ಕ್ರಿಕೆಟ್

ನನ್ನ ಮುಂದೆ ಕೊಹ್ಲಿ ಆಟ ನಡೆಯೊಲ್ಲ: ಪಾಕ್ ಬೌಲರ್ ಜುನೈದ್ ಖಾನ್

Srinivasamurthy VN

ಲಂಡನ್: ವಿರಾಟ್ ಕೊಹ್ಲಿ ಉತ್ತಮ ಬ್ಯಾಟ್ಸಮನ್ ಇರಬಹುದು..ಆದರೆ ಆತನ ಆಟ ನನ್ನ ಮುಂದೆ ನಡೆಯೊಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲರ್ ಜುನೈದ್ ಖಾನ್ ಹೇಳಿದ್ದಾರೆ.

ಇಂಗ್ಲೆಂಡ್ ನಲ್ಲಿ ಆರಂಭವಾಗಲಿರುವ ಬಹು ನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಎದುರಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ದಿನಗಣನೆ  ಆರಂಭವಾಗಿರುವಂತೆಯೇ ಪಾಕಿಸ್ತಾನ ತಂಡದ ವೇಗದ ಬೌಲರ್‌ ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್‌ ಕೊಹ್ಲಿ ಬಗ್ಗೆ ವ್ಯಂಗ್ಯವಾಡಿ ಸುದ್ದಿಯಲ್ಲಿದ್ದಾರೆ. ಪಾಕ್ ತಂಡದ ವೇಗಿ ಜುನೈದ್ ಖಾನ್, ಕೊಹ್ಲಿ ಮುಂದೆ ನನ್ನ ಆಟ  ನಡೆಯೊಲ್ಲ ಎಂದು ಹೇಳುವ ಮೂಲಕ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಇತ್ತೀಚೆಗೆ ಕ್ರೀಡಾ ಮಾಧ್ಯಮವೊಂದರೊಂದಿಗೆ ಮಾತನಾಡಿದ ಜುನೈದ್ ಖಾನ್, "ಕೊಹ್ಲಿ ಉತ್ತಮ ಆಟಗಾರನೇ ಇರಬಹುದು. ಬೌಂಡರಿ ಸಿಕ್ಸರ್ ಗಳ ಮೂಲಕ ಉತ್ತಮ ಸರಾಸರಿ ಹೊಂದಿರಬಹುದು. ಆದರೆ ಅದಾವುದೂ ನನ್ನ  ಬೌಲಿಂಗ್ ನಲ್ಲಿ ಬಂದದ್ದಲ್ಲ. ನಾನು ಕೊಹ್ಲಿಯನ್ನು ಹಳೆಯ ಕೊಹ್ಲಿಯಾಗಿಯೇ ಪರಿಗಣಿಸುತ್ತೇನೆ. ಬಹುಶಃ ನನ್ನ ಭಾವನೆ ತಪ್ಪಾಗಿರಬಹುದು. ಅಂತೆಯೇ ಕೊಹ್ಲಿ ಕೂಡ ನನ್ನನ್ನು ಹಳೆಯ ಜುನೈದ್ ಖಾನ್ ರಂತೆಯೇ ಪರಿಗಣಿಸಬಹುದು.  ಈ ಹಿಂದಿನ ನನ್ನ ದಾಖಲೆಯನ್ನು ಹಾಗೆಯೇ ಮುಂದುವರೆಸಲು ನಾನು ಇಚ್ಛಿಸುತ್ತೇನೆ. ಹೀಗಾಗಿ ಯಾವುದೇ ಕಾರಣಕ್ಕೂ ಕೊಹ್ಲಿ ನನ್ನ ವಿರುದ್ಧ ಬ್ಯಾಟ್ ಬೀಸದಂತೆ ಪ್ರಬಲ ಎಸೆತಗಳನ್ನು ಹಾಕುತ್ತೇನೆ. ನಾನು ಈವರೆಗೆ ಭಾರತದ  ವಿರುದ್ಧ ನಾಲ್ಕು ಪಂದ್ಯಗಳಲ್ಲಿ ಆಡಿದ್ದೇನೆ, ನಾಲ್ಕರಲ್ಲಿ ಮೂರು ಬಾರಿ ಕೊಹ್ಲಿ ವಿಕೆಟ್ ನಾನೇ ಪಡೆದಿದ್ದೇನೆ. ವಿರಾಟ್ ಕೊಹ್ಲಿ ಒಬ್ಬ ವಿಶ್ವದರ್ಜೆಯ ಬ್ಯಾಟ್ಸ್‌ಮನ್‌ ಆಗಿರಬಹುದು ಆದರೆ ನನ್ನ ವಿರುದ್ಧ ಅವನ ಬ್ಯಾಟ್ ಯಾವತ್ತೂ ಸಿಡಿದಿಲ್ಲ..  ಎಲ್ಲಾ ಬೌಲರ್ ಗಳ ವಿರುದ್ಧ ರನ್ ಮಳೆ ಹರಿಸಿದರೂ ನನ್ನ ವಿರುದ್ಧ ಬೌಂಡರಿ ಸಿಕ್ಸರ್ ಸಿಡಿಸಲು ಅವರಿಂದಾಗಿಲ್ಲ. ಈ ಬಾರಿಯು ಅದೇ ರೀತಿಯ ದಾಳಿ ನಡೆಸಲು ಸರ್ವ ತಯಾರಿ ನಡೆಸಿದ್ದೇನೆ" ಎಂದು ಜುನೈದ್ ಹೇಳಿದ್ದಾರೆ.

"ನನ್ನ ಹಿರಿಯ ಆಟಗಾರರು ನನ್ನ ಸ್ವಿಂಗ್ ಎಸೆತಗಳೇ ನನ್ನ ಪ್ರಮುಖ ಆಯುಧ ಎಂದು ಬಣ್ಣಿಸಿದ್ದಾರೆ. ಇತ್ತೀಚೆಗೆ ನನ್ನ ಸ್ವಿಂಗ್ ನಲ್ಲಿ ವ್ಯತ್ಯಾಸ ಕಂಡಬಂದಿರಬಹುದು. ಆದರೆ ಭಾರತದ ವಿರುದ್ಧದ ಪಂದ್ಯದ ವೇಳೆ ಫಿಟ್ ಆಗಿ ಉತ್ತಮ  ಪ್ರದರ್ಶನ ನೀಡಬಯಸುತ್ತೇನೆ  ಎಂದು ಜುನೈದ್ ಖಾನ್ ಪಾಕಿಸ್ತಾನದ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

SCROLL FOR NEXT