ಮೆಲ್ಬೋರ್ನ್: ಮೊದಲ ಇನ್ನಿಂಗ್ಸ್ ನಲ್ಲಿ ರೋಹಿತ್ ರನ್ನು ಕೆಣಕುವ ಮೂಲಕ ಅವರ ಗಮನ ಬೇರೆಡೆ ಸೆಳೆಯಲು ಯತ್ನ ಮಾಡಿದ್ದ ಆಸಿಸ್ ನಾಯಕ ಟಿಮ್ ಪೈನೆಗೆ ಭಾರತದ ರೋಹಿತ್ ಶರ್ಮಾ ಖಡಕ್ ಟಾಂಗ್ ನೀಡಿದ್ದು, ಪೈನೆ ಶತಕ ಸಿಡಿಸಿದರೆ ಮುಂಬೈ ತಂಡಕ್ಕೆ ಅವರನ್ನು ಖರೀದಿಸುವಂತೆ ಹೇಳುತ್ತೇನೆ ಎಂದು ಹೇಳಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ 2ನೇ ದಿನದಾಟದ ವೇಳೆ ರೋಹಿತ್ ವಿರುದ್ಧ ಸ್ಲೆಡ್ಜಿಂಗ್ ನಡೆಸಿದ್ದ ಆಸೀಸ್ ನಾಯಕ ಪೈನೆ ಮಾತಿಗೆ ಶರ್ಮಾ ತಿರುಗೇಟು ನೀಡಿದ್ದಾರೆ. 3ನೇ ದಿನದಾಟದ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ರೋಹಿತ್, ಬ್ಯಾಟಿಂಗ್ ವೇಳೆ ಪೈನೆ ಹಾಗೂ ಫಿಂಚ್ ನಡುವಿನ ಸಂಭಾಷಣೆಯನ್ನು ಕೇಳಿಸಿಕೊಂಡಿದ್ದೆ. ಆದರೆ ಆ ಸಂದರ್ಭದಲ್ಲಿ ನನ್ನ ಆಟದ ಬಗ್ಗೆ ಮಾತ್ರ ಗಮನ ಹರಿಸಿದ್ದೆ. ಆದರೆ ಈ ಪಂದ್ಯದಲ್ಲಿ ಪೈನೆ ಶತಕ ಸಿಡಿಸಿದರೆ ಮುಂಬೈ ತಂಡಕ್ಕೆ ಪೈನೆರನ್ನು ಖರೀದಿ ಮಾಡಲು ತಂಡದ ಮೆಂಟರ್ ಅವರೊಂದಿಗೆ ಮಾತನಾಡುತ್ತೇನೆ. ಪೈನೆ ಮುಂಬೈ ತಂಡದ ಅಭಿಮಾನಿಯಂತೆ ಕಾಣುತ್ತಾರೆ ಎಂದು ಹೇಳುವ ಮೂಲಕ ಟಾಂಗ್ ನೀಡಿದ್ದಾರೆ.
2ನೇ ದಿನದಾಟ ವೇಳೆ ಪೈನೆ ವಿಕೆಟ್ ಹಿಂದೆ ನಿಂತು ರೋಹಿತ್ ಶರ್ಮಾರನ್ನು ಕೆಣಕುವಂತೆ ಮಾತನಾಡಿದ್ದರು. ನೀನು ಸಿಕ್ಸರ್ ಸಿಡಿಸಿದರೆ ನಾನು ಮುಂಬೈ ತಂಡಕ್ಕೆ ಬೆಂಬಲ ನೀಡುತ್ತೇನೆ. ನಾನು ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ಅಥವಾ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುವ ಬಗ್ಗೆ ಗೊಂದಲದಲ್ಲಿದ್ದು, ಈಗ ನೀನು ಸಿಕ್ಸರ್ ಬಾರಿಸಿದರೆ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಸ್ಟ್ರೈಕ್ ನಲ್ಲಿದ್ದರೆ, ರಾಜಸ್ಥಾನ ರಾಯಲ್ಸ್ ತಂಡದ ರಹಾನೆ ಮತ್ತೊಂದು ಬದಿಯಲ್ಲಿ ಇದ್ದರು.
ಆಸೀಸ್ ನಾಯಕ ಪೈನೆ ಅವರು ಸ್ಲೆಡ್ಜಿಂಗ್ ಬಗ್ಗೆ ಟೀಂ ಇಂಡಿಯಾ ಅಭಿಮಾನಿಗಳು ಟ್ರೋಲ್ ಮಾಡಿ ಕಾಲೆಳೆದಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಡುವ ವೇಳೆ ಮೌನವಾಗಿರುವ ಪೈನೆ, ಕೊಹ್ಲಿ ಔಟಾಗುತ್ತಿದಂತೆ ಮಾತನಾಡಲು ಆರಂಭಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.