ಕ್ರಿಕೆಟ್

ಕೊಹ್ಲಿಯನ್ನು ನೋಡಿ ಕಲಿಯಿರಿ, ನಿಮ್ಮ ತಾಕತ್ ತೋರಿಸಿ: ಇಂಗ್ಲೆಂಡಿಗರಿಗೆ ಸಹಾಯಕ ಕೋಚ್ ಪೌಲ್ ತರಾಟೆ!

Vishwanath S
ನಾಟಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಮೊದಲೆರೆಡು ಟೆಸ್ಟ್ ಪಂದ್ಯಗಳನ್ನು ಟೀಂ ಇಂಡಿಯಾ ಸೋತಿದ್ದರು. ತಂಡದ ನಾಯಕ ವಿರಾಟ್ ಕೊಹ್ಲಿ ಮಾತ್ರ ತಮ್ಮ ಆತ್ಮ ಸ್ಥೈರ್ಯವನ್ನು ಕಳೆದುಕೊಳ್ಳದೇ ಪ್ರತಿ ಪಂದ್ಯದಲ್ಲೂ ಉತ್ತಮ ರನ್ ಪೇರಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. 
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 97 ರನ್ ಹಾಗೂ ದ್ವಿತೀಯ ಇನ್ನಿಂಗ್ಸ್ ನಲ್ಲಿ 103 ರನ್ ಬಾರಿಸಿದ್ದರು. ಇನ್ನು ಇದೇ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು ಭಾರತದ ವೇಗಿಗಳ ಮಾರಕ ದಾಳಿಗೆ ತತ್ತರಿಸಿದ್ದು 161 ರನ್ ಗಳಿಗೆ ತಂಡ ಆಲೌಟ್ ಆಗಿತ್ತು. 
ಈ ಹಿನ್ನೆಲೆಯಲ್ಲಿ ಮಾತನಾಡಿರುವ ಇಂಗ್ಲೆಂಡ್ ತಂಡದ ಸಹಾಯಕ ಕೋಚ್ ಪೌಲ್ ಫಾರ್ಬ್ರೇಸ್ ತಂಡದ ಆರಂಭಿಕ ಬ್ಯಾಟ್ಸ್ ಮನ್ ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೌದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಎಂತಹ ಸಂದರ್ಭದಲ್ಲೂ ಧೃತಿಗೆಡದೇ ಆಡುತ್ತಾರೆ. ಅವರನ್ನು ನೋಡಿ ಕಲಿಯಿರಿ, ನೀವು ನಿಮ್ಮ ತಾಕತ್ ಅನ್ನು ತೋರಿಸಿ ಎಂದು ಹೇಳಿದ್ದಾರೆ. 
ಒಬ್ಬ ಉತ್ತಮ ಆಟಗಾರನಿಂದ ಮತ್ತೊಬ್ಬ ಆಟಗಾರ ಕಲಿಯಬೇಕು ಎಂಬುದರ ಬಗ್ಗೆ ನಾನು ದೊಡ್ಡ ನಂಬಿಕೆ ಇಟ್ಟಿದ್ದೇನೆ. ಅದೇ ರೀತಿ ಕೊಹ್ಲಿ ಚೆಂಡುಗಳನ್ನು ಎಷ್ಟು ಸಮರ್ಥವಾಗಿ ನಿಭಾಯಿಸುತ್ತಾರೆ. ಅವರಿಂದ ಇಂಗ್ಲೆಂಡ್ ತಂಡದ ಬ್ಯಾಟ್ಸ್ ಮನ್ ಗಳು ಕಲಿಯಬೇಕಾದದ್ದೂ ಸಾಕಷ್ಟಿದೆ ಎಂದು ಹೇಳಿದ್ದಾರೆ. 
ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತ 352 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿದ್ದು ಇಂಗ್ಲೆಂಡ್ ಗೆ ಗೆಲ್ಲಲು 521 ರನ್ ಗಳ ಗುರಿ ನೀಡಿದೆ. ಇನ್ನು ಮೂರನೇ ದಿನದಾಟದಂತ್ಯಕ್ಕೆ ಇಂಗ್ಲೆಂಡ್ ವಿಕೆಟ್ ಕಳೆದುಕೊಳ್ಳದೇ 23 ರನ್ ಗಳಿಸಿದೆ.
SCROLL FOR NEXT