2007 ಟಿ20 ವಿಶ್ವಕಪ್ ಮೆಲುಕು
ನವದೆಹಲಿ: 2007ರ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತ ಸೋತಿದ್ದರೆ ಅಂದು ತಂಡದ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ ಏನು ಮಾಡಿರುತ್ತಿದ್ದರು ಎಂಬುದನ್ನು ಕೊನೆಯ ಓವರ್ ಎಸೆದ ಜೋಗಿಂದರ್ ಶರ್ಮಾ ಬಹಿರಂಗ ಪಡಿಸಿದ್ದಾರೆ.
2007ರ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಗೆಲುವು ಇಡೀ ಭಾರತೀಯ ಕ್ರೀಡಾಭಿಮಾನಿಗಳ ಮನದಲ್ಲಿ ಅಚ್ಚಳಿಯದ ಒಂದು ಪಂದ್ಯವಾಗಿದೆ. ಸತತ 28 ವರ್ಷಗಳ ವಿಶ್ವಕಪ್ ಪ್ರಶಸ್ತಿ ಬರವನ್ನು ನೀಗಿಸಿದ ಟೂರ್ನಿಯಾಗಿತ್ತು. ಅಲ್ಲದೆ ಮಹೇಂದ್ರ ಸಿಂಗ್ ಧೋನಿ ಎಂಬ ಅಭೂತಪೂರ್ವ ನಾಯಕತ್ವವನ್ನು ವಿಶ್ವಕ್ಕೆ ಪರಿಚಯಿಸಿದ ಟೂರ್ನಿಯದು. ಇಂದಿಗೂ ಕ್ರಿಕೆಟ್ ಇತಿಹಾಸದಲ್ಲಿ ತೀವ್ರ ಕುತೂಹಲ ಕೆರಳಿಸಿದ ಪಂದ್ಯಗಳಲ್ಲಿ ಪಟ್ಟಿಯಲ್ಲಿ ಪಾಕಿಸ್ತಾನ ವಿರುದ್ಧ ಈ ಪಂದ್ಯ ಕೂಡ ಸೇರುತ್ತದೆ.
ಈ ಅವಿಸ್ಮರಣೀಯ ಕ್ಷಣಗಳಿಗೆ ಇದೀಗ 10 ವರ್ಷ ತುಂಬಿದ್ದು, ಅಂದಿನ ಪಂದ್ಯದ ಒಂದು ಅದ್ಬುತ ಕ್ಷಣವನ್ನು ಇಲ್ಲಿ ಮೆಲುಕು ಹಾಕಲಾಗುತ್ತಿದೆ. ಅಂದಿನ ಫೈನಲ್ ಪಂದ್ಯ ಎರಡು ಕಾರಣಗಳಿದಾಗಿ ಭಾರತಕ್ಕೆ ಪ್ರಮುಖವಾಗಿತ್ತು. ಒಂದು 28 ವರ್ಷಗಳ ಬಳಿಕ ವಿಶ್ವಕಪ್ ಎತ್ತಿಹಿಡಿಯುವುದಕ್ಕಾಗಿ ಮತ್ತು ಬದ್ಧ ವೈರಿ ಪಾಕಿಸ್ತಾನದ ವಿರುದ್ಧದ ಪಂದ್ಯವಾಗಿದ್ದರಿಂದ ಈ ಪಂದ್ಯ ಹೈವೋಲ್ಟೇಜ್ ಪಂದ್ಯವಾಗಿತ್ತು. ಅಲ್ಲದೆ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಸೋತಿರಲಿಲ್ಲ. ಈ ಒಂದು ಕಾರಣದಿಂದಾಗಿಯೂ ಭಾರತ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿ ಸಿಲುಕಿತ್ತು.
ಅಂದು ಕೊನೆಯ ಓವರ್ ಅನ್ನು ಭಾರತದ ಜೋಗಿಂದರ್ ಶರ್ಮಾ ಎಸೆದಿದ್ದರು. ಅಲ್ಲದೆ ಭಾರತಕ್ಕೆ ಥ್ರಿಲ್ಲರ್ ಜಯ ತಂದಿತ್ತಿದ್ದರು. ಒಂದು ಹಂತದಲ್ಲಿ ಪಂದ್ಯವನ್ನು ಪಾಕಿಸ್ತಾನ ಗೆದ್ದೇ ಬಿಟ್ಟಿತು ಎನ್ನುವ ಸಂದರ್ಭದಲ್ಲಿ ಭಾರತಕ್ಕೆ ವಿಜಯಲಕ್ಷ್ಮಿ ಒಲಿದಿದ್ದಳು. ಒಂದು ವೇಳೆ ಈ ಪಂದ್ಯವನ್ನು ಭಾರತ ಸೋತಿದ್ದರೆ..ಈ ಬಗ್ಗೆ ಅಂದು ಕೊನೆಯ ಓವರ್ ಎಸೆದ ಜೋಗಿಂದರ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಕೊನೆಯ ಓವರ್ ನಲ್ಲಿ ಪಾಕ್ ಬ್ಯಾಟ್ಸಮನ್ ಮಿಸ್ಬಾ ಉಲ್ ಹಕ್ ಸಿಕ್ಸರ್ ಸಿಡಿಸಿದ ಬಳಿಕ ಜೋಗಿಂದರ್ ಶರ್ಮಾ ಬಳಿ ಬಂದ ನಾಯಕ ಧೋನಿ, ಯೋಚಿಸಬೇಡ.. ನಿನಗೆ ಹೇಗೆ ಅನಿಸುತ್ತದೆಯೋ ಹಾಗೆ ಬೌಲ್ ಮಾಡು. ಒಂದೊಮ್ಮೆ ಸೋತರೆ ಸಂಪೂರ್ಣ ಹೊಣೆ ನಾನು ಹೊರುತ್ತೇನೆ ಎಂದು ಹೇಳಿದರಂತೆ..ಈ ಮಾತುಗಳೇ ನನಗೆ ಸ್ಪೂರ್ತಿ ನೀಡಿತು ಎಂದು ಜೋಗಿಂದರ್ ಹೇಳಿದ್ದಾರೆ.
2007ರ ಟಿ20 ವಿಶ್ವಕಪ್'ನ ಫೈನಲ್ ಪಂದ್ಯದಲ್ಲಿ ಬದ್ಧಶತ್ರುಗಳಾದ ಪಾಕಿಸ್ತಾನ ತಂಡದ ವಿರುದ್ಧ ಅಂತಿಮ ಓವರ್ ಎಸೆಯಲು ಧೋನಿ ಜೋಗಿಂದರ್ ಶರ್ಮಾ ಅವರ ಕೈಗೆ ಬಾಲ್ ನೀಡಿದ್ದರು. ಈ ನಿರ್ಧಾರ ನಿಜಕ್ಕೂ ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಶರ್ಮಾ ಎಸೆದ ಈ ಹಿಂದಿನ ಓವರ್ ನಲ್ಲಿ ಅತ್ಯಂತ ದುಬಾರಿಯಾಗಿದ್ದರು. ಪಂದ್ಯ ಗೆಲ್ಲಲು ಪಾಕಿಸ್ತಾನಕ್ಕೆ ಕೇವಲ 13 ರನ್ ಗಳ ಅವಶ್ಯಕತೆ ಇತ್ತು. ಈ ಹಂತದಲ್ಲಿ ಧೋನಿ ನಿರ್ಧಾರ ಹಲವರ ಆಕ್ರೋಶಕ್ಕೆ ಕಾರಣವಾಗಿತ್ತಾದರೂ, ಆ ಆಕ್ರೋಶ ಹೆಚ್ಚು ಸಮಯ ಇರಲಿಲ್ಲ.
ಕೊನೆಯ ಓವರ್ ನಲ್ಲಿ ಪಾಕಿಸ್ತಾನದ ಮಿಸ್ ಬಾ ಉಲ್ ಹಕ್ ಸಿಕ್ಸರ್ ಸಿಡಿಸುತ್ತಿದ್ದಂತೆಯೇ ಆ ತಂಡದ ಪಾಳಯದಲ್ಲಿ ಗೆದ್ದೇ ಬಿಟ್ಟೆವು ಎಂಬ ಭಾವನೆ ಮೂಡಿತ್ತು. ಆದರೆ ಬಳಿಕ ಜೋಗಿಂದರ್ ಶರ್ಮಾ ನಿಜಕ್ಕೂ ಮ್ಯಾಜಿಕ್ ಮಾಡಿ ಪಾಕಿಸ್ತಾನದ ಅಪಾಯಕಾರಿ ಬ್ಯಾಟ್ಸಮನ್ ಮಿಸ್ಬಾ ಉಲ್ ಹಕ್ ರನ್ನು ಔಟ್ ಮಾಡಿ ಭಾರತ ತಂಡವನ್ನು ಗೆಲ್ಲಿಸಿಕೊಟ್ಟಿದ್ದರು. ಆ ಮೂಲಕ 2 ದಶಕಗಳ ಬಳಿಕ ಟೀಂ ಇಂಡಿಯಾ ಮೊದಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದಿತ್ತು. ಕ್ರಿಕೆಟ್ ಇತಿಹಾಸದ ಮರೆಯದ ಪುಟಗಳಲ್ಲಿ ಈ ಪಂದ್ಯ ಅವಿಸ್ಮರಣೀಯವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos