ಕೊಹ್ಲಿ ಮತ್ತು ಪೈನೆ ವಾಕ್ಸಮರ
ಪರ್ತ್: ಕ್ರಿಕೆಟ್ ಅಂಗಳದಲ್ಲಿ ವಾಕ್ಸಮರ ಸಾಮಾನ್ಯವೇ ಆದರೂ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಆಟಗಾರರ ವಾಕ್ಸಮರ ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಆಸಿಸ್ ಪ್ರವಾಸದ ಆರಂಭಕ್ಕೂ ಮುನ್ನ ಉಭಯ ತಂಡಗಳ ಆಟಗಾರರೂ ಸ್ಲೆಡ್ಜಿಂಗ್ ಮಾಡುವುದಿಲ್ಲ ಎಂದು ಶಪಥ ಮಾಡಿದ್ದರು. ಸ್ಲೆಡ್ಜಿಂಗ್ ನಿಂದಲೇ ಕುಖ್ಯಾತಿ ಪಡೆದಿರುವ ಆಸ್ಟ್ರೇಲಿಯಾ ಮತ್ತು ಕೆಣಕಿದ್ರೆ ಉತ್ತರ ಕೊಡದೇ ಬಿಡದ ಕೊಹ್ಲಿ ಸ್ಲೆಡ್ಜಿಂಗ್ ನಿಂದ ದೂರವಿರುತ್ತಾರಾ ಎಂಬ ದೊಡ್ಡ ಪ್ರಶ್ನೆ ಎದ್ದಿತ್ತು. ಆದರೆ ಇದೀಗ ಈ ಪ್ರಶ್ನೆಗೆ ಉತ್ತರ ದೊರೆತಿದ್ದು, ಸ್ಲೆಡ್ಜಿಂಗ್ ಬಿಟ್ಟು ಆಸ್ಟ್ರೇಲಿಯನ್ನರು ಆಟವಾಡುವುದಿಲ್ಲ, ತಮ್ಮನ್ನು ಕೆಣಕಿದ್ರೆ ವಿರಾಟ್ ಕೊಹ್ಲಿ ಕೂಡ ಸುಮ್ಮನಿರುವುದಿಲ್ಲ ಎಂಬುದು ಮತ್ತೆ ಸಾಬೀತಾಗಿದೆ.
ಇಂದು ನಾಲ್ಕನೇ ದಿನದ ಮೊದಲ ಸೆಷನ್ ನಲ್ಲಿ ಕ್ರೀಸ್ ನಲ್ಲಿದ್ದ ಟಿಮ್ ಪೈನೆ ವಿರಾಟ್ ಕೊಹ್ಲಿ ಅವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಉತ್ತಮವಾಗಿ ಆಡುತ್ತಿದ್ದ ಆಸ್ಟ್ಕೇಲಿಯಾ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ 200 ರನ್ ಗಳ ಮುನ್ನಡೆ ಪಡೆಯಿತು. ಅದೇ ಹುಮ್ಮಸ್ಸಿನಲ್ಲಿ ಆಸಿಸ್ ನಾಯಕ ಟಿಮ್ ಪೈನೆ ಕೊಹ್ಲಿ ಅವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ 'ನಿನ್ನೆ ನಡೆದ ವಾಕ್ಸಮರದಲ್ಲಿ ನೀನು ಸೋತಿದ್ದೆ. ಇಂದೇಕೆ ಇಷ್ಟು ಶಾಂತವಾಗಿದ್ದೀಯಾ' ಎಂದು ಕೆಣಕಿದ್ದಾರೆ.
ಇದಕ್ಕೆ ತಮ್ಮದೇ ಆದ ಧಾಟಿಯಲ್ಲಿ ತಿರುಗೇಟು ನೀಡಿದ ಕೊಹ್ಲಿ, 'ನೀನು ಕೆಣಕಿದ್ರೆ ಸರಣಿ 2-0 ಆಗಲಿದೆ' ಎಂದು ತಿರುಗೇಟು ನೀಡಿದ್ದಾರೆ. ಇದಕ್ಕೆ ಉತ್ತರಿಸಿದ ಪೈನೆ, 'ಮೊದಲು ಬ್ಯಾಟಿಂಗ್ ಮಾಡು ನೋಡೋಣ' ಎನ್ನುವ ಧಾಟಿಯಲ್ಲಿ ಉತ್ತರಿಸಿದ್ದಾರೆ. ವಾಕ್ಸಮರ ತಾರಕ್ಕೇರುತ್ತಿದೆ ಎನ್ನುವಾಗಲೇ ಆನ್ ಫೀಲ್ಡ್ ಅಂಪೈರ್ ಗಫೆ ಅವರು ಮಧ್ಯ ಪ್ರವೇಶ ಮಾಡಿ, 'ಸಾಕುಮಾಡಿ ನಿಮ್ಮ ಮಾತು.. ನೀವಿಬ್ಬರೂ ತಂಡದ ನಾಯಕರು. ಕ್ರಿಕೆಟ್ ಆಡುವದರತ್ತ ಗಮನ ಹರಿಸಿ' ಎಂದು ಪರಿಸ್ಥಿತಿ ಶಾಂತಗೊಳಿಸಿದ್ದಾರೆ.
ಇವಿಷ್ಟೂ ಮೈದಾನದಲ್ಲಿ ಅಳವಡಿಸಲಾಗಿದ್ದ ಸ್ಟಂಪ್ ಮೈಕ್ ನಲ್ಲಿ ದಾಖಲಾಗಿದ್ದು, ಈ ಆಡಿಯೋ ಮತ್ತು ವಿಡಿಯೋ ವೈರಲ್ ಆಗುತ್ತಿದೆ.