ಹೈದರಾಬಾದ್: ಹನ್ನೊಂದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 9 ವಿಕೆಟ್ ಅಂತರದಿಂದ ಭರ್ಜರಿ ವಿಜಯ ಸಾಧಿಸಿದೆ.
ಶಿಖರ್ ಧವನ್ ಅವರ ಅದ್ಭುತ ಬ್ಯಾಟಿಂಗ್ ನಿಂದಾಗಿ ಹೈದರಾಬಾದ್ ಗೆ ಗೆಲುವು ಸುಲಭವಾಗಿ ದಕ್ಕಿದೆ.
ಮೊದಲು ಟಾಸ್ ಸೋತು ಬ್ಯಾಟಿಂಗ್ ಅವಕಾಶ ಪಡೆದ ರಾಜಸ್ಥಾನ ರಾಯಲ್ಸ್ ತಂಡ 20 ಓವರ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತ್ತು. ತಂಡದ ಪರವಾಗಿ ಸಂಜು ಸ್ಯಾಮ್ಸನ್ 49 ರನ್ ಗಳಿಸಿದ್ದೇ ಗರಿಷ್ಠ ರನ್ ಗಳಿಕೆ ಸಾಧನೆಯಾಗಿದ್ದು ಉಳಿದೆಲ್ಲಾ ಆಟಗಾರರು ಅಲ್ಪ ಮೊತ್ತಕ್ಕೆ ಔಟಾಗಿ ನಿರಾಶೆ ಮೂಡಿಸಿದ್ದರು.
ಹೈದರಾಬಾದ್ ತಂಡದ ಸಿದ್ದಾರ್ಥ್, ಶಕೀಬ್ ಅಲ್ ಹಸನ್ ತಲಾ 2 ವಿಕೆಟ್, ಭುವನೇಶ್ವರ್ ಕುಮಾರ್, ಬಿಲ್ಲಿ ಸ್ಟಾನ್ಲೇಕ್, ರಶೀದ್ ಕಾನ್ ತಲಾ ಒಂದೊಂದು ವಿಕೆಟ್ ಕಿತ್ತರು.
ಗೆಲ್ಲಲು 126 ರನ್‌ಗಳ ಸಾಧಾರಣ ಗುರಿ ಪಡೆದ ಹೈದರಾಬಾದ್ ಶಿಖರ್ ಧವನ್ (77*) ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಗೆಲುವಿನ ನಗು ಬೀರಿತ್ತು. ಧವನ್ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಗಳಿಸಿ ತಂಡಕ್ಕೆ ಉತ್ತಮ ಮುನ್ನಡೆ ತಂದುಕೊಟ್ಟರು.
ಇವರಿಗೆ ಜತೆಯಾದ ಇನ್ನೋರ್ವ ಆಟಗಾರ ಕೇನ್ ವಿಲಿಯಮ್ಸನ್ 35 ಎಸೆತಗಳಿಗೆ 36 ರನ್ ಗಳಿಸಿದರು.
ಇದಕ್ಕೂ ಮುನ್ನ ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಾಣಿಸಿಕೊಂಡ ವೃದ್ದಿಮಾನ್ ಸಹಾ ಐದು ರನ್ ಗಳಿಸುವಷ್ಟರಲ್ಲಿ ಜಯದೇವ್ ಉನದ್ಕಟ್ ಬೌಲಿಂಗ್ ಗೆ ಬಲಿಯಾದರು.
ಇಷ್ಟಾದರೂ ಸರಣಿಯ ಪ್ರಥಮ ಪಂದ್ಯದಲ್ಲಿ ಹೈದರಾಬಾದ್ ತಂಡ ಗೆಲುವಿನ ನಗೆ ಬೀರಿದರೆ ಎರಡು ವರ್ಷಗಳ ನಿಷೇಧದ ಬಳಿಕ ಐಪಿಎಲ್ ಗೆ ಹಿಂತಿರುಗಿರುವ ರಾಜಸ್ಥಾನ ತಂಡಕ್ಕೆ ಮೊದಲ ಪಂದ್ಯದಲ್ಲೇ ಸೋಲಿನ ಕಹಿ ಅನುಭವವಾಗುವಂತಾಗಿದೆ.
ಸಂಕ್ಷಿಪ್ತ ಸ್ಕೋರ್
ರಾಜಸ್ಥಾನ ರಾಯಲ್ಸ್ 125/9 (20.0 ಓವರ್)
ಸನ್‌ರೈಸರ್ಸ್ ಹೈದರಾಬಾದ್ 127/1 (15.5 ಓವರ್)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics