ಕೋಲ್ಕತಾ: ನಿರ್ಣಾಯಕ ಹಂತ ತಲುಪಿರುವ ಐಪಿಎಲ್ ಟೂರ್ನಿಯ 54ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು 9 ರನ್ ಗಳಿಂದ ಮಣಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.
ನಿನ್ನೆ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತಾ ವಿರುದ್ದ 9 ರನ್ ಗಳ ರೋಚಕ ಜಯ ಸಾಧಿಸಿತು. ಟಾಸ್ ಗೆದ್ದು ಕೋಲ್ಕತಾ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ಆರಂಭಿಕ ಆಟಗಾರ ತಿವಾರ ಅರ್ಧಶತಕ ಗಳಿಸಿದರೆ, ಅಂಬಾಟಿ ರಾಯುಡು 63 ರನ್ ಗಳ ಉತ್ತಮ ಕಾಣಿಗೆ ನೀಡಿದರು. ಆ ಮೂಲಕ ಮುಂಬೈ ತಂಡ 20 ಓವರ್ ಗಳಲ್ಲಿ 173 ರನ್ ಗಳ ಸವಾಲಿನ ಮೊತ್ತ ಕಲೆಹಾಕಿತು.
ಈ ಮೊತ್ತವನ್ನು ಬೆನ್ನುಹತ್ತಿದ ಕೋಲ್ಕತಾ ತಂಡ ಆರಂಭಿಕ ಆಘಾತ ಎದುರಿಸಿತು. ತಂಡದ ಸ್ಫೋಟಕ ಬ್ಯಾಟ್ಸಮನ್ ನರೀನ್ ಶೂನ್ಯಕ್ಕೆ ಔಟ್ ಆದರು.ಮನೀಶ್ ಪಾಂಡೆ 33 ರನ್, ಗಳಿಸಿದ್ದೇ ಕೋಲ್ಕತಾ ಪರವಾಗಿ ಬ್ಯಾಟ್ಸಮನ್ ಒಬ್ಬ ಗಳಿಸಿದ ಗರಿಷ್ಟ ಮೊತ್ತವಾಗಿತ್ತು. ಮುಂಬೈ ತಂಡದ ಸಾಂಘಿಕ ಬೌಲಿಂಗ್ ಗೆ ಮಣಿದ ಕೋಲ್ಕತಾ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 164 ರನ್ ಗಳಿಸಲಷ್ಟೇ ಸೀಮಿತವಾಯಿತು. ಆ ಮೂಲಕ ಮುಂಬೈ ವಿರುದ್ಧ 9 ರನ್ ಗಳ ಅಂತರದಲ್ಲಿ ಪರಾಭವ ಕಂಡಿತು.
ಈ ಪಂದ್ಯದ ಗೆಲುವಿನೊಂದಿಗೆ ಮುಂಬೈ ಅಗ್ರ ಸ್ಥಾನದಲ್ಲಿ ಮುಂದುವರೆದರೆ, ಕೋಲ್ಕತಾ ತಂಡ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.