ಕ್ರಿಕೆಟ್

ಗೆಲುವಿನೊಂದಿಗೆ ಐಪಿಎಲ್ 2017ಗೆ ವಿದಾಯ ಹೇಳಿದ ಆರ್'ಸಿಬಿ

Srinivasamurthy VN

ನವದೆಹಲಿ: ಐಪಿಎಲ್ 2017 ಸರಣಿಯಲ್ಲಿ ಸತತ ಸೋಲುಗಳ ಮೂಲಕ ಸರಣಿಯಿಂದ ಹೊರಬಿದ್ದಿದ್ದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ತನ್ನ ಅಂತಿಮ ಪಂದ್ಯದಲ್ಲಿ ಗೆಲುವಿನ ಸಿಹಿ ಉಂಡಿದೆ.

ನಿನ್ನೆ ದೆಹಲಿಯಲ್ಲಿ ನಡೆದ ದೆಹಲಿ ಡೇರ್ ಡೆವಿಲ್ಸ್ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ 10 ರನ್ ಗಳ ರೋಚಕ ಜಯ ದಾಖಲಿಸಿದೆ. ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ  ಆರ್'ಸಿಬಿ ನಿಗದಿತ 20 ಓವರ್'ಗಳಲ್ಲಿ 6 ವಿಕೆಟ್ ಕಳೆದುಕೊಂಡು 161ರನ್ ಕಲೆಹಾಕಿತು. ವಿರಾಟ್ ಕೊಹ್ಲಿ ನಾಯಕನ ಜವಾಬ್ದಾರಿ ಅರಿತು 58 ರನ್ ಗಳಿಸಿದ್ದು ದೆಹಲಿ ಎದುರು ಆರ್ ಸಿಬಿ ಸವಾಲಿನ ಮೊತ್ತ ಕಲೆಹಾಕಲು ನೆರವಾಯಿತು.  ಸ್ಪೋಟಕ ಆಟವಾಡಿದ ಗೇಲ್ ತಲಾ ಮೂರು ಸಿಕ್ಸರ್ ಹಾಗೂ ಬೌಂಡರಿಯೊಂದಿಗೆ 48ರನ್ ಬಾರಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಆರ್'ಸಿಬಿ ಬ್ಯಾಟ್ಸ್'ಮನ್'ಗಳು ಕೈಕೊಟ್ಟಿದ್ದರಿಂದ ತಂಡ 161ರನ್ ಬಾರಿಸಲಷ್ಟೇ  ಶಕ್ತವಾಯಿತು.

ಆರ್ ಸಿಬಿ ನೀಡಿದ 162 ರನ್ ಗಳ ಗುರಿ ಬೆನ್ನು ಹತ್ತಿದ ಜಹೀರ್ ಖಾನ್ ನೇತೃತ್ವದ ಡೆಲ್ಲಿ ಡೇರ್'ಡೆವಿಲ್ಸ್ ತಂಡ ಕೇವಲ 151ರನ್ ಗಳಿಗೆ ಸರ್ವಪತನ ಕಂಡಿತು. ದೆಹಲಿ ಮೊದಲ ಓವರ್'ನಲ್ಲೇ ಆಘಾತ ಅನುಭವಿಸಿತು. ಸಂಜು  ಸ್ಯಾಮ್ಸನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಯುವ ಪ್ರತಿಭೆ ರಿಷಭ್ ಪಂತ್ 45 ಬಾರಿಸಿ ತಂಡಕ್ಕೆ ಗೆಲುವಿನ ಆಸೆ ತೋರಿಸಿದರು. ಆದರೆ ಮರ್ಲಾನ್ ಸ್ಯಾಮ್ಯುಯಲ್ಸ್, ಕೋರಿ ಆ್ಯಂಡರ್ ಸನ್  ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರಿಂದ ದೆಹಲಿ ಸೋಲೊಪ್ಪಿಕೊಳ್ಳಬೇಕಾಗಿ ಬಂತು. ಅಂತಿಮವಾಗಿ ದೆಹಲಿ ತಂಡ 20 ಓವರ್ ಗಳಲ್ಲಿ 151 ರನ್ ಗಳಿ ಆಲ್ ಔಟ್ ಆಯಿತು.

ಆರ್ ಸಿಬಿ ಪರ ಪಟೇಲ್ ಮತ್ತು ನೇಗಿ ತಲಾ 3 ವಿಕೆಟ್ ಪಡೆದರೆ, ಹೆಡ್ 2 ಹಾಗೂ ಖಾನ್ ಮತ್ತು ವಾಟ್ಸನ್ ತಲಾ 1 ವಿಕೆಟ್ ಪಡೆದರು.

SCROLL FOR NEXT