ಆಸ್ಟ್ರೇಲಿಯಾ-ಭಾರತ ನಡುವೆ ತೀವ್ರ ಕುತೂಹಲ ಮೂಡಿಸಿದ್ದ 7 ಕ್ರಿಕೆಟ್ ಪಂದ್ಯಗಳು
ಕಳೆದ ತಿಂಗಳು ಶ್ರೀಲಂಕಾ ವಿರುದ್ಧದ ಐದು ಏಕದಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮಾಡಿದ್ದ ಟೀಂ ಇಂಡಿಯಾ ನಾಳೆಯಿಂದ ಆಸ್ಟ್ರೇಲಿಯಾ ವಿರುದ್ಧ ಸೆಣೆಸಲಿದೆ.
ಕಳೆದ ತಿಂಗಳು ಶ್ರೀಲಂಕಾ ವಿರುದ್ಧದ ಐದು ಏಕದಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮಾಡಿದ್ದ ಟೀಂ ಇಂಡಿಯಾ ನಾಳೆಯಿಂದ ಆಸ್ಟ್ರೇಲಿಯಾ ವಿರುದ್ಧ ಸೆಣೆಸಲಿದೆ.
2019ರ ಏಕದಿನ ವಿಶ್ವಕಪ್ ಪಂದ್ಯಾವಳಿಯ ದೃಷ್ಟಿಯಿಂದ ಈ ಸರಣಿ ಉಭಯ ತಂಡಗಳಿಗೂ ಹೆಚ್ಚು ಮಹತ್ವದ್ದಾಗಿದೆ. ಇನ್ನು ಈ ಸರಣಿಯಲ್ಲಿ ಯಾವ ತಂಡ 4-1 ಅಂತರದಿಂದ ಸರಣಿ ಕೈವಶ ಮಾಡಿಕೊಳ್ಳುತ್ತದೆಯೋ ಆ ತಂಡ ಐಸಿಸಿ ಏಕದಿನ ರ್ಯಾಂಕಿಂಗ್ ನಲ್ಲಿ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದೆ. ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ನಡುವೆ ಐದು ಪಂದ್ಯಗಳ ಏಕದಿನ ಸರಣಿ ಪ್ರಾರಂಭವಾಗಲಿದ್ದು ಈ ಹಿಂದೆ ಉಭಯ ತಂಡಗಳ ನಡುವೆ ಹೆಚ್ಚು ಕುತೂಹಲ ಸೃಷ್ಟಿಸಿದ್ದ ಏಳು ಪಂದ್ಯಗಳ ರೋಚಕ ಗೆಲುವುಗಳು ಈ ಕೆಳಕಂಡಂತಿವೆ.
ಬ್ರಿಸ್ಬೇನ್ ನಲ್ಲಿ ನಡೆದಿದ್ದ 1992ರ ಏಕದಿನ ವಿಶ್ವಕಪ್ ನಲ್ಲಿ ಭಾರತ ಹೀನಾಯ ಪ್ರದರ್ಶನ ನೀಡಿತ್ತು. ಆ ಟೂರ್ನಿಯಲ್ಲಿ ಆಡಿದ್ದ ಎಂಟು ಪಂದ್ಯಗಳ ಪೈಕಿ ಭಾರತ ಎರಡು ಪಂದ್ಯಗಳಲ್ಲಿ ಮಾತ್ರ ಗೆಲುವು ಕಂಡಿತ್ತು. ಅದರಲ್ಲಿ ಭಾರತ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 9 ರನ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕೇವಲ 1 ರನ್ ನಿಂದ ಪಂದ್ಯವನ್ನು ಕೈಚೆಲ್ಲಿತ್ತು. 1992ರ ಮಾರ್ಚ್ 1ರಂದು ಆಸ್ಟ್ರೇಲಿಯಾ ಹಾಗೂ ಭಾರತ ತಂಡ ಎದುರು ಬದುರಾಗಿದ್ದವು. ಈ ಪಂದ್ಯದಲ್ಲಿ ಅಲಾನ್ ಬಾರ್ಡರ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದರೇ ಮೊಹಮ್ಮದ್ ಅಜರುದ್ದೀನ್ ಭಾರತ ತಂಡವನ್ನು ಮುನ್ನಡೆಸಿದ್ದರು. ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 237 ರನ್ ಗಳಿಸಿತ್ತು. ಇನ್ನು ಮಳೆಯಿಂದಾಗಿ ಭಾರತಕ್ಕೆ 47 ಓವರ್ ಗಳಲ್ಲಿ 236 ರನ್ ಗುರಿ ನೀಡಲಾಗಿತ್ತು. ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಕಪಿಲ್ ದೇವ್, ಸಚಿನ್ ತೆಂಡೂಲ್ಕರ್ ಮತ್ತು ಅಜಯ್ ಜಡೇಜಾ ಅಲ್ಪ ಮೊತ್ತಕ್ಕೆ ಔಟ್ ಆಗಿ ಪೆವಿಲಿಯನ್ ಸೇರಿದರು. ಆಗ ಭಾರತ 41 ರನ್ ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜತೆಯಾದ ಅಜರುದ್ದೀನ್ 93 ರನ್ ಸಿಡಿಸಿ ತಂಡಕ್ಕೆ ಗೆಲುವಿನ ದಾರಿ ತೋರಿಸಿದರು. ಆದರೆ ಪಂದ್ಯದ ಕೊನೆಯ ಓವರ್ ನಲ್ಲಿ 8 ವಿಕೆಟ್ ಗೆ 231 ರನ್ ಗಳಿಸಿದ್ದ ಟೀಂ ಇಂಡಿಯಾ ಕೊನೆಗೆ 234 ರನ್ ಗಳಿಗೆ ಆಲೌಟ್ ಆಗುವ ಮೂಲಕ ಒಂದು ರನ್ ನಿಂದ ರೋಚಕ ಸೋಲು ಅನುಭವಿಸಿತ್ತು.
ಸಚಿನ್ ಶತಕದಿಂದ ಆಸೀಸ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು
1997/98ರಲ್ಲಿ ಶಾರ್ಜಾದಲ್ಲಿ ನಡೆದಿದ್ದ ಕೊಕೊ ಕೋಲಾ ಕಪ್ ನ ತ್ರಿಕೋನ ಸರಣಿಯಲ್ಲಿ ಸಚಿನ್ ಶತಕ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟಿತ್ತು. ಈ ಸರಣಿಯಲ್ಲಿ ಕೇವಲ 1 ಪಂದ್ಯ ಗೆದ್ದಿದ್ದ ಭಾರತ ನ್ಯೂಜಿಲೆಂಡ್ ಹಿಂದಿಕ್ಕಿ ಫೈನಲ್ ಪ್ರವೇಶಿಸಿತ್ತು. ಇನ್ನು ಎಲ್ಲಾ ಪಂದ್ಯಗಳಲ್ಲೂ ಗೆದ್ದಿದ್ದ ಆಸ್ಟ್ರೇಲಿಯಾ ಅನಾಯಾಸವಾಗಿ ಫೈನಲ್ ತಲುಪಿತ್ತು. ಈ ಫೈನಲ್ ಪಂದ್ಯ ಭಾರತಕ್ಕೆ ಮಹತ್ವದ್ದಾಗಿತ್ತು. 1992ರ ಹೀನಾಯ ಸೋಲಿನ ಕಹಿಯನ್ನು ಭಾರತ ಕಳಚಿಕೊಳ್ಳಬೇಕಿತ್ತು. ಅಂತೇ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ನಿಗದಿತ ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತ್ತು. 273 ರನ್ ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಸಚಿನ್ ಆಸರೆಯಾದರು. 131 ಎಸೆತಗಳಲ್ಲಿ 134 ರನ್ ಸಿಡಿಸುವ ಮೂಲಕ ಭಾರತಕ್ಕೆ ಜಯ ತಂದುಕೊಟ್ಟರು. ಈ ಪಂದ್ಯದಲ್ಲಿ ಭಾರತ 9 ಎಸೆತ ಇರುವಂತೆ ಗೆಲುವಿನ ನಗೆ ಬೀರಿತು. ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಕೊಕೊ ಕೋಲಾ ಕಪ್ ಅನ್ನು ಎತ್ತಿ ಹಿಡಿಯಿತು.
2004ರ ವಿಬಿ ಸಿರೀಸ್ ನ ತ್ರಿಕೋನ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ವಿರುದ್ಧದ ನಾಲ್ಕನೇ ಪಂದ್ಯ ಸಹ ತೀವ್ರ ಕುತೂಹಲ ಮೂಡಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ಪರ ವಿವಿಎಸ್ ಲಕ್ಷ್ಮಣ್(106) ಹಾಗೂ ಯುವರಾಜ್ ಸಿಂಗ್(139)ರ ರನ್ ಗಳ ನೆರವಿನೊಂದಿಗೆ ಭಾರತ 4 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿತ್ತು. 297 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ಆಸ್ಟ್ರೇಲಿಯಾಗೆ ಮಳೆ ಕಾಡಿತು. ಇದರಿಂದಾಗಿ ಆಸ್ಟ್ರೇಲಿಯಾಗೆ ಗೆಲ್ಲಲು 34 ಓವರ್ ಗಳಲ್ಲಿ 225 ರನ್ ಗೆಲುವಿನ ಗುರಿ ನೀಡಲಾಯಿತು. ಆಡಂ ಗಿಲ್ಕ್ರಿಸ್ಟ್ 95 ಹಾಗೂ ಪಾಂಟಿಂಗ್ 42 ರನ್ ಗಳಿಂದಾಗಿ ಆಸ್ಟ್ರೇಲಿಯಾ ಅಂತಿಮವಾಗಿ ಒಂದು ಎಸೆತ ಇರುವಂತೆ ಗೆಲುವಿನ ನಗೆ ಬೀರಿತು.
2009ರಲ್ಲಿ ಹೈದರಾಬಾದ್ ನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಏಕದಿನ ಪಂದ್ಯ ಸಹ ರೋಚಕ ಕ್ಷಣ ಸೃಷ್ಟಿ ಮಾಡಿತ್ತು. ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ನಿಗದಿತ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 350 ರನ್ ಗಳಿಸಿತ್ತು. 351 ರನ್ ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಭಾರತ ಕೇವಲ 3 ರನ್ ಗಳಿಂದ ಪಂದ್ಯ ಕೈಚೆಲ್ಲಿತ್ತು. ಸಚಿನ್ ಅವರ 175 ರನ್ ಗಳ ಭರ್ಜರಿ ಬ್ಯಾಟಿಂಗ್ ನಡುವೆಯೂ ಭಾರತ ರೋಚಕ ಸೋಲು ಕಂಡಿತ್ತು. ಪಂದ್ಯ ಗೆಲ್ಲುವ ಅವಕಾಶವಿದ್ದರು ಬ್ಯಾಟ್ಸ್ ಮನ್ ಗಳ ಆತುರದ ನಿರ್ಧಾರದಿಂದಾಗಿ ಎರಡು ಎಸೆತ ಇರುವಂತೆ 347 ರನ್ ಗಳಿಗೆ ಆಲೌಟ್ ಆಗುವ ಮೂಲಕ ಆಸ್ಟ್ರೇಲಿಯಾಗೆ ಭಾರತ ಶರಣಾಯಿತು.
2003ರ ವಿಶ್ವಕಪ್ ಸೋಲಿಗೆ 2011ರ ವಿಶ್ವಕಪ್ ನಲ್ಲಿ ಸೇಡು ತೀರಿಸಿಕೊಂಡ ಭಾರತ
2011ರ ವಿಶ್ವಕಪ್ ಗೆಲ್ಲುವ ಮೂಲಕ ಭಾರತ ಎರಡನೇ ಬಾರಿಗೆ ವಿಶ್ವಕಪ್ ಗೆದ್ದ ಸಾಧನೆ ಮಾಡಿತು. ಈ ಟೂರ್ನಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲಿಸುವ ಮೂಲಕ ಭಾರತ ಸೇಡು ತೀರಿಸಿಕೊಂಡಿತು. ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ 260 ರನ್ ಗಳಿಸಿತ್ತು. ಭಾರತ 47.4 ಓವರ್ ನಲ್ಲಿ 261 ರನ್ ಗುರಿ ತಲುಪುವ ಮೂಲಕ ಗೆಲುವು ಸಾಧಿಸಿತ್ತು.
ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ರೋಹಿತ್ ಶರ್ಮಾ
2013ರಲ್ಲಿ ಭಾರತ ಪ್ರವಾಸದಲ್ಲಿದ್ದ ಆಸ್ಟ್ರೇಲಿಯಾ ತಂಡದ ವಿರುದ್ಧದ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿತ್ತು. ಈ ಸರಣಿಯಲ್ಲಿ ಭಾರತ ಪರ ರೋಹಿತ್ ಶರ್ಮಾ ಮೊದಲ ದ್ವಿಶತಕ ಸಿಡಿಸಿದ ಸಾಧನೆ ಮಾಡಿದ್ದರು. ಆಸ್ಟ್ರೇಲಿಯಾ ಎರಡನೇ ಬಾರಿಗೆ 350 ರನ್ ಟಾರ್ಗೆಟ್ ನೀಡಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನು 3 ಎಸೆತ ಇರುವಂತೆ 351 ರನ್ ಬಾರಿಸಿ ಗೆಲುವಿನ ಗುರಿ ಮುಟ್ಟಿತ್ತು.
ಭಾರತವನ್ನು ವೈಟ್ ವಾಷ್ ಮಾಡುವ ಆಸ್ಟ್ರೇಲಿಯಾ ಕನಸಿಗೆ ತಣ್ಣೀರೆರೆಚಿದ ಮನೀಶ್ ಪಾಂಡೆ
2016ರಲ್ಲಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಈ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಮೊದಲ ನಾಲ್ಕು ಪಂದ್ಯಗಳನ್ನು ಸೋಲು ಕಂಡಿತ್ತು. ಇನ್ನು ಅಂತಿಮ ಪಂದ್ಯದಲ್ಲಿ ಭಾರತವನ್ನು ವೈಟ್ ವಾಷ್ ಕುಖ್ಯಾತಿಯಿಂದ ಮನೀಶ್ ಪಾಂಡ್ಯೆ ತಪ್ಪಿಸಿದ್ದರು. ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ನಿಗದಿತ ಓವರ್ ನಲ್ಲಿ 330 ರನ್ ಗಳಿಸಿತ್ತು. 331 ರನ್ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಭದ್ರ ಬುನಾದಿ ಹಾಕಿಕೊಟ್ಟರು. ಈ ಇಬ್ಬರು ಆಟಗಾರರು ಔಟಾದ ನಂತರ ಉತ್ತಮವಾಗಿ ಬ್ಯಾಟ್ ಮಾಡಿದ ಮನೀಶ್ ಪಾಂಡೆ 81 ಎಸೆತಗಳಲ್ಲಿ 104 ರನ್ ಸಿಡಿಸಿ ಇನ್ನು ಎರಡು ಎಸೆತ ಇರುವಂತೆ ಜಯ ತಂದುಕೊಟ್ಟರು.