ಕ್ರಿಕೆಟ್

ಏಕದಿನದಲ್ಲಿ ದ್ವಿಶತಕ ಬಾರಿಸಿದ ಮುಂಬೈ ಆಟಗಾರ್ತಿ!

Srinivasamurthy VN
ಮುಂಬೈ: ಮುಂಬೈ ಮೂಲದ ಮಹಿಳಾ ಕ್ರಿಕೆಟ್ ಆಟಗಾರ್ತಿಯೊಬ್ಬರು ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಮುಂಬೈ ಮೂಲದ ಆಟಗಾರ್ತಿ 16 ವರ್ಷದ ಜೆಮಿಮಾ ರೋಡ್ರಿಗಸ್ ಔರಂಗಬಾದ್‌ ನಲ್ಲಿ ನಡೆದ ಅಂಡರ್ 19 ಟೂರ್ನಮೆಂಟ್‌ವೊಂದರ ಸೌರಾಷ್ಟ್ರ ವಿರುದ್ಧದ ಏಕದಿನ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿದ ಸಾಧನೆ  ಮಾಡಿದ್ದಾರೆ. ಕೇವಲ 163 ಎಸೆತಗಳನ್ನು ಎದುರಿಸಿದ ಜೆಮಿಮಾ 202 ರನ್ ಚಚ್ಚಿದ್ದರು. ಈ ಬ್ಯಾಟ್ಸ್‌ವುವೆನ್ ಅದ್ಭುತ ಬ್ಯಾಟಿಂಗ್ ನೆರವಿನಿಂದ ಮುಂಬಯಿ 50 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 347 ರನ್‌ಗಳ ಬೃಹತ್ ಮೊತ್ತ  ಪೇರಿಸಿತ್ತು.
ತಮ್ಮ 13ರ ಹರೆಯದಲ್ಲೇ 19 ವರ್ಷದವರೊಳಗಿನ ತಂಡದಲ್ಲಿ ಗುರುತಿಸಿಕೊಂಡಿದ್ದ ಜೆಮಿಮಾ ಈ ಟೂರ್ನಿಯಲ್ಲಿ ಎರಡು ಶತಕಗಳೊಂದಿಗೆ 300ಕ್ಕೂ ಹೆಚ್ಚು ಸರಾಸರಿಯನ್ನು ಕಾಪಾಡಿಕೊಂಡಿದ್ದಾರೆ. ಬೌಲಿಂಗ್‌ನಿಂದ ಕೆರಿಯರ್  ಆರಂಭಿಸಿದ ಬಳಿಕ ನಿಧಾನವಾಗಿ ಅಗ್ರ ಕ್ರಮಾಂಕದ ಆಟಗಾರ್ತಿಯಾಗಿ ಜೆಮಿಮಾ ಬದಲಾವಣೆಗೊಂಡಿದ್ದರು. ಅಲ್ಲದೆ ನಂ.3 ಕ್ರಮಾಂಕದಲ್ಲಿ ಸ್ಥಿರ ಪ್ರದರ್ಶನ ಕಾಪಾಡಿಕೊಳ್ಳುವ ಮೂಲಕ ಬ್ಯಾಟಿಂಗ್ ನಲ್ಲೂ ಗಮನಸೆಳೆದಿದ್ದರು.  ಇದೀಗ ಮಹಿಳೆಯರ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೂಲಕ ಜೆಮಿಮಾ ರಾಷ್ಟ್ರೀಯ ಆಯ್ಕೆಗಾರರ ಗಮನ ಸೆಳೆಯುವಲ್ಲಿ ಸಫಲರಾಗಿದ್ದಾರೆ.
ಈ ಹಿಂದೆ ಸಚಿನ್, ವಿನೋದ್ ಕಾಂಬ್ಳಿರಂತಹ ದಿಗ್ಗಜ ಆಟಗಾರರನ್ನು ನೀಡಿದ್ದ ಮುಂಬೈನಲ್ಲೇ ಜೆಮಿಮಾ ರೋಡ್ರಿಗಸ್ ರಂತಹ ಉದಯೋನ್ಮುಖ ಕ್ರಿಕೆಟ್ ಆಟಗಾರ್ತಿ ಕೂಡ ಸಾಧನೆ ಮೂಲಕ ಗಮನ ಸೆಳೆದಿರುವುದು ವಿಶೇಷ.
SCROLL FOR NEXT