ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಜಹೀರ್ ಖಾನ್
ಮುಂಬೈ: ಭಾರತ ತಂಡದ ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಮತ್ತು ಚಕ್ ದೇ ಇಂಡಿಯಾ ಖ್ಯಾತಿಯ ನಟಿ ಸಾಗರಿಕಾ ಘಟ್ಕೆ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮುಂಬೈನಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ನೆರವೇರಿಸಿಕೊಂಡಿದ್ದಾರೆ.
ಗುರುವಾರ ಬೆಳಗ್ಗೆ ಮುಂಬೈನ ವಿವಾಹ ನೋಂದಣಿ ಕಚೇರಿಗೆ ತೆರಳಿದ್ದ ನವ ದಂಪತಿಗಳು ವಿವಾಹ ನೋಂದಣಿ ಮಾಡಿಸಿದರು. ಈ ವೇಳೆ ಜಹೀರ್ ಮತ್ತು ಸಾಗರಿಕಾ ಅವರ ಕುಟುಂಬಸ್ಥರು ಹಾಗೂ ಕೆಲವೇ ಆಪ್ತರು ಮಾತ್ರ ಉಪಸ್ಥಿತರಿದ್ದರು. ವಿವಾಹದ ಬಳಿಕ ಜಹೀರ್ ಆಪ್ತ ಅಜ್ನಾನ ಶರ್ಮಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಚಿತ್ರವನ್ನು ಅಪ್ಲೋಡ್ ಮಾಡಲಾಗಿದ್ದು, ಜಹೀರ್-ಸಾಗರಿಕಾ ದಂಪತಿಗಳಿಗೆ ಶುಭ ಹಾರೈಕೆಯ ಮಹಾಪೂರವೇ ಹರಿದುಬರುತ್ತಿದೆ.
ಸಾಗರಿಕ ಅವರು ಕೆಂಪುಬಣ್ಣದ ಸೀರೆಯನ್ನುಟ್ಟಿದ್ದರೆ, ಜಹೀರ್ ಖಾನ್ ಪೀಚ್ ಬಣ್ಣದ ಪೈಜಾಮ ಧರಿಸಿ ಮಿಂಚುತ್ತಿದ್ದರು. ಕಳೆದ ಏಪ್ರಿಲ್ ನಲ್ಲಿ ಇವರಿಬ್ಬರ ವಿವಾಹ ನಿಶ್ಚಿತಾರ್ಥ ನೆರವೇರಿತ್ತು. ಇದೇ ಸೋಮವಾರ ಮುಂಬೈ ಐಶಾರಾಮಿ ಖಾಸಗಿ ಹೋಟೆಲ್ ನಲ್ಲಿ ನವದಂಪತಿಗಳ ವಿವಾಹ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.