ಭುವಿಗೆ ತಲೆಬಾಗಿದ ಕ್ಯಾಪ್ಟನ್ ಕೊಹ್ಲಿ
ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಸೋತರೂ, ಈ ಪಂದ್ಯ ಹಲವು ಪ್ರಮುಖ ಸನ್ನಿವೇಶಗಳಿಗೆ ಕಾರಣವಾಗಿತ್ತು.
ಪ್ರಮುಖವಾಗಿ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಇದು 200ನೇ ಪಂದ್ಯವಾಗಿದ್ದು, ಇದೇ ಪಂದ್ಯದಲ್ಲಿ ಕೊಹ್ಲಿ ದಾಖಲೆಯ ಶತಕ ಸಿಡಿಸುವ ಮೂಲಕ ದಾಖಲೆಗೆ ಪಾತ್ರರಾಗಿದ್ದರು. ಕೊಹ್ಲಿ ಹೊರತಾಗಿಯೂ ಭಾರತ ತಂಡ ಮತ್ತೋರ್ವ ಆಟಗಾರ ಪ್ರೇಕ್ಷಕರಿಗೆ ಕೆಲ ಕಾಲ ರಸದೌತಣ ನೀಡಿದ್ದು ಸುಳ್ಳಲ್ಲ. ಅದು ಬೇರಾರೂ ಅಲ್ಲ ತಂಡದ ಪ್ರಮುಖ ಬೌಲರ್ ಭುವನೇಶ್ವರ್ ಕುಮಾರ್. ಆದರೆ ಭುವಿ ಪ್ರೇಕ್ಷಕರ ಗಮನ ಸೆಳೆದಿದ್ದು ಬೌಲಿಂಗ್ ನಿಂದಾಗಿ ಅಲ್ಲ.. ಬದಲಿಗೆ ಬ್ಯಾಟಿಂಗ್ ನಿಂದಾಗಿ..
ಹೌದು.. ಟೀಂ ಇಂಡಿಯಾದ ಪ್ರಮುಖ ವೇಗಿಯಾಗಿರುವ ಭುವನೇಶ್ವರ್ ಕುಮಾರ್ ಭಾರತ ತಂಡದ ಬ್ಯಾಟಿಂಗ್ ವೇಳೆ ಅಂತಿಮ ಘಟ್ಟದಲ್ಲಿ ಬಂದು ಕೆಲಕಾಲ ಪ್ರೇಕ್ಷಕರಿಗೆ ರಸದೌತಣ ನೀಡಿದರು. ಕೇವಲ 15 ಎಸೆತಗಳನ್ನು ಎದುರಿಸಿದ ಭುವಿ 2 ಸಿಕ್ಸರ್ ಮತ್ತು 2 ಬೌಂಡರಿಗಳ ನೆರವಿನಿಂದ ಬರೊಬ್ಬರಿ 26 ರನ್ ಚಚ್ಚಿದರು. ಓರ್ವ ಬೌಲರ್ ಆಗಿ ಭುವಿಯ ಈ ಆಟ ನಿಜಕ್ಕೂ ಪ್ರೇಕ್ಷಕರ ಮನ ಸೆಳೆಯಿತು.
ಭುವಿ 49ನೇ ಓವರ್ ನಲ್ಲಿ ಸಿಡಿಸಿದ ಒಂದು ಸಿಕ್ಸರ್ ಅಂತೂ ಕ್ಯಾಪ್ಟನ್ ಕೊಹ್ಲಿಗೂ ಅಚ್ಚರಿ ಮೂಡಿಸಿತ್ತು. ಇನ್ನಿಂಗ್ಸ್ ನ 49ನೇ ಓವರ್ ನಲ್ಲಿ ಕಿವೀಸ್ ತಂಡ ಆ್ಯಡಂ ಮಿಲ್ನೆ ಎಸೆದ ಬೌನ್ಸರ್ ಒಂದನ್ನು ಭುವಿ ಲಾಂಗ್ ಆನ್ ನತ್ತ ಬಲವಾಗಿ ಬೀಸಿದರು. ಭುವಿಯ ಈ ಹೊಡೆತ ಕಿವೀಸ್ ಆಟಗಾರ ಮೇಲೆ ಸಾಗಿ ಬೌಂಡರಿ ಲೈನ್ ದಾಟಿತ್ತು. ಈ ಹೊಡೆತ ನೋಡಿದ ಕೊಹ್ಲಿ ಕ್ರೀಡಾಂಗಣದಲ್ಲೇ ಭುವಿಗೆ ತಲೆಬಾಗಿ ಪ್ರಶಂಸಿದರು.
ಈ ವಿಡಿಯೋವನ್ನು ಬಿಸಿಸಿಐ ತನ್ನ ವೆಬ್ ಸೈಟಿನಲ್ಲಿ ಅಪ್ಲೋಡ್ ಮಾಡಿದ್ದು, ಫೇಸ್ ಬುಕ್ ನಲ್ಲಿ ಇಂಡಿಯನ್ ಕ್ರಿಕೆಟ್ ಟೀಂ ಖಾತೆ ಈ ವಿಡಿಯೋವನ್ನು ಶೇರ್ ಮಾಡಿದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಭುವಿ ಮತ್ತು ಕೊಹ್ಲಿ ಜೊತೆಯಾಟದಿಂದಾಗಿ ಭಾರತ ಅಂತಿಮ ಘಟ್ಟದಲ್ಲಿ 8 ವಿಕೆಟ್ ನಷ್ಟಕ್ಕೆ 280 ರನ್ ಕಲೆಹಾಕಿತು. ಬೌಲಿಂಗ್ ನಲ್ಲಿ ಪ್ರಮುಖರಾಗಿರುವ ಭುವಿ ಕ್ರಮೇಣ ಬ್ಯಾಟಿಂಗ್ ನಲ್ಲೂ ಸುಧಾರಿಸುತ್ತಿರುವುದು ಟೀಂ ಇಂಡಿಯಾಗೆ ಸಕಾರಾತ್ಮಕ ಅಂಶವಾಗಿದೆ. ಈ ಹಿಂದೆ ತಂಡದ ಬೌಲರ್ ಆಗಿ ಆಯ್ಕೆಯಾಗಿದ್ದ ಹಾರ್ದಿಕ್ ಪಾಂಡ್ಯ ಕೂಡ ಇದೀಗ ಪ್ರಮುಖ ಆಲ್ ರೌಂಡರ್ ಆಗಿ ರೂಪುಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos