ನವದೆಹಲಿ: ಟೀಂ ಇಂಡಿಯಾದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಬೇಕಾದರೇ ಸಭ್ಯ ಆಟಗಾರರು ಟ್ಯಾಟೂ ಮತ್ತು ಚಿತ್ರ ವಿಚಿತ್ರವಾದ ಕೇಶ ವಿನ್ಯಾಸ ಮಾಡಿಸಿಕೊಳ್ಳಬೇಕಿದೆ ಎಂಬ ಗಂಭೀರ ಆರೋಪವನ್ನು ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್ ಮಾಡಿದ್ದಾರೆ.
ಲಂಕಾ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಗೆದ್ದಿರುವ ಟೀಂ ಇಂಡಿಯಾ ತಂಡದ ಪ್ರದರ್ಶನವನ್ನು ಕೊಂಡಾಡಿರುವ ಗವಾಸ್ಕರ್, ಏಕದಿನ ಸರಣಿ ಆರಂಭದಿಂದಲೇ ಅಜಿಂಕ್ಯ ರಹಾನೆಗೆ ಸ್ಥಾನ ನೀಡದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಇನ್ನು ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರು ಟ್ಯಾಟೂ ಹಾಗೂ ವಿಚಿತ್ರ ಹೇರ್‌ಸ್ಟೈಲ್ ಇದ್ದರಷ್ಟೇ ಆದ್ಯತೆ ನೀಡಲಾಗುತ್ತದೆ ಎಂಬ ಆರೋಪ ಇದೀಗ ಭಾರತೀಯ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ಬರೆದಿರುವ ಅಂಕಣದಲ್ಲಿ ಗವಾಸ್ಕರ್ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ. ತಂಡದಲ್ಲಿ ಹಲವು ಪ್ರಯೋಗಗಳನ್ನು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಯಾರ ಮೇಲೆ ಯಾವ ರೀತಿಯ ಪ್ರಯೋಗಳನ್ನು ಮಾಡಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಪದೇ ಪದೇ ಕಳಪೆ ಪ್ರದರ್ಶನ ನೀಡುತ್ತಿದ್ದವರಿಗೆ ಹೆಚ್ಚು ಅವಕಾಶ ನೀಡಲಾಗುತ್ತಿದೆ. ಒಬ್ಬ ಆಟಗಾರನಿಗೆ ಹೆಚ್ಚು ಅವಕಾಶ ನೀಡುವುದು ತಪ್ಪಲ್ಲ, ಆದರೆ ಅದರಿಂದ ಮತ್ತೊಬ್ಬ ಅರ್ಹ ಆಟಗಾರನಿಗೆ ಮೋಸವಾಗಬಾರದು ಎಂದು ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.