ಕ್ರಿಕೆಟ್

160 ಕೋಟಿ ಪಾವತಿ ಮಾಡಿ ಇಲ್ಲವೇ 2023 ರ ವಿಶ್ವಕಪ್ ಆಯೋಜನೆ ಬಿಡಿ: ಬಿಸಿಸಿಐಗೆ ಐಸಿಸಿ ಖಡಕ್ ಆದೇಶ!

Srinivas Rao BV
ನವದೆಹಲಿ: 2016 ರ ಟಿ20 ವಿಶ್ವಕಪ್ ನ್ನು ಭಾರತದಲ್ಲಿ ಆಯೋಜಿಸಿದ್ದಾಗ ತೆರಿಗೆ ವಿನಾಯಿತಿ ದೊರಕದೇ ಇದ್ದ ಹಿನ್ನೆಲೆಯಲ್ಲಿ ಹೊರೆಯಾಗಿ ಪರಿಣಮಿಸಿದ್ದ ಹೆಚ್ಚುವರಿ ಮೊತ್ತವನ್ನು ಡಿ.31 ಒಳಗಾಗಿ ಪಾವತಿ ಮಾಡಲು ಬಿಸಿಸಿಐಗೆ ಐಸಿಸಿ ಕಟ್ಟುನಿಟ್ಟಿನ ಆದೇಶ ನೀಡಿದೆ. 
ತೆರಿಗೆ ವಿನಾಯಿತಿ ಸಿಗದೇ ಇದ್ದ ಹಿನ್ನೆಲೆಯಲ್ಲಿ 160 ಕೋಟಿ ರೂಪಾಯಿ ಪಾವತಿ ಮಾಡಿ, ಇಲ್ಲದೇ ಇದ್ದರೆ 2023 ರ 50 ಓವರ್ ವಿಶ್ವಕಪ್ ಹಾಗೂ 2021 ರ ಚಾಂಪಿಯನ್ಸ್ ಟ್ರೋಫಿ ಆಯೋಜನೆಯನ್ನು ಬಿಟ್ಟುಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಶಶಾಂಕ್ ಮನೋಹರ್ ಅವರ ನೇತೃತ್ವದ ಐಸಿಸಿ ಬಿಸಿಸಿಐ ಗೆ ಈ ಸೂಚನೆ ನೀಡಿದೆ. 2016 ರಲ್ಲಿ ಟಿ20 ವಿಶ್ವಕಪ್ ನ್ನು ಭಾರತದಲ್ಲಿ ಆಯೋಜನೆ ಮಾಡಿದ್ದ ಐಸಿಸಿಗೆ ಬಂದ ಆದಾಯಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ತೆರಿಗೆ ವಿನಾಯಿತಿ ಸಿಕ್ಕಿರಲಿಲ್ಲ. ತೆರಿಗೆ ವಿನಾಯಿತಿ ದೊರಕಿಸಿಕೊಡುವ ಹೊಣೆ ಆತಿಥೇಯ ಮಂಡಳಿಯಾದ್ದಾಗಿರುತ್ತದೆ ಎಂದು ಐಸಿಸಿ ಹೇಳಿದ್ದು, ಬಿಸಿಸಿಐ ಗೆ 160 ಕೋಟಿ ಪಾವತಿ ಮಾಡುವಂತೆ ಹೇಳಿದೆ. ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಸಿಒಎ ಗೆ ಈಗ ಐಸಿಸಿಗೆ 160 ಕೋಟಿ ರೂಪಾಯಿ ಪಾವತಿ ಮಾಡುವುದಕ್ಕೆ 10 ದಿನಗಳ ಕಾಲಾವಕಾಶ ಇದೆ. 
ಐಸಿಸಿ ಟೂರ್ನಮೆಂಟ್ ಗಳನ್ನು ಪ್ರಸಾರ ಮಾಡುವುದಕ್ಕೆ ಐಸಿಸಿ ಹಕ್ಕು ಪಡೆದಿದ್ದ ಸ್ಟಾರ್ ಟಿವಿ ಸಹ ಐಸಿಸಿಗೆ ಹಣ ಪಾವತಿ ಮಾಡುವುದಕ್ಕೂ ಮುನ್ನ ತೆರಿಗೆ ಕಡಿತಗೊಳಿಸಿ ಪಾವತಿ ಮಾಡಿತ್ತು. ಇದರಿಂದ ತನಗೆ ಕೈತಪ್ಪಿ ಹೋದ ಹಣವನ್ನು ಭಾರತೀಯ ಮಂಡಳಿಯಿಂದ ಪಡೆಯುವುದಕ್ಕೆ ಐಸಿಸಿ ಒತ್ತಡ ಹೇರುತ್ತಿದೆ. 
ಒಂದು ವೇಳೆ ಒತ್ತಡದ ಹೊರತಾಗಿಯೂ ಬಿಸಿಸಿಐ ಪಾವತಿ ಮಾಡಲು ನಿರಾಕರಿಸಿದರೆ ಐಸಿಸಿ ತನಗೆ ಬರಬೇಕೆಂದು ಹೇಳುತ್ತಿರುವ ಮೊತ್ತವನ್ನು ಪ್ರಸಕ್ತ ವರ್ಷದ ಭಾರತದ ಆದಾಯ ಹಂಚಿಕೆಯಲ್ಲಿ ಕಡಿತಗೊಳಿಸುತ್ತದೆ. ಆದರೆ ಇದ್ಯಾವುದಕ್ಕೂ ಜಗ್ಗದ ಬಿಸಿಸಿಐ ಒಂದು ವೇಳೆ ಐಸಿಸಿ ಪ್ರತಿರೋಧವನ್ನು ಲೆಕ್ಕಿಸದೇ ಮುಂದುವರೆದದ್ದೇ ಆದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಈ ವರೆಗೂ ಹೇಳಿಕೊಂಡು ಬಂದಿದೆ.
SCROLL FOR NEXT