ಸ್ಟಾರ್ ಸ್ಪಿನ್ನರ್ ಆಗಿರುವ ಆರ್ ಅಶ್ವಿನ್ ಕೂಡ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಅಶ್ವಿನ್ ಕೂಡ ಗಾಯದ ಸಮಸ್ಯೆಗೆ ಒಳಗಾಗಿದ್ದು, ಸ್ಪೋರ್ಟ್  ಹರ್ನಿಯಾ ಎಂಬ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರಿಗೆ ಕಡ್ಡಾಯ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದು, ಇದೇ ಕಾರಣಕ್ಕೆ ಆರ್ ಅಶ್ವಿನ್ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಿಂದ ಹೊರಗುಳಿಯುವ  ಸಾಧ್ಯತೆ ಇದೆ.

ಮುರಳಿ ವಿಜಯ್
ಕಿಂಗ್ಸ್ ಎಲೆವನ್ ಪಂಜಾಪಬ್ ತಂಡ ಮಾಜಿ ನಾಯಕ ಮುರಳಿ ವಿಜಯ್ ಕೂಡ ಐಪಿಎಲ್ ನಿಂದ ಹೊರಗುಳಿಯುವ ಸಾಧ್ಯತೆ ಇದ್ದು, ಭುಜದ ನೋವಿನಿಂದ ಬಳಲುತ್ತಿರುವ ವಿಜಯ್ ಅವರಿಗೆ ವಿಶ್ರಾಂತಿ ಪಡೆಯಲು ವೈದ್ಯರು  ಸೂಚಿಸಿದ್ದಾರೆ. ಹೀಗಾಗಿ ಮುರಳಿ ವಿಜಯ್ ಟೂರ್ನಿಯಿಂದ ಹೊರಗುಳಿಯುತ್ತಿದ್ದು, ಮುರಳಿ ವಿಜಯ್ ಬದಲಿಗೆ ಗ್ಲೇನ್ ಮ್ಯಾಕ್ಸ್ ವೆಲ್ ಪಂಜಾಬ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಕೆಎಲ್ ರಾಹುಲ್
ಆರ್ ಸಿಬಿ ತಂಡದ ಪ್ರಮುಖ ಬ್ಯಾಟ್ಸಮನ್ ಆಗಿರುವ ಕೆಎಲ್ ರಾಹುಲ್ ಐಪಿಎಲ್ 2017 ಟೂರ್ನಿಯಿಂದ ಹೊರಗುಳಿಯುತ್ತಿದ್ದು, ಆಸ್ಚ್ರೇಲಿಯಾ ವಿರುದ್ದ ನಡೆದ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿನ ಭುಜದ ಗಾಯದ ಸಮಸ್ಯೆ ಅವರನ್ನು  ಟೂರ್ನಿಯಲ್ಲಿ ಪಾಲ್ಗೊಳ್ಳದಂತೆ ತಡೆದಿದೆ. ರಾಹುಲ್ ಎಡ ಭುಜಕ್ಕೆ ಪೆಟ್ಟಾಗಿದ್ದು, ಲಂಡನ್ ನಲ್ಲಿ ಅವರು ಚಿಕಿತ್ಸೆ ಪಡೆಯಲಿದ್ದಾರೆ. ಇದೇ ಏಪ್ರಿಲ್ ಮೊದಲ ವಾರದಲ್ಲಿ ಲಂಡನ್ ಗೆ ಹಾರಲಿರುವ ರಾಹುಲ್ ಅಲ್ಲಿ ನುರಿತ ವೈದ್ಯರಿಂದ  ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ.

ರವೀಂದ್ರ ಜಡೇಜಾ
ಗುಜರಾತ್ ಲಯನ್ಸ್ ತಂಡದ ಪರವಾಗಿ ಆಡುತ್ತಿರುವ ರವೀಂದ್ರ ಜಡೇಜಾಗೂ ಗಾಯದ ಭೀತಿ ಕಾಡುತ್ತಿದ್ದು, ಇದೇ ಕಾರಣಕ್ಕೆ ಅವರು ಐಪಿಎಲ್ ಆರಂಭಿಕ ಕೆಲ ಪಂದ್ಯಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಕಳೆದ 9  ತಿಂಗಳನಿಂದ ನಡೆದ ಸತತ ಸರಣಿಗಳಲ್ಲಿ ರವೀಂದ್ರ ಜಡೇಜಾ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದು, ಇಡೀ ಸೀಸನ್ ನಲ್ಲಿ 4 ಸಾವಿರಕ್ಕೂ ಅಧಿಕ ಎಸೆತಗಳನ್ನು ಎಸೆದಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಆಸ್ಚ್ರೇಲಿಯಾ  ವಿರುದ್ಧದ ಬಾರ್ಡರ್ ಗವಾಸ್ಕರ್ ಸರಣಿಯಲ್ಲೂ ಜಡ್ಡು ಬರೊಬ್ಬರಿ 25 ವಿಕೆಟ್ ಪಡೆದು ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಅಲ್ಲದೆ 2 ಅರ್ಧಶತಕ ಕೂಡ ಸಿಡಿಸಿದ್ದರು. ಹೀಗಾಗಿ ರವೀಂದ್ರ ಜಡೇಜಾ ಅವರು ಬಳಲಿದ್ದು,  ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಜಡ್ಡು ಐಪಿಎಲ್ 2017ರ ಆರಂಭಿಕ ಕೆಲ ಪಂದ್ಯಗಳಿಂದ ದೂರ ಉಳಿದು ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ.

ಉಮೇಶ್ ಯಾದವ್
ಭಾರತದ ಉದಯೋನ್ಮುಖ ಕ್ರಿಕೆಟಿಗರಲ್ಲಿ ಉಮೇಶ್ ಯಾದವ್ ಪ್ರಮುಖರಾಗಿದ್ದು, ಭಾರತದ ವೇಗ ಬೌಲಿಂಗ್ ನ ಪ್ರಮುಖ ಬೌಲರ್ ಆಗಿದ್ದಾರೆ. ಟೀಂ ಇಂಡಿಯಾ ಆಡಿದ 13 ಟೆಸ್ಟ್ ಪಂದ್ಯಗಳ ಪೈಕಿ ಉಮೇಶ್ ಯಾದವ್ 12  ಪಂದ್ಯಗಳಲ್ಲಿ ಆಡಿದ್ದರು. ಆಸಿಸ್ ವಿರುದ್ಧದ ಸರಣಿಯಲ್ಲಿ 17 ವಿಕೆಟ್ ಪಡೆದಿರುವ ಉಮೇಶ್ ಯಾದವ್ ಐಪಿಎಲ್ 2017ಕ್ಕೆ ಕೊಂಚ ತಡವಾಗಿ ಆಗಮಿಸಲಿದ್ದಾರೆ. ಉಮೇಶ್ ಯಾದವ್ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸಲಹೆ  ನೀಡಿದ್ದು, ಒಂದಷ್ಟು ಪಂದ್ಯಗಳ ಬಳಿಕವಷ್ಟೇ ಉಮೇಶ್ ಯಾದವ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರ ಕಣಕ್ಕಳಿಯಲಿದ್ದಾರೆ.

ಮಿಚೆಲ್ ಸ್ಟಾರ್ಕ್

ಆರ್ ಸಿಬಿ ತಂಡದ ಸ್ಟಾರ್ ಬೌಲರ್ ಆಗಿರುವ ಆಸಿಸ್ ವೇಗಿ ಮಿಚೆಲ್ ಸ್ಟಾರ್ಕ್ ಕೂಡ ಐಪಿಎಲ್ 2017 ಟೂರ್ನಿಯಿಂದ ಹೊರಗುಳಿದಿದ್ದು, ಮುಂಬರುವ ಜೂನ್ ನಲ್ಲಿ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ತರಬೇತಿ  ನಡೆಸಲು ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಹರಾಜಾಗದೇ ಟೂರ್ನಿಯಿಂದ ಹೊರಬಿದ್ದ ಸ್ಟಾರ್ ಆಟಗಾರರು....
ಇರ್ಫಾನ್ ಪಠಾಣ್

ಭಾರತದ ಸ್ವಿಂಗ್ ಮಷೀನ್ ಎಂದೇ ಖ್ಯಾತಿ ಗಳಿಸಿದ್ದ ಬರೋಡಾ ಕಿಂಗ್ ಇರ್ಫಾನ್ ಪಠಾಣ್ ಐಪಿಎಲ್ 2017ರ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ. ಒಂದು ಕಾಲದಲ್ಲಿ ದುಬಾರಿ ಬೆಲೆಗೆ ಫ್ರಾಂಚೈಸಿ ಗಳಿಂದ ಖರೀದಿಸಲ್ಪಟ್ಟಿದ್ದ ಇರ್ಫಾನ್  ಪಠಾಣ್ ಇದೀಗ ಅದೇ ಫ್ರಾಂಚೈಸಿಗಳಿಗೆ ಬೇಡವಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಮುಕ್ತಾಯವಾದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಯಾವುದೇ ಒಬ್ಬ ಫ್ರಾಂಚೈಸಿ ಕೂಡ ಇರ್ಫಾನ್ ಪಠಾಣ್ ರನ್ನು ಖರೀದಿಸಿಲ್ಲ. ಇತ್ತೀಚೆಗ  ಮುಕ್ತಾಯಗೊಂಡ ರಣಜಿ ಟ್ರೋಫಿಯಲ್ಲಿ ಇರ್ಫಾನ್ ಪಠಾಣ್ ಅಮೋಘ ಪ್ರದರ್ಶನ ತೋರಿದ್ದರು. ಇದು ಫ್ರಾಂಚೈಸಿಗಳ ಸೆಳೆಯುವಲ್ಲಿ ವಿಫಲವಾಗಿದೆ.

ರಾಸ್ ಟೇಲರ್
ಆರ್ ಸಿಬಿ ತಂಡದ ಒಂದು ಕಾಲದ ರನ್ ಮೆಷಿನ್ ನ್ಯೂಜಿಲೆಂಡ್ ತಂಡದ ಸ್ಫೋಟಕ ಬ್ಯಾಟ್ಸಮನ್ ರಾಸ್ ಟೇಲರ್ ಕೂಡ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಿಂದ ದೂರ ಉಳಿಯಲಿದ್ದಾರೆ. ಇರ್ಫಾನ್ ಪಠಾಣ್ ರಂತೆಯೇ ರಾಸ್  ಟೇಲರ್ ಅವರನ್ನು ಕೂಡ ಖರೀದಿಸಲು ಯಾವುದೇ ಫ್ರಾಂಚೈಸಿಗಳು ಮುಂದೆ ಬಂದಿಲ್ಲ.

ಇನ್ನುಳಿದಂತೆ ಭಾರತದ ವೇಗಿ ಇಶಾಂತ್ ಶರ್ಮಾ, ತ್ರಿಶತಕ ವೀರ ಚೇತೇಶ್ವರ ಪೂಜಾರ, ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಇಮ್ರಾನ್ ತಾಹಿರ್ ಕೂಡ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಹಾರಾಜಾಗದೇ ಉಳಿಯುವ ಮೂಲಕ  2017ನೇ ಸಾಲಿನ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಒಟ್ಟಾರೆ ಸ್ಟಾರ್ ಆಟಗಾರರಿಲ್ಲದ ಐಪಿಎಲ್ 2017 ಕಳೆಗುಂದಲಿದೆಯೇ ಅಥವಾ ಉದಯೋನ್ಮುಖ ಆಟಗಾರರ ಸ್ಪೋಟಕ ಪ್ರದರ್ಶನದ ಮೂಲಕ ಮತ್ತೆ ಅಭಿಮಾನಿಗಳಿಗೆ ರಸದೌತಣ ನೀಡಲಿದೆಯೇ ಕಾದು ನೋಡಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಭಾರತದಲ್ಲಿ ಬಂಡವಾಳ ಕೇವಲ ಬೆಳೆಯುವುದಲ್ಲ, ಅದು ದುಪ್ಪಟ್ಟಾಗುತ್ತದೆ: India-Japan Economic Forum ನಲ್ಲಿ ಪ್ರಧಾನಿ ಮೋದಿ ಮಾತು

ಉತ್ತರಾಖಂಡದಲ್ಲಿ ಮೇಘಸ್ಫೋಟ; ಚಮೋಲಿಯಲ್ಲಿ ಪ್ರವಾಹಕ್ಕೆ ಕೊಚ್ಚಿಹೋದ ದಂಪತಿ, ಅವಶೇಷಗಳಡಿಯಲ್ಲಿ ಸಿಲುಕಿರುವ ಜನ-ಜಾನುವಾರುಗಳು-Video

ಟ್ರಂಪ್ ಆರೋಗ್ಯ ಕುರಿತು ಊಹಾಪೋಹ: ತುರ್ತು ಪರಿಸ್ಥಿತಿ ಎದುರಾದರೆ ಅಧ್ಯಕ್ಷನಾಗಲು ಸಿದ್ಧ ಎಂದ ಜೆಡಿ ವ್ಯಾನ್ಸ್

India-Japan Annual Summit 2025: ಟೋಕಿಯೋ ತಲುಪಿದ ಪ್ರಧಾನಿ ಮೋದಿ, ಅದ್ಧೂರಿ ಸ್ವಾಗತ

ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಿಗೆ ಬಹುಮಾನದ ಮೊತ್ತ ಹೆಚ್ಚಳ: ಒಲಿಂಪಿಕ್ಸ್ ಪದಕ ಗೆದ್ದರೆ 5 ಕೋಟಿ ನಗದು; CM

SCROLL FOR NEXT