ಮೆಲ್ಬೋರ್ನ್: ಕ್ರಿಕೆಟ್ ನಲ್ಲಿ ಎಂತಂತಹ ಘಟನೆಗಳು ನಡೆಯುತ್ತವೆ ಎಂದರೆ ಕ್ರಿಕೆಟ್ ನಿಯಮಗಳನ್ನು ರೂಪಿಸಿದವರಿಗೇ ತಲೆ ಕೆಟ್ಟುಹೋಗುತ್ತದೆ. ಇಂತಹುದೇ ಒಂದು ಘಟನೆ ಆಸ್ಟ್ರೇಲಿಯಾದ ಸ್ಥಳೀಯ ಕ್ರಿಕೆಟ್ ನಲ್ಲಿ ನಡೆದಿದೆ.
ಹೌದು..ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದ ಘಟನೆಯಾಗಿದ್ದು, ಮಿಡ್ ಇಯರ್ ಕ್ರಿಕೆಟ್ ಅಸೋಸಿಯೋಷನ್ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೂನಿವ್ಯಾಲಿ ಮತ್ತು ಸ್ಟ್ರಾಥ್ ಮೋರ್ ಹೈಟ್ಸ್ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಮೂನಿವ್ಯಾಲಿ ತಂಡದ ಬ್ಯಾಟ್ಸಮನ್ ಭಾರತ ಮೂಲದ ಜತೀಂದರ್ ಸಿಂಗ್ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಸ್ಟ್ರಾಥ್ ಮೋರ್ ಹೈಟ್ಸ್ ತಂಡದ ಬೌಲರ್ ಎಸೆದ ಎಸೆತ ಜತೀಂದರ್ ಸಿಂಗ್ ರನ್ನು ವಂಚಿಸಿ ಮಧ್ಯದ ವಿಕೆಟ್ ಎಗರಿಸಿತ್ತು.
ಅಚ್ಚರಿ ಎಂದರೆ ಮಧ್ಯದ ವಿಕೆಟ್ ಹಾರಿತ್ತಾದರೂ ಅದರ ಮೇಲಿದ್ದ ಎರಡು ಬೇಲ್ಸ್ (ಸ್ಟಂಪ್)ಗಳು ಮಾತ್ರ ಕೆಳಗೆ ಬಿದ್ದಿರಲಿಲ್ಲ. ಅತ್ತ ಫೀಲ್ಡಿಂಗ್ ತಂಡ ಮಾತ್ರ ವಿಕೆಟ್ ಬಿದ್ದ ಖುಷಿಯಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಆದರೆ ಇತ್ತ ಅಂಪೈರ್ ಗಳು ಮಾತ್ರ ಇದು ಔಟೇ ಅಥವಾ ನಾಟ್ ಔಟೇ ಎಂದು ತಲೆಕರೆದುಕೊಳ್ಳುತ್ತಿದ್ದರು. ಕೊನೆಗೆ ಸಾಕಷ್ಟು ಹೊತ್ತು ಯೋಚಿಸಿ ಅಂತಿಮವಾಗಿ ಬ್ಯಾಟ್ಸಮನ್ ಜತೀಂದರ್ ಸಿಂಗ್ ಅವರನ್ನು ಔಟ್ ಎಂದು ತೀರ್ಮಾನಿಸಿದರು.
ಕ್ರಿಕೆಟ್ ಇತಿಹಾಸದಲ್ಲೇ ಇಂತಹ ಕ್ಷಣ ಅಪರೂಪವಾಗಿದ್ದು, ಇಂತಹ ಸನ್ನಿವೇಶಗಳಲ್ಲಿ ಕ್ರಿಕೆಟ್ ನಿಯಮಾವಳಿಗಳು ಏನು ಹೇಳುತ್ತದೆ ಎಂಬುದು ಕುತೂಹಲ ಮೂಡಿಸುತ್ತಿದೆ.
ಬ್ಯಾಟ್ಸಮನ್ ಔಟ್ ಎಂದು ಪರಿಗಣಿಸಲು ಇರುವ ನಿಯಮಗಳೇನು?
ಕ್ರಿಕೆಟ್ ನಿಯಮಾವಳಿಗಳನ್ನು ರಚನೆ ಮಾಡುವ ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್ ನ ಪ್ರಕಾರ "ಎರಡೂ ಬೇಲ್'ಗಳು ಸ್ಟಂಪ್'ಗಳ ಮೇಲೆಯೇ ಇದ್ದರೆ ಅದು ಔಟ್ ಎನಿಸುವುದಿಲ್ಲ... ಸ್ಪಂಪ್ ಮೇಲಿಂದ ಬೇಲ್ ಸಂಪೂರ್ಣವಾಗಿ ಹೊರಬಿದ್ದರೆ, ಅಥವಾ ನೆಲದಿಂದ ಸ್ಟಂಪ್ ಕಿತ್ತು ಬಿದ್ದರೆ ಮಾತ್ರ ಬ್ಯಾಟ್ಸ್'ಮ್ಯಾನ್ ಔಟ್ ಆಗುತ್ತಾನೆ" ಎಂದು ನಿಯಮದಲ್ಲಿ ಬರೆಯಲಾಗಿದೆ.